ವಿದೇಶವಾಸಿ
ಕಿರಣ್ ಉಪಾಧ್ಯಾಯ
ಅಕ್ಟೋಬರ್-ನವೆಂಬರ್ ತಿಂಗಳು ಬಂದರೆ ಸಾಕು, ಗ್ರೇಟ್ ಬ್ರಿಟನ್ ತುಂಬ ಕೆಂಪು ಬಣ್ಣದ ನಡುವೆ ಕಪ್ಪು ಬಣ್ಣ ಇರುವ ಪೊಪಿ ಹೂವು ಎಲ್ಲ ಕಡೆ ಕಾಣಿಸುತ್ತದೆ. ಮಕ್ಕಳು, ಮುದುಕರು, ಹೆಣ್ಣು, ಗಂಡು, ಆ ದೇಶ, ಈ ದೇಶ, ಯಾವುದೇ ಭೇದವಿಲ್ಲದೆ ಬಹುತೇಕರು ತಮ್ಮ ಉಡುಪಿನ ಮೇಲೆ ಈ ಸಣ್ಣ ಕೆಂಪು ಹೂವನ್ನು ಧರಿಸಿರುತ್ತಾರೆ. ಇಲ್ಲಿಯ ವ್ಯಾಪಾರಸ್ಥರು, ರಾಜಕಾರಣಿಗಳು, ಸಿರಿವಂತರು, ನೌಕರರು, ಎಲ್ಲರೂ ತಮ್ಮ ಕೋಟು, ಅಂಗಿ ಅಥವಾ ಉಡುಪಿನ ಮೇಲೆ ಎದೆಯ ಎಡಭಾಗದಲ್ಲಿ ಈ ಹೂವನ್ನು ತೊಟ್ಟಿರುತ್ತಾರೆ.
ಅವರು ತೊಡುವುದು ನಿಜವಾದ ಹೂವಲ್ಲ, ಹೂವಿನ ರೂಪದಲ್ಲಿಯೇ ಇರುವ, ವೆಲ್ವೆಟ್, ಪ್ಲಾಸ್ಟಿಕ್ ಅಥವಾ ಕಾಗದದಿಂದ ತಯಾರಿಸಿದ ಹೂವು.
ಈ ಹೂವು ನೋಡಲು ನಮ್ಮಲ್ಲಿಯ ಗಸಗಸೆ ಹೂವು ಅಥವಾ ಅಫೀಮಿನ ಹೂವಿನಂತೆ ಕಾಣುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಗ್ರೇಟ್ ಬ್ರಿಟನ್ನಿನ ಉತ್ತರದಿಂದ ಹಿಡಿದು ದಕ್ಷಿಣದವರೆಗೆ, ಪೂರ್ವದಿಂದ ಹಿಡಿದು ಪಶ್ಚಿಮದವರೆಗೆ ಬಹುತೇಕ ಮನೆಯ ಮುಂದೆ, ರಸ್ತೆ ದೀಪದ ಕಂಬದ ಮೇಲೆ, ರಸ್ತೆಯ ನಡುವೆ ಇರುವ ವೃತ್ತದಲ್ಲಿ, ಕಚೇರಿಯ ಒಳಗೆ, ದೊಡ್ಡ ದೊಡ್ಡ ಕಟ್ಟಡದ ಹೊರಗೆ, ಎಂದರಲ್ಲಿ ರಾರಾಜಿಸುತ್ತಿರುತ್ತದೆ. ಜತೆಗೆ, ನವೆಂಬರ್ 11ನೇ ತಾರೀಖಿನ ಬೆಳಗ್ಗೆ 11 ಗಂಟೆಗೆ ಸರಿಯಾಗಿ, ಎಲ್ಲಿದ್ದರೂ, ಯಾವುದೇ ಕೆಲಸದಲ್ಲಿದ್ದರೂ ಜನರು ಈ ಹೂವನ್ನು ತಮ್ಮ
ಉಡುಪಿನ ಮೇಲೆ ತೊಟ್ಟೋ ಕೈಯಲ್ಲಿ ಹಿಡಿದೋ ಎದ್ದು ನಿಂತು, ಎರಡು ನಿಮಿಷದ ಮೌನವನ್ನು ಆಚರಿಸುತ್ತಾರೆ. ಯಾಕೆ ಹೀಗೆ? ಅದರ ಹಿಂದೆ ಒಂದು ಕಥೆ ಇದೆ, ದುಃಖ ಇದೆ, ದೇಶಭಕ್ತಿ ಇದೆ, ಸಮರ್ಪಣಾ ಭಾವವಿದೆ.
