ಬೆಂಗಳೂರು: ರಾಜ್ಯದ ಜನರಿಗೆ 40 ಪರ್ಸೆಂಟ್ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಪರ್ಸೆಂಟ್ ಭ್ರಷ್ಟರಾಗಿದ್ದಾರೆ. ಕಳೆದ 18 ತಿಂಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಿನನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ, ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.
ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ತಮ್ಮ 40 ವರ್ಷದ ಜೀವನ ತೆರೆದ ಪುಸ್ತಕ ಅಂದವರು. ಇವತ್ತು ಅವರ ತೆರೆದ ಪುಸ್ತಕ ಪುಟಗಳು ತಿರುವಿದರೆ ಲೂಟಿಯ ಕಪ್ಪು ಚುಕ್ಕೆಗಳೇ ಕಾಣುತ್ತಿವೆ. ಸಿದ್ದರಾಮಯ್ಯ ನೇಮಕ ಮಾಡಿರುವ ಪೊಲೀಸ್ ಅಧಿಕಾರಿಯಿಂದ ವಿಚಾರಣೆ ಎದುರಿಸುತ್ತಿರುವುದು ಕನ್ನಡಿಗರ ದುರ್ದೈವ. ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ಭ್ರಷ್ಟಾಚಾರದ ಬಗ್ಗೆ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ವೇಳೆ ಪ್ರದಾನ ಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಇದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ.
ಅದು ಪ್ರಧಾನಿ ಮೋದಿ ಅವರು ಮಾಡಿರುವ ಆರೋಪವಲ್ಲ. ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ. ಮದ್ಯ ಮಾರಾಟಗಾರರ ಸಂಘ ಬರೆದಿರುವ ಪತ್ರವನ್ನು ಒಮ್ಮೆ ಮುಖ್ಯಮಂತ್ರಿಗಳು ತರಿಸಿಕೊಂಡು ಓದಬೇಕು. ಲೈಸೆನ್ಸ್ ನವೀಕರಣಕ್ಕೆ ರೇಟೇಷ್ಟು, ಮಂಥ್ಲಿ ಮನಿ ಹೆಸರಿನಲ್ಲಿ ಪ್ರತಿ ಮದ್ಯದ ಅಂಗಡಿಯಿಂದ ಎಷ್ಟು ವಸೂಲಿ ಆಗುತ್ತಿದೆ, ಅಬಕಾರಿ ಇಲಾಖೆಯ ಟ್ರಾನ್ಸ್‌ಫರ್ ದಂಧೆಯಲ್ಲಿ ಯಾವ ಮಟ್ಟದ ಅಧಿಕಾರಿಗೆ ಎಷ್ಟು ಲಂಚ ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದನ್ನು ಮಾಧ್ಯಮಗಳು ವರದಿ ಮಾಡಿವೆ. ಇದನ್ನೇ ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದಲ್ಲಿ ಹೇಳಿದ್ದಾರೆಯೇ ಹೊರತು ಅವರು ಯಾವುದೇ ಸುಳ್ಳು ಆರೋಪ ಮಾಡಿಲ್ಲ. ಸಾಕ್ಷಿ ಬೇಕಾದರೆ ಸಿದ್ದರಾಮಯ್ಯನವರು ಮದ್ಯ ಮಾರಾಟಗಾರರ ಸಂಘದ ಆರೋಪದ ತನಿಖೆ ಮಾಡಲು ಮತ್ತೊಂದು ಎಸ್‌ಐಟಿ ರಚಿಸಲಿ ಎಂದು ಕಿಡಿಕಾರಿದರು.
