Sunday, 17th November 2024

Mohammed Shami: ಶಮಿ ವಿರುದ್ಧ ಗಂಭೀರ ಆರೋಪ; ಸಾಬೀತಾದಲ್ಲಿ 2 ವರ್ಷ ನಿಷೇಧ

ನವದೆಹಲಿ: ಗಾಯಕ್ಕೆ ತುತ್ತಾಗಿ ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿರುವ ಭಾರತ ತಂಡದ ಪ್ರಧಾನ ವೇಗಿ ಮೊಹಮ್ಮದ್‌ ಶಮಿ(Mohammed Shami) ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಶಮಿ ಅವರು ತಮ್ಮ ವಯಸ್ಸಿನ ವಿಚಾರವಾಗಿ ಸುಳ್ಳು ಪ್ರಮಾಣ ಪತ್ರವನ್ನು ನೀಡಿ ಭಾರತ ತಂಡದ ಪರ ಆಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಶಮಿಯ ಡ್ರೈವಿಂಗ್ ಲೈಸನ್ಸ್(Mohammed Shami driving license) ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಮಧ್ಯಪ್ರವೇಶ ವಿರುದ್ಧದ ರಣಜಿ ಪಂದ್ಯವನ್ನಾಡುವ ಮೂಲಕ ಕ್ರಿಕೆಟ್‌ಗೆ ಭರ್ಜರಿ ಪುನರಾಗಮನ ಸಾರಿರುವ ಶಮಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಸರಣಿಯ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗಲೇ ಶಮಿ ವಿರುದ್ಧ ಮೋಹನ್ ಕೃಷ್ಣ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

ಶಮಿಯ ಈ ಡ್ರೈವಿಂಗ್ ಲೈಸನ್ಸ್ ಫೋಟೊ ಹಂಚಿಕೊಂಡು, ಶಮಿಗೆ 42 ವರ್ಷಗಳಾಗಿದೆ. ಆದರೆ ಅವರು ಇದನ್ನು ಮರೆಮಾಚಿ 34 ವರ್ಷ ಎಂದು ಹೇಳುತ್ತಿದ್ದಾರೆ, ಈ ಬಗ್ಗೆ ಬಿಸಿಸಿಐ ಸೂಕ್ತ ತನಿಖೆ ಮಾಡಬೇಕೆಂದು ಮೋಹನ್ ಕೃಷ್ಣ ಆಗ್ರಹಿಸಿದ್ದಾರೆ.

ಇದನ್ನೂ ಓದಿ BGT 2024-25: ಅಡಿಲೇಡ್‌ ಟೆಸ್ಟ್‌ನಲ್ಲಿ ಮೊಹಮ್ಮದ್‌ ಶಮಿ ಕಣಕ್ಕೆ

ಬಿಸಿಸಿಐ ನಿಯಮಗಳ ಪ್ರಕಾರ, ವಯಸ್ಸನ್ನು ಮರೆಮಾಚುವುದು ಗಂಭೀರ ಅಪರಾಧವಾಗಿದೆ. ನೋಂದಾಯಿತ ಕ್ರಿಕೆಟಿಗರು ಖುದ್ದಾಗಿ ತಾವೇ ವಯಸ್ಸಿನ ವಿಚಾರವಾಗಿ ಸುಳ್ಳು ಹೇಳಿರುವುದನ್ನು ಒಪ್ಪಿಕೊಳ್ಳದೇ ಇದ್ದರೆ ಎರಡು ವರ್ಷಗಳ ನಿಷೇಧದ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಆಟಗಾರರು ನೋಂದಣಿ ಮಾಡಿಸದೆ ವಯೋವರ್ಗ ವಿಚಾರದಲ್ಲಿ ತಪ್ಪು ಮಾಡಿರುವುದಾಗಿ ಸಿಕ್ಕಿಬಿದ್ದಲ್ಲಿ 2 ವರ್ಷಗಳ ನಿಷೇಧ ಶಿಕ್ಷೆ ಅನುಭವಿಸುವಂತಾಗುತ್ತದೆ. ಈ ನಿಷೇಧ ಅವಧಿಯಲ್ಲಿ ಬಿಸಿಸಿಐನ ಮತ್ತು ಆಯಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಆಯೋಜನೆಯ ಯಾವುದೇ ವಯೋವರ್ಗಗಳ ಟೂರ್ನಿಗಳಲ್ಲಿ ಅವರಿಗೆ ಆಡುವ ಅವಕಾಶ ಸಿಗುವುದಿಲ್ಲ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಅವರ ಕಾರ್ಯವಾಧಿಯಲ್ಲಿ ಈ ಕಟ್ಟು ನಿಟ್ಟಿನ ನಿಯಮ ಜಾರಿಗೆ ತರಲಾಗಿತ್ತು.