Sunday, 17th November 2024

Surat Accident: ರ್‍ಯಾಶ್ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಮೇಲೆ ಟೆಂಪೋ ಹರಿಸಿದ ಚಾಲಕ; ವಿಡಿಯೊ ಇದೆ

Surat Accident

ಸೂರತ್‌: ಅತೀ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದ ಟೆಂಪೋ ಚಾಲಕನೊಂದಿಗೆ ವಾಗ್ವಾದಕ್ಕಿಳಿದಿದ್ದ ವ್ಯಕ್ತಿಯ ಮೇಲೆ ಟೆಂಪೋ ಹರಿಸಿದ ಅಮಾನುಷ ಘಟನೆ ಗುಜರಾತಿನ (Gujarat) ಸೂರತ್‌ನಲ್ಲಿ ನಡೆದಿದೆ. ತಡೆಯಲು ಯತ್ನಿಸಿದ ಮಗನ್ನು ಸಲ್ಪ ದೂರ ಟೆಂಪೋ ಎಳೆದೊಯ್ದಿದೆ. ಘಟನೆಯಲ್ಲಿ ವಾಹನ ಮೈಮೇಲೆ ಹರಿದ ವ್ಯಕ್ತಿ ಮೃತ ಪಟ್ಟಿದ್ದಾರೆ. ಅಪಘಾತದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟೆಂಪೋ ಚಾಲಕನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮಯೂರ್ ಮೆರ್ (39) ಎಂದು ಮೂಲಗಳು ತಿಳಿಸಿವೆ.

ಶನಿವಾರ (ನ. 16) ಮಧ್ಯಾಹ್ನ 3:30ರ ಸುಮಾರಿಗೆ ರತ್ನಮಾಲಾ ಅಡ್ಡರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ವ್ಯಕ್ತಿಯನ್ನು 56 ವರ್ಷದ ಜಿತೇಂದ್ರ ಕಂಠಾರಿಯಾ ಎಂದು ಗುರುತಿಸಲಾಗಿದೆ. ಕಂಠಾರಿಯಾ ಮತ್ತು ಅವರ ಮಗ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿದ್ದಾಗ ಟೆಂಪೋ ಅವರ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ. 

ಅತೀ ವೇಗದಲ್ಲಿ ಟೆಂಪೋ ಚಲಾಯಿಸುತ್ತಿದ್ದ ಟೆಂಪೋ ಚಾಲಕನ ಜತೆ ಇವರು ವಾಗ್ವಾದ ನಡೆಸಿದ್ದಾರೆ. ನಂತರ ಚಾಲಕ ಇವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ತನ್ನ ವಾಹನವನ್ನು ಕಂಠಾರಿಯಾ ಮೇಲೆ ಹರಿಸಿದ್ದಾನೆ. ಘಟನೆಯಲ್ಲಿ ಜಿತೇಂದ್ರ ಕಂಠಾರಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟೆಂಪೋ ಚಾಲಕನನ್ನು ಹಿಡಿದು ನಿಲ್ಲಿಸಲು ಯತ್ನಿಸಿದ ಅವರ ಮಗನನ್ನು ಹಾಗೆಯೇ ಚಾಲನೆಯಲ್ಲಿದ್ದ ವಾಹನದಲ್ಲಿ ಎಳೆದೊಯ್ದಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಅಹಮದಾಬಾದ್‌ನಲ್ಲಿ ವಿದ್ಯಾರ್ಥಿಯ ಕೊಲೆ

ಅಹಮದಾಬಾದ್‌ನ ಪ್ರಮುಖ ಬ್ಯುಸಿನೆಸ್ ಸ್ಕೂಲ್‌ನ 23 ವರ್ಷದ ವಿದ್ಯಾರ್ಥಿಯೊಬ್ಬನನ್ನು ಅಪರಿಚಿತ ಕಾರು ಚಾಲಕನೊಬ್ಬ ಇರಿದು ಕೊಲೆ ಮಾಡಿದ್ದಾನೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ. ಭಾನುವಾರ ರಾತ್ರಿ 11.30ರ ಸುಮಾರಿಗೆ ಮುದ್ರಾ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ಸ್(ಎಂಐಸಿಎ)ನ ಇಬ್ಬರು ವಿದ್ಯಾರ್ಥಿಗಳು ಬೇಕರಿ ಅಂಗಡಿಯಲ್ಲಿ ಕೇಕ್ ಖರೀದಿಸಿ ತಮ್ಮ ಸಂಸ್ಥೆಯ ಹಾಸ್ಟೆಲ್‌ಗೆ ಬೈಕ್ ನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ : Bishnoi Gang: ಸಲ್ಮಾನ್‌ನಿಂದ ದೂರ ಇರಿ…ನಿಮ್ಮ ಮೇಲೂ ನಮ್ಮ ನಿಗಾ ಇದೆ; ಸಂಸದ ಪಪ್ಪು ಯಾದವ್‌ಗೂ ಬಿಷ್ಣೋಯ್‌ ಗ್ಯಾಂಗ್‌ ಬೆದರಿಕೆ

ಹಾಸ್ಟೆಲ್‌ಗೆ ಹಿಂತಿರುಗುವಾಗ, ವಿದ್ಯಾರ್ಥಿಗಳು ಬೋಪಾಲ್ ಪ್ರದೇಶದ ಕ್ರಾಸ್‌ರೋಡ್‌ನಲ್ಲಿ ಅತಿ ವೇಗವಾಗಿ ರ್‍ಯಾಶ್ ಡ್ರೈವಿಂಗ್ ಮಾಡುತ್ತಿದ್ದ ಕಾರು ಚಾಲಕನೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ಕಾರ್ ಡ್ರೈವರ್ ಸುಮಾರು 200 ಮೀಟರ್ ವಿದ್ಯಾರ್ಥಿಗಳನ್ನು ಹಿಂಬಾಲಿಸಿ, ತನ್ನ ವಾಹನದಿಂದ ಚಾಕು ತೆಗೆದುಕೊಂಡು ಅವರಲ್ಲಿ ಒಬ್ಬ ವಿದ್ಯಾರ್ಥಿಗೆ ಇರಿದಿದ್ದಾನೆ. ಇರಿತದಿಂದ ಗಂಭೀರವಾಗಿ ಗಾಗೊಂಡಿದ್ದ ವಿದ್ಯಾರ್ಥಿ ಪ್ರಿಯಾಂಶು ಜೈನ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾನೆ.