Sunday, 17th November 2024

PDO Exam: ಪಿಡಿಒ ಪರೀಕ್ಷೆಯಲ್ಲಿ ಕೆಪಿಎಸ್‌ಸಿ ಮತ್ತೆ ಎಡವಟ್ಟು; ಪ್ರಶ್ನೆ ಪತ್ರಿಕೆ ಕೊರತೆ, ಮರು ಪರೀಕ್ಷೆಗೆ ಆಗ್ರಹ

PDO Exam

ಕಲಬುರಗಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO Exam) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆದ ಪರೀಕ್ಷೆಯಲ್ಲಿ ಕೆಪಿಎಸ್‌ಸಿ ಮಾಡಿದ ಯಡವಟ್ಟಿನಿಂದಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಎದುರಿಗೆ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆಯಿತು.

ನಗರದ ಗುಡ್ ಶೆಫರ್ಡ್ ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಸೃಷ್ಟಿಯಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ಪರೀಕ್ಷಾ ಕೇಂದ್ರದಲ್ಲಿ ಒಂದು ಕೋಣೆಗೆ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ‌ಅವಕಾಶ ನೀಡಲಾಗಿತ್ತು. ಆದರೆ, 24 ಪ್ರಶ್ನೆ ಪತ್ರಿಕೆಯ ಬದಲು ಕೇವಲ 12 ಪ್ರಶ್ನೆ ಪತ್ರಿಕೆ ಕಳುಹಿಸುವ ಮೂಲಕ ಕೆಪಿಎಸ್‌ಸಿ ಎಡವಟ್ಟು ಮಾಡಿದೆ.

ಅಲ್ಲದೇ, ನಿಗದಿತ ಸಮಯಕ್ಕಿಂತ 20 ನಿಮೀಷ ತಡವಾಗಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಣೆ ಮಾಡಿ ಗೊಂದಲ ಸೃಷ್ಟಿಸಿತು. ಇದರಿಂದ ರೊಚ್ಚಿಗೆದ್ದ ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ, ಮಧ್ಯಾಹ್ನ ನಡೆಯುವ ಪರೀಕ್ಷೆಗೆ ಹಾಜರಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿದರು.

ಸಿಂಧನೂರಿನ ಪರೀಕ್ಷಾ ಕೇಂದ್ರದಲ್ಲೂ ಭುಗಿಲೆದ್ದ ಆಕ್ರೋಶ

ಪಿಡಿಒ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ನಾವು ಪರೀಕ್ಷೆ ಬರೆಯಲ್ಲ ಎಂದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪ್ರಥಮ ದರ್ಜೆ ಕಾಲೇಜು ಮುಂಭಾಗ ರಸ್ತೆ ತಡೆದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.

ಪಿಡಿಒ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಣೆ ತಡವಾಗಿದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಕಾಲೇಜಿನಲ್ಲಿ ಕೇವಲ ಶೇ. 20 ರಷ್ಟು ಪರೀಕ್ಷಾರ್ಥಿಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ತಲುಪಿದ್ದು, ಇನ್ನುಳಿದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ದೊರೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | Surat Accident: ರ್‍ಯಾಶ್ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಮೇಲೆ ಟೆಂಪೋ ಹರಿಸಿದ ಚಾಲಕ; ವಿಡಿಯೊ ಇದೆ

ಸ್ಥಳಕ್ಕಾಗಮಿಸಿದ ಸಿಂಧನೂರು ತಹಸೀಲ್ದಾರ್ ಹಾಗೂ ಸಿಪಿಐ ದುರುಗಪ್ಪ ಪರಿಶೀಲನೆ ನಡೆಸಿದರು. ಪ್ರಶ್ನೆ ಪತ್ರಿಕೆ ತಡವಾಗಿ ನೀಡಿದ್ದಕ್ಕೆ 30 ನಿಮಿಷ ಹೆಚ್ಚಿಗೆ ಸಮಯ ನೀಡುವುದಾಗಿ ತಹಸೀಲ್ದಾರ್ ಹೇಳಿದರು. ಆದರೆ. ಆದರೆ, ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ನಾವು ಪರೀಕ್ಷೆ ಬರೆಯಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.