1914ರಲ್ಲಿ ಆರಂಭವಾದ ಮೊದಲ ವಿಶ್ವಯುದ್ಧದಲ್ಲಿ ಬ್ರಿಟಿಷ್ ಸಾಮ್ರಾಜ್ಯ, ಅಮೆರಿಕ, -, ಇಟಲಿ, ರಷ್ಯಾ ಇತ್ಯಾದಿ ದೇಶಗಳು ಒಂದುಕಡೆ, ಜರ್ಮನಿ, ಆಸ್ಟ್ರಿಯಾ-ಹಂಗರಿ, ಒಟ್ಟಮನ್ ಸಾಮ್ರಾಜ್ಯ ಇನ್ನೊಂದು ಕಡೆ ಇದ್ದವು. ಲಕ್ಷಾಂತರ ಸೈನಿಕರು ಬ್ರಿಟಿಷ್ ಸೈನ್ಯ ಸೇರಿಕೊಂಡರು.
ಆ ಸಮರದಲ್ಲಿ ಸಾಕಷ್ಟು ಸೈನಿಕರು ಮಡಿದರು, ಅಂಗಾಂಗ ಕಳೆದುಕೊಂಡರು, ಗಾಯಾಳುಗಳಾದರು. ಯುದ್ಧದಲ್ಲಿ ಬದುಕಿ, ಹಿಂತಿರುಗಿ ಮನೆಗೆ
ಬಂದವರಲ್ಲೂ ಬಹುತೇಕರು ಮೊದಲಿನಂತಿರಲಿಲ್ಲ. 1918ರ ನವೆಂಬರ್ 11ನೇ ತಾರೀಖಿನಂದು ಬೆಳಗ್ಗೆ 11 ಗಂಟೆಗೆ ಯುದ್ಧ ಮುಗಿಯಿತು ಎಂಬ ಸಂಧಾನಕ್ಕೆ ಸಹಿ ಹಾಕಲಾಯಿತು. ಈ ದಿನವನ್ನು ‘ಕದನ ವಿರಾಮದ ದಿನ’, ‘ಸ್ಮರಣಾ ದಿವಸ’ (ರಿಮೆಂಬರ ಡೇ) ಅಥವಾ ‘ಹಿರಿಯರ ದಿನ’ (ವೆಟರ ಡೇ) ಎಂದೂ ಆಚರಿಸುತ್ತಾರೆ. ವಾಡಿಕೆಯಲ್ಲಿ, ಮಾಜಿ ಸೈನಿಕರನ್ನು ex-servicemen ಎಂದೂ, ಸೈನಿಕನ ಪತ್ನಿಯನ್ನು veteran ಎಂದೂ ಹೇಳುವುದಿದೆ. ಇಂದಿಗೂ ಯುಕೆ ಮತ್ತು ಯುರೋಪ್ನ ಬಹುಭಾಗದಲ್ಲಿ ಪ್ರತಿ ವರ್ಷ ನವೆಂಬರ್ 11ರಂದು ಬೆಳಗ್ಗೆ 11 ಗಂಟೆಗೆ, ಸೈನಿಕರಿಗೆ ಗೌರವ ಸಲ್ಲಿಸುವುದಕ್ಕೆ ಎರಡು ನಿಮಿಷದ ಮೌನಾಚರಣೆ ನಡೆಯುತ್ತದೆ. ಆ ದಿನಗಳಲ್ಲಿ ಬ್ರಿಟನ್ನ ಬಹುತೇಕ ಮನೆಗಳ ಮುಂದೆ, ನಮ್ಮಲ್ಲಿ ದೀಪಾವಳಿಯಲ್ಲಿ ಮನೆಯ ಮುಂದೆ ಹೇಗೆ ಗೂಡುದೀಪ (ಆಕಾಶ ಬುಟ್ಟಿ) ಹಾಕಿರುತ್ತೇವೆಯೋ ಹಾಗೆಯೇ, ಪೊಪಿ ಹೂವಿನ ಆಕೃತಿಯನ್ನು ಹಾಕಿರುತ್ತಾರೆ. ಜನರು ಪೊಪಿ ಹೂವನ್ನು ಎದೆಗೆ ಅಂಟಿಸಿಕೊಂಡಿರುತ್ತಾರೆ. ಪೊಪಿ ಹೂವೇ ಯಾಕೆ? ಇದರ ಮಹತ್ವ ಏನು? ಅದಕ್ಕೆ ಇತಿಹಾಸವಿದೆ. ನಾಲ್ಕು ವರ್ಷಗಳ ಕಾಲ ನಡೆದ ವಿಶ್ವಯುದ್ಧದಲ್ಲಿ ಸಾಕಷ್ಟು ಸಾವು-ನೋವುಗಳಾಗಿದ್ದವು. ರಕ್ತದ ನದಿಯೇ ಹರಿದಿತ್ತು. ಆ ಯುದ್ಧದಲ್ಲಿ ಕೆನಡಾದ ವೈದ್ಯ ಲೆಫ್ಟಿನೆಂಟ್ ಕರ್ನಲ್ ಜಾನ್ ಮೆಕ್ರೇ ಕೂಡ ಭಾಗಿಯಾಗಿದ್ದರು.
ತಮ್ಮ ೪೧ನೆಯ ವಯಸ್ಸಿನಲ್ಲಿ ಸೇನೆಗೆ ಸೇರಿಕೊಂಡ ಮೆಕ್ರೇ ವೃತ್ತಿಯಲ್ಲಿ ವೈದ್ಯರಾಗಿದ್ದು, ವೈದ್ಯರಾಗಿಯೇ ಸೇನೆ ಸೇರುವ ಅವಕಾಶವಿದ್ದರೂ, ಗನ್ನರ್ ಮತ್ತು ವೈದ್ಯರಾಗಿ ಸೇರಿಕೊಂಡಿದ್ದರು. ಅದು 1915ರ ಮೇ 2ನೆಯ ತಾರೀಖು. ಬೆಲ್ಜಿಯಂನ ಉತ್ತರ ಭಾಗದಲ್ಲಿರುವ ಫ್ಲಾಂಡರ್ಸ್ ಪ್ರದೇಶದಲ್ಲಿ ಕದನ ಕೋಲಾಹಲ ಜೋರಾಗಿತ್ತು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂದು – ಸೇನೆಯ ವಿರುದ್ಧ ಜರ್ಮನಿ ರಾಸಾಯನಿಕ ಆಯುಧ ಬಳಸಿತ್ತು. ಅಂದು ಮೆಕ್ರೇ ತಮ್ಮ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದರು.
ಶೋಕದಲ್ಲಿದ್ದ ಮೆಕ್ರೇ, ಆಂಬುಲನ್ಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಯುದ್ಧದ ದಾಳಿಗೆ ಸಿಲುಕಿ ಛಿದ್ರವಾದ, ಶವದ ರಾಶಿಯನ್ನೇ ಹೊದ್ದು ಮಲಗಿದ
ಭೂಮಿಯ ನಡುವೆಯೂ ಅರಳಿದ ಕೆಂಪು ಬಣ್ಣದ ಹೂವುಗಳನ್ನು ಕಂಡರು. ವಾಹನದಲ್ಲಿಯೇ ಕುಳಿತು 20 ನಿಮಿಷದಲ್ಲಿ ಒಂದು ಕವಿತೆ ಬರೆದರು. ಅಂದು ಅವರು ಬರೆದ ‘In Flanders Fields’ ಕವಿತೆ ಇಂಗ್ಲಿಷ್ ಭಾಷೆಯಲ್ಲಿ, ಅದರಲ್ಲೂ ಕೆನಡಾದಲ್ಲಿ ಸಾರ್ವಕಾಲಿಕವಾಗಿ ಶ್ರೇಷ್ಠ ಕವಿತೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು.
