Sunday, 24th November 2024

Dr KaraVeeraprabhu Kyalakonda Column: ಸಾರ್ವಕಾಲಿನ ಸತ್ಯ ಸಾರಿದ ಕನಕದಾಸರು

ತನ್ನಿಮಿತ್ತ

ಡಾ.ಕರವೀರಪ್ರಭು ಕ್ಯಾಲಕೊಂಡ

(ಇಂದು ಕನಕದಾಸ ಜಯಂತಿ)

ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲೊಬ್ಬರು, ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು. ಮಾಂಡ ಲೀಕ ದೊರೆತನದ ಆಡಳಿತಗಾರನಾಗಿ, ಸಂಸಾರ ಸುಖಸಾಗರದ ಸಾಮ್ರಾಟರಾಗಿ, ಅಧ್ಯಾತ್ಮ ಸಂಪದದ ಅತ್ಯುನ್ನತ ಶಿಖರಾರೋಹಿಯಾಗಿ, ಸಿರಿತನದ ಸಕಲ ಸೌಭಾಗ್ಯಗಳಲ್ಲಿ ನಿರ್ಮೋಹಿಯಾಗಿ, ಇಹದಲ್ಲಿ ಇದ್ದೂ ಪರವನ್ನು ಗೆದ್ದು ಮಹಾಂತರಾದವರು. ಬದುಕಿನ ತತ್ತ್ವಗಳಿಗೆ ಕಾವ್ಯದ ಸೊಗಡನ್ನು ನೀಡಿ ಸಾರ್ವಕಾಲಿಕ ಸತ್ಯವನ್ನು ಸಾರಿದ ಅವರು ಹುಟ್ಟಿನಿಂದ ಶೂದ್ರನಾಗಿ, ನಿಷ್ಠೆಯಿಂದ ಬ್ರಾಹ್ಮಣನಾಗಿ, ಇಷ್ಟದಿಂದ ಭಾಗವತ ರಾಗಿ, ಕಟ್ಟಕಡೆಗೆ ದೇವರನ್ನು ಕಂಡು ಪುಣ್ಯಶ್ಲೋಕರೆನಿಸಿದ್ದಾರೆ.

ಕನಕದಾಸರು ಕೀರ್ತನೆ, ಕಾವ್ಯ, ಮುಂಡಿಗೆಗಳನ್ನು ರಚಿಸಿ ಒಟ್ಟು ದಾಸಸಾಹಿತ್ಯದ ಹರವನ್ನು, ವೈವಿಧ್ಯವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ, ತಮ್ಮ ಸಮಕಾಲೀನ ವಿಕ್ಷಿಪ್ತ ಪರಿಸರಕ್ಕೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಮಾನವೀಯವಾಗಿ ಸ್ಪಂದಿಸಿ, ಬದುಕಿನ ಮೌಲ್ಯ ಶೋಧನೆಗೆ ತೊಡಗಿದರು. ಹೀಗಾಗಿ ಅವರ ಕೃತಿಗಳು ಎಲ್ಲ ಕಾಲದ ಪ್ರಜ್ಞಾವಂತ ಸಾಹಿತ್ಯಾಸಕ್ತರ ಗಮನ ಸೆಳೆಯಬಲ್ಲ, ಎಂಥ ವಿಮರ್ಶಕರ ಆಹ್ವಾನವನ್ನೂ ಸ್ವೀಕರಿಸಬಲ್ಲ ಎದೆಗಾರಿಕೆ ಯನ್ನು ಪಡೆದಿವೆ ಎನ್ನಲಡ್ಡಿಯಿಲ್ಲ.

ದಾಸ ಸಾಹಿತ್ಯವು ಪುರಂದರದಾಸರನ್ನು ಕಳೆದುಕೊಂಡಿದ್ದರೆ ಮುಕ್ಕಾಗುತ್ತಿತ್ತು, ಆದರೆ ಕನಕದಾಸರನ್ನು ಕಳೆದುಕೊಂಡಿದ್ದರೆ ಮೂಲೆಗುಂಪಾ
ಗುತ್ತಿತ್ತು ಎಂಬುದನ್ನು ಮರೆಯುವಂತಿಲ್ಲ. ಪುರಂದರದಾಸರ ಕೀರ್ತನೆಗಳ ಸಂಖ್ಯೆಗೆ ಹೋಲಿಸಿದರೆ ಕನಕದಾಸರವು ಅಲ್ಪ ಪ್ರಮಾಣದವು
ಎನಿಸುತ್ತದೆ. ಆದರೆ ಕನಕದಾಸರ ಕೀರ್ತನೆಗಳ ಸತ್ವವು ಪುರಂದರದಾಸರ ಕೀರ್ತನೆಗಳ ಸತ್ವದೊಂದಿಗೆ ಸಮಸ್ಪರ್ಧಿಯಾಗಬಲ್ಲದು.

