Sunday, 17th November 2024

Kailash Gahlot: ಕೈಲಾಶ್ ಗಹ್ಲೋಟ್ ರಾಜೀನಾಮೆ: ಆಪ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು ಸ್ವಾತಂತ್ರ್ಯ ದಿನಾಚರಣೆ

Kailash Gahlot

ನವದೆಹಲಿ: ಆಪ್ ಹಿರಿಯ ನಾಯಕ (AAP leader), ದೆಹಲಿ ಸಚಿವ (Delhi Minister) ಕೈಲಾಶ್ ಗಹ್ಲೋಟ್ (Kailash Gahlot) ಅವರು ಪಕ್ಷಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಮತ್ತು ಗಹ್ಲೋಟ್ ನಡುವೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲೇ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಬಗ್ಗೆ ಗಹ್ಲೋಟ್ ಮತ್ತು ಆಪ್ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಮದ್ಯ ನೀತಿ ಹಗರಣದ ಆರೋಪದಲ್ಲಿ ಜೈಲಿನಲ್ಲಿದ್ದ ಅಂದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ, ಧ್ವಜಾರೋಹಣ ಕಾರ್ಯವನ್ನು ಯಾರು ನೆರವೇರಿಸುವುದು ಎನ್ನುವ ಚರ್ಚೆಯಾಗಿತ್ತು. ಆಗ ದೆಹಲಿ ಶಿಕ್ಷಣ ಸಚಿವರಾಗಿದ್ದ ಅತಿಶಿ ಅವರು ಇದನ್ನು ನಿರ್ವಹಿಸಬೇಕು ಎಂದು ಕೇಜ್ರಿವಾಲ್ ನಿರ್ದೇಶಿಸಿದ್ದರು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮಧ್ಯಪ್ರವೇಶಿಸಿ ಈ ನಿರ್ದೇಶನವನ್ನು ಅಮಾನ್ಯವೆಂದು ಪರಿಗಣಿಸಿ, ದೆಹಲಿ ಗೃಹ ಸಚಿವ ಕೈಲಾಶ್ ಗಹ್ಲೋಟ್ ಅವರಿಗೆ ಧ್ವಜಾರೋಹಣ ನೆರವೇರಿಸಲು ನೇಮಿಸಿದ್ದರು.

ಲೆಫ್ಟಿನೆಂಟ್ ಗವರ್ನರ್ ಅವರ ಈ ನಿರ್ಧಾರವು ದೆಹಲಿ ಪೊಲೀಸ್ ಗೃಹ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ ಎಂಬ ತರ್ಕವನ್ನು ಹೊಂದಿತ್ತು, ಆದರೆ ಈ ಕ್ರಮವು ಆಪ್ ನೇತೃತ್ವದ ದೆಹಲಿ ಸರ್ಕಾರ ಮತ್ತು ಎಲ್ಆರ್ ಗವರ್ನರ್ ಕಚೇರಿಯ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿತ್ತು.

ಲೆಫ್ಟಿನೆಂಟ್ ಗವರ್ನರ್ ತಮ್ಮ ಅಧಿಕಾರವನ್ನು ದುರ್ಬಲಗೊಳಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ. ಅತಿಶಿ ಅವರು ಸಕ್ಸೇನಾ ಅವರ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು. ಗಹ್ಲೋಟ್ ಅವರು ಲೆಫ್ಟಿನೆಂಟ್ ಗವರ್ನರ್ ಅವರ ನಿರ್ದೇಶನದ ಅನುಸರಣೆ ಮಾಡಿದ್ದರಿಂದ ಕೇಜ್ರಿವಾಲ್ ಮತ್ತು ಎಎಪಿ ಜತೆಗಿನ ಅವರ ಸಂಬಂಧ ಹದಗೆಡುವಂತೆ ಮಾಡಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾನೂನು ಇಲಾಖೆಯನ್ನು ಗಹ್ಲೋಟ್‌ ಅವರಿಂದ ತೆಗೆದುಕೊಂಡು ಅತಿಶಿ ಅವರಿಗೆ ಹಸ್ತಾಂತರಿಸಲಾಯಿತು. ಇಲಾಖೆಯಲ್ಲಿ ಸಾಕಷ್ಟು ಕೆಲಸ ಬಾಕಿಯಿದ್ದು, ಹೀಗಾಗಿ ಅದನ್ನು ಗಹ್ಲೋಟ್‌ ಅವರಿಂದ ತೆಗೆದು ಹಾಕಲಾಯಿತು ಎನ್ನಲಾಗಿದೆ. ರಾಜೀನಾಮೆ ಪತ್ರದಲ್ಲಿ ಈ ಬಗ್ಗೆ ಗಹ್ಲೋಟ್ ಏನು ಹೇಳಿಲ್ಲ.