‘ಫ್ಲಾಂಡರ್ಸ್ ಮೈದಾನದಲ್ಲಿ ಸೈನಿಕರ ಶವದ ನಡುವೆ, ಸಾಲು ಸಾಲು ಶಿಲುಬೆಗಳ ಮಧ್ಯದಲ್ಲಿ ಪೊಪಿ ಹೂವುಗಳು ಸಾಲು ಸಾಲಾಗಿ ಅರಳುತ್ತವೆ’
ಎಂದು ಆರಂಭವಾಗುವ ಕವಿತೆ, ಪೊಪಿ ಹೂವು, ಸೈನಿಕರು, ಅವರ ತ್ಯಾಗವನ್ನು ಸಾರುವ ಕವಿತೆಯಾಗಿತ್ತು. ಕವಿತೆ ಮೊದಲು ಅವರಿಗೇ
ಇಷ್ಟವಾಗಿರಲಿಲ್ಲ. ಮೆಕ್ರೇ ಅದನ್ನು ಮುದ್ದೆ ಕಟ್ಟಿ ಕಸದ ಬುಟ್ಟಿಗೆ ಎಸೆದಿದ್ದರು. ಅವರ ಜತೆಗಿರುವ ಸೈನಿಕನಿಗೆ ಅದು ಬಹಳ ಇಷ್ಟವಾಗಿತ್ತು. ಆತ ಅದನ್ನು ಪುನಃ ಬರೆದು, ಪ್ರಕಟಿಸುವಂತೆ ಒತ್ತಾಯಿಸಿದ್ದ. ಮೆಕ್ರೇ ಅದನ್ನು ಪುನಃ ಬರೆದು, ‘ದಿ ಸ್ಪೆಕ್ಟೇಟರ್’ ಪತ್ರಿಕೆಗೆ ಕಳಿಸಿದಾಗ ಅದು ತಿರಸ್ಕೃತಗೊಂಡಿತ್ತು. ನಂತರ ಅದನ್ನು ‘ಪಂಚ್’ ಪತ್ರಿಕೆ ಪ್ರಕಟಿಸಿತು, ಕವನ ಜನಪ್ರಿಯವಾಯಿತು.
ಯುದ್ಧದ ಕೊನೆಯ ದಿನಗಳಲ್ಲಿ ಮೆಕ್ರೇ ನಿಮೋನಿಯಾದಿಂದ ಸಾವನ್ನಪ್ಪಿದರು. ಅವರ ಶವವೇನೋ ಫ್ರಾನ್ಸ್ನಲ್ಲಿ ಮಣ್ಣಾಯಿತು, ಆದರೆ ಅವರ ಕವನ ಇಂದಿಗೂ ಶಾಶ್ವತವಾಗಿ ಉಳಿದಿದೆ. ಆ ಕವಿತೆ ಬಹಳ ಜನರಿಗೆ ಪ್ರೇರಣೆ ನೀಡಿತಾದರೂ, ಅತಿಯಾಗಿ ಪ್ರೇರೇಪಿತರಾದವರು ಅಮೆರಿಕದ ಪ್ರಾಧ್ಯಾಪಕಿ, ಸೇನೆಯಲ್ಲಿ ಕಾರ್ಯದರ್ಶಿಯ ಕೆಲಸ ಮಾಡುತ್ತಿದ್ದ ಮೊಯ್ನಾ ಮೈಕಲ್ ಮತ್ತು ಫ್ರಾನ್ಸ್ನ ಶಿಕ್ಷಕಿ ಅನ್ನಾ ಗುರೈನ್ ಎಂಬ ಇಬ್ಬರು ಮಹಿಳೆಯರು. ಗುರೈನ್ ಸಾಹಸಿ ಹೆಣ್ಣು. ಆಕೆ ಯುದ್ಧಕ್ಕೂ ಮೊದಲು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಫ್ರಾನ್ಸ್ ನಿಂದ ಬ್ರಿಟನ್ಗೆ ಬಂದಿದ್ದಳು. ಯುದ್ಧ ಆರಂಭವಾದ ನಂತರ ಅಮೆರಿಕಕ್ಕೆ ತೆರಳಿದಳು. ಯುದ್ಧ ಮುಗಿದ ನಂತರ, ಅಮೆರಿಕದ ಕೆಲವು ರಾಜ್ಯಗಳಲ್ಲಿ ಓಡಾಡಿ
ಸೈನಿಕರ ಗೌರವ ದಿನ ನಿಗದಿಪಡಿಸುವುದಕ್ಕೆ ಮತ್ತು ಪೊಪಿ ಹೂವನ್ನು ಅದರ ಚಿಹ್ನೆಯನ್ನಾಗಿಸುವುದಕ್ಕೆ ಶ್ರಮಿಸಿದಳು. ನಂತರ ಬ್ರಿಟನ್ನ ಲಿವರ್ಪೂಲ್ಗೆ ಬಂದು ಬ್ರಿಟಿಷ್ ಲೀಜನ್ (ಸೇನೆಯ ನಾಲ್ಕು ವಿಭಾಗದ ನಿವೃತ್ತ ಸೈನಿಕ ಸಂಸ್ಥೆಯ ಒಕ್ಕೂಟ) ಗೆ ತಿಳಿಸಿ, ಒಪ್ಪಿಸಿದಳು. ಮೊದಲ ಹತ್ತು ಲಕ್ಷ ಹೂವನ್ನು ತಾನೇ ತಯಾರಿಸಿಕೊಟ್ಟಳು.
