Sunday, 17th November 2024

BPL Card: ಅನರ್ಹರ ಬಿಪಿಎಲ್ ಕಾರ್ಡ್‌ಗಳು ರದ್ದಾಗಲಿವೆ: ಸಿಎಂ ಸಿದ್ದರಾಮಯ್ಯ

BPL Card

ಬಾಗಲಕೋಟೆ: ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು (BPL Card) ಮಾತ್ರ ವಾಪಸ್ ಪಡೆಯಲಾಗುತ್ತದೆ, ಅರ್ಹರ ಕಾರ್ಡ್‌ಗಳಿಗೆ ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ಆಹಾರ ಇಲಾಖೆ ಪರಿಶೀಲಿಸುತ್ತಿದ್ದು, ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಅನರ್ಹ ರೇಷನ್‌ ಕಾರ್ಡ್‌ಗಳನ್ನು ರದ್ದು ಮಾಡುತ್ತಿರುವ ಬಗ್ಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆ ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಪತ್ರಕರ್ತರು ಸರಿಯಾಗಿ ತಿಳಿದುಕೊಂಡು ಬರಬೇಕು. ಅನರ್ಹರ ಕಾರ್ಡ್‌ಗಳನ್ನು ವಾಪಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ.

ಆದಾಯ ತೆರಿಗೆ ಪಾವತಿಸುವವರಿಗೂ, ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ ಎಂದು ಮರು ಪ್ರಶ್ನಿಸಿದ ಸಿಎಂ, ಯಾವ ಕಾರ್ಡ್‌ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಸ್ ಪಡೆಯಬಹುದು. ಅರ್ಹರು ವಂಚಿತರಾಗಬಾರದು ಎಂದರು.

40% ಕಮಿಷನ್ ಆರೋಪದಿಂದ ಮುಕ್ತರಾಗಿದ್ದೇವೆ ಎನ್ನುವ ಆರ್.ಅಶೋಕ್ ಮಾತಿನ ಬಗ್ಗೆ ಉತ್ತರಿಸಿ, ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಕೊಟ್ಟ ದೂರಿನ ಆಧಾರದಲ್ಲಿ ನಾವು ತನಿಖೆಗೆ ಸೂಚಿಸಿದ್ದೆವು. ಸಾಕ್ಷ್ಯಾಧಾರಗಳ ಕೊರತೆಯಿಂದ ಕೊಲೆ ಆರೋಪಿಗಳು ಬಿಡುಗಡೆ ಆಗುತ್ತಾರೆ. ಹಾಗಂತ ಕೊಲೆಯೇ ಆಗಿಲ್ಲ ಅಂದರೆ ಅದರಲ್ಲಿ ಅರ್ಥ ಇಲ್ಲ. ಕೊಲೆ ನಡೆದಿರುತ್ತದೆ. ಸಾಕ್ಷಿಗಳು ಸಾಕ್ಷ್ಯ ಹೇಳಿರುವುದಿಲ್ಲ ಅಷ್ಟೆ ಅಂದರು.

ಆಪರೇಷನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಲಾಗಿತ್ತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ” ಬಿಜೆಪಿಯವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದರು, ವಿಫಲರಾದರು ಎಂದರು.

ಈ ಸುದ್ದಿಯನ್ನೂ ಓದಿ | Israel-Hezbollah war: ಇಸ್ರೇಲ್ ಪ್ರಧಾನಿ ನೆತನ್ಯಾಹು ನಿವಾಸದ ಮೇಲೆ ಮತ್ತೆ ಹೆಜ್ಬುಲ್ಲಾ ಅಟ್ಯಾಕ್‌- ವಿಡಿಯೊ ಇದೆ

ಎಪಿಎಲ್‌ ಕಾರ್ಡ್‌ಗಳ ರದ್ದತಿಗೆ ನಿರ್ದೇಶನ ನೀಡಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಬೆಂಗಳೂರು: ಎಪಿಎಲ್ ಕಾರ್ಡುಗಳ ರದ್ದತಿಗೆ ಯಾವುದೇ ಸೂಚನೆ ನೀಡಿಲ್ಲ ಮತ್ತು ಈವರೆಗೆ ಯಾವುದೇ ಎಪಿಎಲ್ ಕಾರ್ಡುಗಳನ್ನು (Ration Card) ರದ್ದುಗೊಳಿಸಿಲ್ಲ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ 22 ಲಕ್ಷ ರೇಷನ್ ಕಾರ್ಡುಗಳು ರದ್ದಾಗಿವೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಕೆಲವು ದಿನಪತ್ರಿಕೆಗಳಲ್ಲಿ ಇ – ಕೆವೈಸಿ ನೋಂದಣಿ ಮಾಡಿಕೊಳ್ಳದ ಎಪಿಎಲ್ ಕಾರ್ಡುಗಳನ್ನು (APL Card) ರದ್ದುಗೊಳಿಸಲಾಗುತ್ತಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ.

ರಾಜ್ಯದಲ್ಲಿ 2024ರ ಸೆಪ್ಟೆಂಬರ್ 2ರ ವರೆಗೆ 25,13,798 ಎಪಿಎಲ್ ಕಾರ್ಡುಗಳಿದ್ದವು. ನವೆಂಬರ್ 16 ರಂದು 25,62,566 ಕಾರ್ಡುಗಳಿವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಕಾರ್ಯ ಕೈಗೊಂಡ ಪರಿಣಾಮ ಕೆಲವು ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಿರುವುದರಿಂದ 48,768 ಕಾರ್ಡುಗಳು ಹೆಚ್ಚಳವಾಗಿವೆ.

ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಸುದ್ದಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿದ್ದು, ಈ ರೀತಿಯ ಕ್ರಮವನ್ನು ಈವರೆಗೆ ಕೈಗೊಂಡಿರುವುದಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತಿದ್ದೇವೆ ಎಂದು ತಿಳಿಸಿದೆ.