ಅವರು ತಮ್ಮ ಪತ್ರದಲ್ಲಿ, ಶಾಸಕ ಮತ್ತು ಸಚಿವರಾಗಿ ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ಮತ್ತು ಪ್ರತಿನಿಧಿಸುವ ಗೌರವವನ್ನು ನೀಡಿದ್ದಕ್ಕಾಗಿ ನಾನು ನಿಮಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ಆದರೆ, ಅದೇ ಸಮಯದಲ್ಲಿ ಇಂದು ಆಮ್ ಆದ್ಮಿ ಪಕ್ಷವು ಎದುರಿಸುತ್ತಿರುವುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ರಾಜಕೀಯ ಮಹತ್ವಾಕಾಂಕ್ಷೆಗಳು ಜನರ ಮೇಲಿನ ನಮ್ಮ ಬದ್ಧತೆಯನ್ನು ಹಿಂದಿಕ್ಕಿವೆ. ಅವರಿಗೆ ನೀಡಿರುವ ಅನೇಕ ಭರವಸೆಗಳನ್ನು ಈಡೇರಿಸಲಾಗಿಲ್ಲ. ಉದಾಹರಣೆಗೆ ಯಮುನಾವನ್ನು ಶುದ್ಧ ನದಿಯಾಗಿ ಮಾರ್ಪಾಡು ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಈಗ ಯಮುನಾ ನದಿಯು ಬಹುಶಃ ಅದಕ್ಕಿಂತ ಹೆಚ್ಚು ಕಲುಷಿತವಾಗಿದೆ. ಇದನ್ನು ಹೊರತುಪಡಿಸಿ, ಈಗ ‘ಶೀಷ್ಮಹಲ್’ ನಂತಹ ಹಲವಾರು ಮುಜುಗರದ ಮತ್ತು ವಿಚಿತ್ರವಾದ ವಿವಾದಗಳಿವೆ ಎಂದು ಹೇಳಿದ್ದಾರೆ.

Cyber Crime: ಸೈಬರ್‌ ಕ್ರೈಂ; ಮೂವರು ಅರೆಸ್ಟ್‌- ಬರೋಬ್ಬರಿ 281 ಬ್ಯಾಂಕ್ ಖಾತೆಗಳು ಫ್ರೀಜ್‌!

ಇನ್ನೊಂದು ನೋವಿನ ಸಂಗತಿಯೆಂದರೆ, ನಾವು ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು ನಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಗಾಗಿ ಮಾತ್ರ ಹೋರಾಡುತ್ತಿದ್ದೇವೆ. ಇದು ದೆಹಲಿಯ ಜನರಿಗೆ ಮೂಲಭೂತ ಸೇವೆಗಳನ್ನು ತಲುಪಿಸುವ ನಮ್ಮ ಸಾಮರ್ಥ್ಯವನ್ನು ತೀವ್ರವಾಗಿ ಕುಂಠಿತಗೊಳಿಸಿದೆ. ದೆಹಲಿ ಸರ್ಕಾರವು ತನ್ನ ಬಹುಪಾಲು ಸಮಯವನ್ನು ಕೇಂದ್ರದ ವಿರುದ್ಧ ಹೋರಾಡಿದರೆ ದೆಹಲಿಯ ಪ್ರಗತಿ ಸಾಧ್ಯವಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.