Sunday, 17th November 2024

Actress Nayanthara: ಧನುಷ್‌ ವಿರುದ್ಧ ಯುದ್ಧ ಸಾರಿದ್ರಾ ನಯನತಾರಾ? ಏನಾಗ್ತಿದೆ ಕಾಲಿವುಡ್‌ನಲ್ಲಿ?

Actress Nayanthara

ಚೆನ್ನೈ: ಕಾಲಿವುಡ್‌ನಲ್ಲಿ ಸ್ಟಾರ್‌ ವಾರ್‌ ಜೋರಾಗಿ ನಡೆದಿದೆ. ಕಾಪಿ ರೈಟ್‌ ವಿಚಾರವಾಗಿ ಧನುಷ್‌ (Dhanush) ಕಳುಹಿಸಿರುವ ಲೀಗಲ್‌ ನೋಟಿಸ್‌ಗೆ ನಯನತಾರಾ (Actress Nayanthara) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ. 3 ಸೆಕೆಂಡ್‌ನ ವಿಡಿಯೊ ಬಳಸಿದ್ದಕ್ಕಾಗಿ 10 ಕೋಟಿ ರೂ. ಪರಿಹಾರಕ್ಕೆ ಕೇಳಿದ ಧನುಷ್‌ ನಡೆಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಜತೆಗೆ ಕಾನೂನು ಮೂಲಕ ಇದನ್ನು ಎದುರಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಧನುಷ್‌ ವಿರುದ್ಧ ನಯನತಾರಾ ನೇರಾನೇರ ಯುದ್ಧಕ್ಕೆ ಇಳಿದರಾ ಎನ್ನುವ ಅನುಮಾನವೂ ಮೂಡತೊಡಗಿದೆ. ಅದಕ್ಕೆ ಕಾರಣವೂ ಇದೆ. ಅದೇನು ಎನ್ನುವ ವಿವರ ಇಲ್ಲಿದೆ.

ʼಯಾರಡಿ ನೀ ಮೋಹಿನಿʼ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದ, ಒಂದು ಕಾಲದಲ್ಲಿ ಬೆಸ್ಟ್‌ ಫ್ರೆಂಡ್‌ ಎನಿಸಿಕೊಂಡಿದ್ದ ಧನುಷ್‌ ಮತ್ತು ನಯನತಾರಾ ಸ್ನೇಹ ಸಂಬಂಧದಲ್ಲಿ ಸದ್ಯ ಬಿರುಕು ಬಿಟ್ಟಿದೆ. ಈ ಮಧ್ಯೆ ನಯನತಾರಾ ತಮ್ಮ ಮುಂಬರುವ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಇದು ನೇರ ಧನುಷ್‌ ವಿರುದ್ಧ ಸಾರಿದ ಯುದ್ಧ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಪೋಸ್ಟರ್‌ನಲ್ಲಿ ಏನಿದೆ?

ನಯನತಾರಾ ಅವರ ಹೊಸ ಚಿತ್ರದ ಟೈಟಲ್‌ ಟೀಸರ್‌ ಸೋಮವಾರ (ನ. 18) ರಿಲೀಸ್‌ ಆಗಲಿದೆ. ಇದನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಈ ಪೋಸ್ಟರ್‌ನಲ್ಲಿ ʼʼಅವಳು ಯುದ್ಧ ಘೋಷಿಸಿದ್ದಾಳೆʼʼ ಎಂದು ಬರೆಯಲಾಗಿದೆ. ಜತೆಗೆ ಕೈಯಲ್ಲಿ ಆಯುಧ ಹಿಡಿದು ಯುದ್ಧಕ್ಕೆ ಬರುವ ಜನರ ಗುಂಪನ್ನು ಎದುರಿಸುವ ದಿಟ್ಟ ಮಹಿಳೆಯಾಗಿ ಅವರನ್ನು ಚಿತ್ರಿಸಲಾಗಿದೆ. ಈ ಪೋಸ್ಟರ್‌ ಸದ್ಯ ಅಭಿಮಾನಿಗಳ ಗಮನ ಸೆಳೆದಿದ್ದು, ಇದನ್ನು ಧನುಷ್‌ಗೆ ಟಾಂಗ್‌ ನೀಡಲೆಂದೇ ಪೋಸ್ಟ್‌ ಮಾಡಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದು ಈ ಸಂದರ್ಭಕ್ಕೆ ಬಹಳ ಸೂಕ್ತವಾಗಿದೆ ಎಂದೂ ಹಲವರು ಕಾಮೆಂಟ್‌ ಮಾಡಿದ್ದಾರೆ. ನಯನತಾರಾ ಬೇಕಂತಲೇ ಈ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೋ ಅಥವಾ ಕಾಕತಾಳಿಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಪೋಸ್ಟರ್‌ ಕುತೂಹಲ ಕೆರಳಿಸಿದೆ. ಈ ಸ್ಟಾರ್‌ ವಾರ್‌ ಯಾವ ಮಟ್ಟಕ್ಕೆ ತಲುಪಲಿದೆ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ.