ಮದ್ಯ ಮಾರಾಟಗಾರರು ಮಾಡುತ್ತಿರುವ ಆರೋಪ ಸುಳ್ಳಾದರೆ ಅವರ ಲೈಸೆನ್ಸ್ ರದ್ದು ಮಾಡಿ ಅಂಗಡಿಗಳಿಗೆ ಬೀಗ ಹಾಕಿಸಿ. ತಮ್ಮ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನ ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40% ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ. 40 ಪರ್ಸೆಂಟ್ ಕಮಿಷನ್ ಆರೋಪ ಕಾಂಗ್ರೆಸ್‌ನ ಟೂಲ್ ಕಿಟ್ ಎಂಬುದು ಈಗ ಸಾಕ್ಷಿ ಸಮೇತ ರುಜುವಾತಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಅಂಬಿಕಾಪತಿ ಗುತ್ತಿಗೆ ಕೆಲಸಗಳನ್ನು ಮಾಡುವುದನ್ನು ಬಿಟ್ಟೆ 6 ವರ್ಷವಾಗಿತ್ತು. ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಕಟ್ಟಿದ ಸುಳ್ಳಿನ ಮಹಲು ಸಂಪೂರ್ಣ ಕುಸಿದುಬಿದ್ದಿದೆ ಎಂದು ಟೀಕಿಸಿದರು.
ಬೆಂಗಳೂರು ನಗರದಲ್ಲಿ ಒಂದು ರಸ್ತೆ ಗುಂಡಿ ಮುಚ್ಚಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಭಗವಾನ್ ಬುದ್ಧ ಸಾವೇ ಇಲ್ಲದ ಮನೆಯಿಂದ ಸಾಸಿವೆ ತನ್ನಿ ಎಂದಿದ್ದರು. ಹಾಗೆ ಬೆಂಗಳೂರಿನಲ್ಲಿ ಇವತ್ತು ರಸ್ತೆ ಗುಂಡಿ ಇಲ್ಲದ ರಸ್ತೆ ತೋರಿಸಿ ಎನ್ನಬೇಕಾದ ಪರಿಸ್ಥಿತಿ ಬಂದಿದೆ. ತ್ಯಾಜ್ಯ ವಿಲೇವಾರಿ ಮಾಡಲು ಸರ್ಕಾರದ ಬಳಿ ದುಡ್ಡಿಲ್ಲ. ಹಾಲು, ಕರೆಂಟು, ಪೆಟ್ರೋಲ್, ಡೀಸೆಲ್, ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ ಎಲ್ಲವನ್ನು ಜಾಸ್ತಿ ಮಾಡಿದ್ದಾಯ್ತು, ಈಗ ಕಸ ವಿಲೇವಾರಿ ಹೆಸರಿನಲ್ಲಿ ಹೊಸ ಸೆಸ್ ಹಾಕಿ ಬೆಂಗಳೂರಿನ ಜನರನ್ನು ಸುಲಿಗೆ ಮಾಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸುತ್ತಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರಕಾರ ಅನುದಾನ ಬೇಕಾದರೆ ಶಾಸಕರು ತಗ್ಗಿ ಬಗ್ಗಿ ನಡೆಯಬೇಕಂತೆ. ಬೆಂಗಳೂರಿನ ಜನತೆಗೆ, ಜಯನಗರದ ಜನತೆಗೆ ‘ನಮ್ಮ ತೆರಿಗೆ ನಮ್ಮ ಹಕ್ಕು’ ಅನ್ವಯಿಸುವುದಿಲ್ಲವಾ? ಡಿಸಿಎಂ ಡಿಕೆ ಶಿವಕುಮಾರ್ ಅವರು ಪಾಳೇಗಾರರೂ ಅಲ್ಲ, ನಿಜಾಮರ ಕಾಲದ ರಜಾಕಾರರು ಅಲ್ಲ. ವಕ್ಫ್ ಹೆಸರಿನಲ್ಲಿ ರೈತರ ಜಮೀನಿನ ಮೇಲೆ, ಸರ್ಕಾರಿ ಆಸ್ತಿ ಪಾಸ್ತಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮಿತಿಮೀರುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಉಳುಮೆ ಮಾಡಲು ಬಂದಿದ್ದ ರೈತರ ಮೇಲೆ ಮತಾಂಧರು ಹಲ್ಲೆ ಮಾಡಿ, ಬೇಲಿ ಕಿತ್ತು ಹಾಕಿದ್ದಾರೆ. ಸಿದ್ದರಾಮಯ್ಯನವರು ಈಗ ಅಹಿಂದ ಚಾಂಪಿಯನ್ ಅಲ್ಲ, ಮುಸ್ಲಿಮರ ಚಾಂಪಿಯನ್. ವಕ್ಫ್ ಹೆಸರಿನಲ್ಲಿ ಲೂಟಿ ಆಗುತ್ತಿರುವುದು ಬಹುತೇಕ ದಲಿತರು, ಹಿಂದುಳಿದ ಸಮುದಾಯಗಳಿಗೆ ಸೇರಿದ ಭೂಮಿಯೇ. ಮಂಗಳವಾರ ನಾನು ಚಿಕ್ಕಬಳ್ಳಾಪುರಕ್ಕೆ ಹೋಗಿ ರೈತರನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿದರು.