ಅತ್ತ ಮೊಯ್ನಾ ಕೂಡ ಇದರ ಪ್ರಚಾರ ಮಾಡಿದಳು. ಗುರೈನ್ ಮತ್ತು ಮೊಯ್ನಾ ಸೇರಿ ಆ ವರ್ಷ ರೇಷ್ಮೆಯಿಂದ ತಯಾರಿಸಿದ ಒಟ್ಟು ತೊಂಬತ್ತು
ಲಕ್ಷ ಪೊಪಿ ಹೂವನ್ನು ಬ್ರಿಟಿಷ್ ಲೀಜನ್ಗೆ ನೀಡಿದರು. ಅಂದಿನಿಂದ ಅದು ‘ಪೊಪಿ ಅಪೀಲ್’ (ಪೊಪಿ ಮನವಿ) ಎಂದೇ ಖ್ಯಾತವಾಯಿತು. ಅಂದು
ಪೊಪಿ ಅಪೀಲ್ನಿಂದ ಒಂದು ಲಕ್ಷ ಪೌಂಡ್ಗಿಂತಲೂ ಹೆಚ್ಚಿನ ಹಣ ಸಂಗ್ರಹವಾಯಿತು. ಅದು ನಿವೃತ್ತ ಸೈನಿಕರ, ಸೈನಿಕ ವಿಧವೆಯರ, ಅವರ ಮಕ್ಕಳ ಆರೋಗ್ಯ, ಶಿಕ್ಷಣ, ಉದ್ಯೋಗ ಇತ್ಯಾದಿಗಳಿಗೆ ಉಪಯೋಗಿಸುವ ಕಲ್ಯಾಣ ನಿಧಿಯಾಯಿತು. ನಂತರವೂ ಗುರೈನ್ ತನ್ನ ಕಾರ್ಯ ಮುಂದುವರಿಸಿ, 1928ರಲ್ಲಿ ಕೊನೆಯುಸಿರು ಎಳೆಯುವವರೆಗೆ, ಪೊಪಿ ತಯಾರಿಸಿ ನ್ಯೂಜಿಲೆಂಡ್ಗೆ ಕಳಿಸುತ್ತಿದ್ದಳು. ಇಂದು, ನೂರು ವರ್ಷಗಳ ನಂತರವೂ ಪೊಪಿ ಅಪೀಲ್ ಜಾರಿಯಲ್ಲಿದ್ದು, ಸೈನಿಕರ ಯೋಗಕ್ಷೇಮಕ್ಕೆ ಹಣ ಸಂಗ್ರಹಿಸುತ್ತಿದೆ.