ಧನುಷ್‌ ವಕೀಲರ ಪ್ರತಿಕ್ರಿಯೆ

ನಯನತಾರಾ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯ ಚಿತ್ರ ʼನಯನತಾರಾ: ಬಿಯಾಂಡ್‌ ದಿ ಫೇರ್‌ ಟೇಲ್‌ʼ (Nayanthara: Beyond The Fairy Tale)ನ ಟ್ರೈಲರ್‌ ಇತ್ತೀಚೆಗೆ ರಿಲೀಸ್‌ ಆಗಿತ್ತು. ಇದರಲ್ಲಿ ನಯನತಾರಾ ಮತ್ತು ವಿಜಯ್‌ ಸೇತುಪತಿ ನಟಿಸಿದ, ಧನುಷ್‌ ನಿರ್ಮಿಸಿದ ʼನಾನುಂ ರೌಡಿ ದಾನ್‌ʼ ಸಿನಿಮಾದ 3 ಸೆಕೆಂಡ್‌ಗಳ ಬಿಟಿಎಸ್‌ (Behind-the-scenes) ಕಂಡು ಬಂದಿದೆ. ಅನುಮತಿ ಪಡೆಯದೆ ಇದನ್ನು ಬಳಸಲಾಗಿದೆ ಎಂದು ಇದರ ವಿರುದ್ಧ ಲೀಗಲ್‌ ನೋಟಿಸ್‌ ಕಳುಹಿಸಿದ್ದ ಧನುಷ್‌ 10 ಕೋಟಿ ರೂ. ಪರಿಹಾರ ಕೋರಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಈ ಮೂಲಕ ಧನುಷ್‌ ಅವರ ಅಸಲಿ ಮುಖ ಹೊರಗೆ ಬಂದಿದೆ ಎಂದು ನಯನತಾರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ವಿವಾದದ ಬಗ್ಗೆ ಧನುಷ್‌ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ಪರ ವಕೀಲರು ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಸಾಕ್ಷ್ಯಚಿತ್ರದಿಂದ ʼನಾನುಂ ರೌಡಿ ದಾನ್‌ʼ ಚಿತ್ರ ತುಣುಕನ್ನು ತೆಗೆದುಹಾಕುವಂತೆ ನಯನತಾರಾ ಮತ್ತು ಅವರ ತಂಡಕ್ಕೆ ವಕೀಲರು ಸಲಹೆ ನೀಡಿದ್ದಾರೆ. 24 ಗಂಟೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ನಯನತಾರಾ ಮತ್ತು ನೆಟ್‌ಫ್ಲಿಕ್ಸ್‌ ಇಂಡಿಯಾ ವಿರುದ್ಧ 10 ಕೋಟಿ ರೂ.ಗಳ ಪರಿಹಾರವನ್ನು ಕೋರಿ ಕಾನೂನು ಕ್ರಮಗಳನ್ನು ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Nayanthara V/S Dhanush: ಸಂಭಾವನೆ ಪಡೆಯದೆ ಧನುಷ್‌ ಚಿತ್ರದಲ್ಲಿ ಡ್ಯಾನ್ಸ್‌ ಮಾಡಿದ್ದ ನಯನತಾರಾ; ಹಳೆ ವಿಡಿಯೊ ವೈರಲ್‌