ಇದು ಗುರುವಾರದ ಸರ್ಕಾರ. ಕೆಲ ಸಂಪುಟ ಸಭೆಯ ದಿನದಂದು ಸರ್ಕಾರ ಜೀವಂತವಾಗಿರುತ್ತದೆ. ಆಮೇಲೆ ಯಾವ ಸಚಿವರೂ ಪತ್ತೆ ಇರಲ್ಲ. ಈ ಮೊದಲು ರಾಜಸ್ವ ಸಂಗ್ರಹಣೆಗೆ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತಿತ್ತು. ಈಗ ಭ್ರಷ್ಟಾಚಾರ, ಲಂಚಕ್ಕೆ ಟಾರ್ಗೆಟ್ ನೀಡಲಾಗುತ್ತಿದೆ. ಗ್ಯಾರಂಟಿಗಳನ್ನು ನಿಲ್ಲಿಸುವುದು ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ. ಪ್ರತಿ ವರ್ಷ 10% ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಈಗಾಗಲೇ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ. ಒಟ್ಟಿನಲ್ಲಿ ಗ್ಯಾರಂಟಿಗಳು ರದ್ದು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿ ಇದೆ. ಈ ವರ್ಷ ಸಾಲ ಎತ್ತುವಳಿ ಇನ್ನೂ ಹೆಚ್ಚಾಗಲಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ತಮಗೆ ಸಂಕಷ್ಟ ಎದುರಾದಾಗ ನಾನು ಹಳ್ಳಿಯವನು, ಹಿಂದುಳಿದ ಸಮುದಾಯದವನು ಎಂದು ಜಾತಿ ಅಸ್ತ್ರ ಬಳಸುವುದನ್ನು 40 ವರ್ಷದಿಂದ ರಾಜ್ಯದ ಜನತೆ ನೋಡಿಕೊಂಡೇ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಪಾಪದ ತುಂಬಿದೆ. ಜನ ಕಾಂಗ್ರೆಸ್ ಪಕ್ಷವನ್ನ ಗಂಟು ಮೂಟೆ ಕಟ್ಟಿಸಿ ಶಾಶ್ವತವಾಗಿ ಮನೆಗೆ ಕಳುಹಿಸೋದು ಗ್ಯಾರಂಟಿ ಎಂದು ಕಿಡಿಕಾರಿದರು.
ಈ ಸುದ್ದಿಯನ್ನೂ ಓದಿ | PDO Exam: ಪಿಡಿಒ ಪರೀಕ್ಷೆಯಲ್ಲಿ ಕೆಪಿಎಸ್‌ಸಿ ಮತ್ತೆ ಎಡವಟ್ಟು; ಪ್ರಶ್ನೆ ಪತ್ರಿಕೆ ಕೊರತೆ, ಮರು ಪರೀಕ್ಷೆಗೆ ಆಗ್ರಹ