ಪುರಂದರರ ಕೀರ್ತನೆಗಳಲ್ಲಿಯಂತೆ ಮುಖ್ಯವಾದ ಕಾವ್ಯಗುಣ ಕೇವಲ ಪಲ್ಲವಿಯಲ್ಲಿ ಮಡುಗಟ್ಟಿ, ಉಳಿದ ಚರಣಗಳಲ್ಲಿ ಅದರ ಸಮರ್ಥನೆಯ
ತರ್ಕವಾಗಿಯೋ ಅಥವಾ ಪಲ್ಲವಿಯಲ್ಲಿನ ಧ್ವನಿಯನ್ನು ವಾಚ್ಯವಾಗಿ ವಿವರಿಸುವ ಪದ್ಧತಿಯಲ್ಲಿಯೋ ಪರ್ಯವಸಾನವಾ ಗುವುದು ಕನಕರಲ್ಲಿ ಕಡಿಮೆಯೆಂದು ಹೇಳಬಹುದು. ಕನಕರಲ್ಲಿ ಕಂಡುಬರುವ ಆಶ್ಚರ್ಯ, ಜಿಜ್ಞಾಸೆಗಳು ಬೇರೆಯವರಲ್ಲಿ ವಿರಳವೆನ್ನಬಹುದು ಎಂಬ ಜಿ.ಎಸ್. ಶಿವರುದ್ರಪ್ಪನವರ ಅಭಿಪ್ರಾಯವನ್ನು ಗಮನಿಸಿದಾಗ, ಕನಕರ ಕೀರ್ತನೆಗಳ ಅಂತಃಸತ್ವ ಮತ್ತು ಹಿರಿಮೆ-ಗರಿಮೆಗಳು ಅರಿವಾಗುತ್ತವೆ.
ಕೀರ್ತನಕಾರ, ದಾರ್ಶನಿಕ, ಸಮಾಜ ಸುಧಾರಕ ಈ ಎಲ್ಲವೂ ಆಗಿದ್ದ ಕನಕರು, ಭಕ್ತರಾಗಿಯೂ ಸ್ವಬಂಡಾಯ ಮನೋಧರ್ಮದ ಚಿಕಿತ್ಸಕ ರಾಗಿದ್ದರು. ಕಾವ್ಯಪ್ರತಿಭೆಯ ಪ್ರದರ್ಶನಕ್ಕೆ ಭಾಷಾ ಪ್ರೌಢಿಮೆ, ಹೊಗಳಿಕೆಗಳನ್ನು ಸಾಮಾನ್ಯವಾಗಿ ಸಾಮಗ್ರಿ ಮಾಡಿಕೊಳ್ಳುತ್ತಿದ್ದ ಆ
ಕಾಲದಲ್ಲಿ ಅನುಭವ-ಅಭಿವ್ಯಕ್ತಿಯನ್ನು ಏಕಮಾಡಿ ಕೊಂಡು ಸಾಹಿತ್ಯ ರಚಿಸಿದ ಅವರು, “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಎಂಬ ಕೀರ್ತನೆಯಲ್ಲಿ ಮಾನವ ಬದುಕಿನ ಸಿದ್ಧಾಂತವನ್ನು ತೋರಿಸಿದ್ದಾರೆ, ಬದುಕಿನ ಬೆಡಗನ್ನು ಬಣ್ಣಿಸುತ್ತಲೇ ಅದರ ಗುಟ್ಟನ್ನು ರಟ್ಟಾಗಿಸಿದ್ದಾರೆ.