ಅಂದಂತೆ, ಬ್ರಿಟಿಷ್ ಲೀಜನ್ ಪೊಪಿ ತಯಾರಿಸುವ ಕಾರ್ಖಾನೆ ಸ್ಥಾಪಿಸಿತು ಎಂದೆನಲ್ಲ, ಆ ಕಾರ್ಖಾನೆ ಸ್ಥಾಪಿಸಿದ್ದು ಯುದ್ಧಕಾಲದಲ್ಲಿ ಫೀಲ್ಡ ಮಾರ್ಷಲ್ ಆಗಿದ್ದ ಡಗ್ಲಾಸ್ ಹೈಗ್ನ ಪತ್ನಿ ಲೇಡಿ ಹೈಗ್. ಆರಂಭದಲ್ಲಿ ಅವರ ಬಂಡವಾಳವೆಂದರೆ ಸ್ವಲ್ಪ ಕೆಂಪು ಬಣ್ಣದ ಕಾಗದ ಮತ್ತು ಎರಡು ಕತ್ತರಿ. ಏಕೆಂದರೆ ನೂತನವಾಗಿ ಆರಂಭಗೊಂಡ ಕಾರ್ಖಾನೆಯಲ್ಲಿ ಇಬ್ಬರು ನಿವೃತ್ತ ಸೈನಿಕರು ಮಾತ್ರ ಕೆಲಸ ಮಾಡುತ್ತಿದ್ದರು. ಅದೇ ಕಾರ್ಖಾನೆ ಯಲ್ಲಿ ಇಂದು ಅಂಗಾಂಗ ಕಳೆದುಕೊಂಡ ಸುಮಾರು 50 ನಿವೃತ್ತ ಸೈನಿಕರು ಕೆಲಸಮಾಡುತ್ತಿದ್ದಾರೆ. ಎಡಿನ್ಬಗ್ ನಲ್ಲಿರುವ ಈ ಒಂದೇ ಕಾರ್ಖಾನೆಯಲ್ಲಿ, ಸ್ಕಾಟ್ಲೆಂಡ್ನಲ್ಲಿ ಹಂಚಲೆಂದೇ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಪೊಪಿ ಹೂವು ತಯಾರಾಗುತ್ತದೆ. ಅದರೊಂದಿಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಮಾಲೆಗಳು, 10 ಸಾವಿರಕ್ಕೂ ಹೆಚ್ಚು ಸ್ಮರಣಿಕೆಗಳನ್ನು ಕಾರ್ಖಾನೆ ತಯಾರಿಸುತ್ತದೆ. 2018ರಲ್ಲಿ ಮೊದಲ ಬಾರಿ, ವಿಶ್ವಯುದ್ಧ ದಲ್ಲಿ ಮಡಿದ ಭಾರತೀಯ ಸೈನಿಕರ ಸ್ಮರಣೆಗಾಗಿ ಖಾದಿ ಪೊಪಿಯನ್ನು ತಯಾರಿಸಲಾಯಿತು.
ಬ್ರಿಟನ್ ಬಿಡಿ, ಇಂದು ಅಮೆರಿಕ, ಕೆನಡಾ, ದಕ್ಷಿಣ ಆಫ್ರಿಕಾ, ಚೀನಾ ಸೇರಿದಂತೆ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಪೊಪಿ ತಯಾರಿಸುವ ಕಾರ್ಖಾನೆಗಳಿವೆ. 40 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು, ನೂರ ಇಪ್ಪತ್ತಕ್ಕೂ ಹೆಚ್ಚು ದೇಶದಲ್ಲಿ ಐದು ಕೋಟಿಗೂ ಹೆಚ್ಚು ಪೊಪಿ ಹಂಚುತ್ತಾರೆ. ಎಲ್ಲೂ ಇದಕ್ಕೆ ನಿರ್ದಿಷ್ಟ ಬೆಲೆ ನಿಗದಿಪಡಿಸಲಿಲ್ಲ. ಇಂತಿಷ್ಟೇ ಕೊಡಬೇಕು, ಇಂಥವರಿಗೇ ಕೊಡಬೇಕು ಎಂಬ ನಿಯಮವಿಲ್ಲ. ಇಲ್ಲಿಯೇ ಧರಿಸಬೇಕು, ಹೀಗೇ ಧರಿಸಬೇಕು ಎಂಬ ನೂನೂ ಇಲ್ಲ. ಇದೊಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡುವ ‘ಚಾರಿಟಿ’ ಕೆಲಸ. ನಮಗೆ ಸರಿ ಎನಿಸುವಷ್ಟನ್ನು ನೀಡಿದರಾಯಿತು. ನಾವು ನೀಡುವ ಪ್ರತಿಯೊಂದು ಪೈಸೆಯೂ ಸೈನಿಕರ ಕಲ್ಯಾಣ ನಿಧಿಗೆ ಸಂದಾಯವಾಗುತ್ತದೆ. ಕಳೆದ ವರ್ಷ ಪೊಪಿ ಅಪೀಲ್ನಿಂದ ಸಂಗ್ರಹಿಸಿದ ಹಣದಿಂದ ಎರಡೂವರೆ ಸಾವಿರ ಸೈನಿಕರ ಕುಟುಂಬಗಳು ಲಾಭ ಪಡೆದಿವೆ.
ಇಲ್ಲಿ ಬಹಳ ಇಷ್ಟವಾಗುವ ಸಂಗತಿಯೆಂದರೆ, ಬ್ರಿಟನ್ನಲ್ಲಿರುವ ಶಾಲೆ-ಕಾಲೇಜು, ಕಚೇರಿ, ಮಳಿಗೆಗಳೆಲ್ಲ ಸರಿಯಾದ ಸಮಯಕ್ಕೆ ಒಟ್ಟಾಗಿ
ನಮನ ಸಲ್ಲಿಸುವುದು. ಬ್ರಿಟಿಷ್ ಪ್ರಜೆಗಳಷ್ಟೇ ಅಲ್ಲದೆ, ಇಲ್ಲಿ ಕೆಲಸಕ್ಕೆಂದು ಬಂದು ನೆಲೆಸಿರುವ ಭಾರತೀಯರೂ, ಅನ್ಯದೇಶೀಯರೂ ಅದರಲ್ಲಿ
ಬದ್ಧತೆಯಿಂದ ಪಾಲ್ಗೊಳ್ಳುತ್ತಾರೆ. ಇಸ್ರೇಲ್ನಲ್ಲಿಯೂ ‘ಸೈನಿಕರ ನೆನಪಿನ ದಿನ’ದಂದು ರಾತ್ರಿ ಎಂಟು ಗಂಟೆಗೆ ಸೈರನ್ ಸದ್ದಾಗುತ್ತದೆ. ಸೈರನ್ ಶಬ್ಡ ಕೇಳಿದ ತಕ್ಷಣ ಅಲ್ಲಿಯ ಜನ ಎಲ್ಲ ಕೆಲಸ ಬಿಟ್ಟು, ತಾವು ಇದ್ದಲ್ಲಿಯೇ ಸಾವಧಾನ ಸ್ಥಿತಿಯಲ್ಲಿ ನಿಂತು ಮೌನ ಆಚರಿಸಿ ನಮನ ಸಲ್ಲಿಸುತ್ತಾರೆ.
ಯಾವ ದೇಶದವರೇ ಆಗಲಿ, ಸೈನಿಕರು ಸೈನಿಕರು ತಾನೆ? ಅವರೆಲ್ಲರೂ ಹೋರಾಡುವುದು ಅವರ ನೆಲ, ಜಲ, ಜನರ ರಕ್ಷಣೆಗಾಗಿ. ಅವರು ಬದುಕುವುದಷ್ಟೇ ಅಲ್ಲ, ಪ್ರಾಣ ತ್ಯಾಗ ಮಾಡುವುದೂ ಅವರ ನಾಡಿಗಾಗಿ ವಿನಾ ಸ್ವಂತಕ್ಕಲ್ಲ. ಅಂಥವರಿಗೆ ಗೌರವ ಸೂಚಕ ಒಂದು ಕ್ಷಣಕ್ಕೋ, ಒಂದು ದಿನಕ್ಕೋ ಸೀಮಿತವಲ್ಲ. ಸೈನಿಕರಿಗೆ ಸಿಗುವ ಗೌರವ ಯಾವುದೇ ಪರಿಧಿಗೆ, ಪರಿಮಿತಿಗೆ ಒಳಗಾಗದೇ ವಿಶ್ವದಾದ್ಯಂತ ಪಸರಿಸಲಿ. ಭಾರತದಲ್ಲಿಯೂ ಇಂಥದ್ದೊಂದು ಪದ್ಧತಿ ಆರಂಭವಾದರೆ ಒಳ್ಳೆಯದು ಎಂದು ಅನಿಸುವುದಿಲ್ಲವೇ?
ಇದನ್ನೂ ಓದಿ: kiranupadhyay