ಲಕ್ಷ್ಮೀಶ, ಕುಮಾರವ್ಯಾಸ, ಪುರಂದರರ ಹಾಗೆ ವೈಷ್ಣವ ಭಕ್ತಿಪಂಥಕ್ಕೆ ಸೀಮಿತರಾಗದ ಕನಕರು, “ದಾಸದಾಸರ ಮನೆಯ ದಾಸಿಯರ ಮಗ ನಾನು, ಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಶಂಕುದಾಸರ ಮನೆಯ ಮಂಕುದಾಸನು ನಾನು, ಬಿಂಕದಿ ಬಾಗಿಲ ಕಾಯ್ವ ಬಡದಾಸ ನಾನಯ್ಯ, ಕಾಳಿದಾಸರ ಮನೆಯ ಕೀಳುದಾಸನು ನಾನು” ಎಂದು ಮೊರೆಯಿಟ್ಟು, ಮೌಢ್ಯ-ಕಂದಾಚಾರ, ಅನಿಷ್ಟ ನಂಬಿಕೆಗಳನ್ನು ಟೀಕಿಸಿದ್ದಾರೆ.

ಹಿಂದೂ ಧರ್ಮಕ್ಕೆ ಶಾಪವಾಗಿದ್ದ ಶ್ರೇಣೀಕೃತ ವರ್ಣವ್ಯವಸ್ಥೆಯನ್ನು ಹೋಗಲಾಡಿಸಿ ಎಂದು ಕರೆನೀಡುವ ಕನಕರು, ತಮ್ಮನ್ನು ಈ
ನಿಟ್ಟಿನಲ್ಲಿ ವಿರೋಽಸಬಂದವರಿಗೆ “ಆತ್ಮ ಯಾವ ಕುಲ? ಜೀವ ಯಾವ ಕುಲ?” ಎಂದು ಕೇಳುತ್ತಾರೆ. ಕುಲವನ್ನು ಖಂಡಿಸುವಲ್ಲಿ ಬಸವೇಶ್ವರ,
ಸರ್ವಜ್ಞರಷ್ಟೇ ಧೈರ್ಯವನ್ನು ಕನಕರು ತೋರಿಸಿದ್ದಾರೆ. ಕುಲಾಚಾರ ವನ್ನು ಮಾಡುವ ಸಮಾಜಕ್ಕೆ, “ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂದು ಧೈರ್ಯವಾಗಿ ಸವಾಲೆಸೆದಿದ್ದಾರೆ. ಕುಲ-ಜಾತಿಗಳ ತಾರತಮ್ಯ ಖಂಡಿಸುವ ಕನಕರ ನಿಷ್ಠು ರತೆ, ಸ್ಪಷ್ಟತೆ ಮಿಕ್ಕ ದಾಸರ ಕೀರ್ತನೆಗಳಲ್ಲಿ ಕಾಣುವುದು ಕಮ್ಮಿ. ಗ್ರಾಮೀಣ ಪರಿಸರದಲ್ಲಿ ಬೆಳೆದ ಕನಕದಾಸರು, ಆ ಗ್ರಾಮೀಣ
ಸತ್ವವನ್ನು ತಮ್ಮ ಕೀರ್ತನೆಯ ತತ್ತ್ವಗಳಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕನಕರ ಪ್ರಾಮಾಣಿಕ ದೃಷ್ಟಿಗೆ ಕಪಟ ಕೃತ್ಯಗಳು ಒಗ್ಗುವುದಿಲ್ಲ, ಆದ್ದರಿಂದಲೇ ಅವರ ಆಕ್ಷೇಪಣೆಯ ಧಾಟಿ ಕಟುವಾಗಿರುತ್ತದೆ. ದಿಟವಿದ್ದಲ್ಲಿ ದಿಟ್ಟತನ ತಪ್ಪದಷ್ಟೇ!

ಕನಕರ ಪ್ರತಿ ಮಾತಿನಲ್ಲೂ ಉಪದೇಶಾಮೃತವಿದೆ. ಸಮಾಜದ ನಿಮ್ನವರ್ಗದಿಂದ ಬಂದ ಒಂದೇ ಕಾರಣಕ್ಕೆ ಅನುಭವಿಸಬೇಕಾಗಿ ಬಂದ ಅವಮಾನ- ಅಪಹಾಸ್ಯ ಗಳಿಂದಾಗಿ ಪಟ್ಟ ಸಂಕಟ, ಒತ್ತಡಗಳ ನಡುವೆ ಅವರು ಹೊಮ್ಮಿಸಿದ ಜೀವಸಂದೇಶ ಅಮೂಲ್ಯವಾ ದುದು. ಆ
ಹುಟ್ಟಿನ ಕಾರಣಕ್ಕಾಗಿ ಅನುಭವಿಸಿದ ಸಮಾಜನಿರ್ಮಿತ ನೆಲೆಗಳನ್ನು ಕಿತ್ತೆಸೆಯಲು ಅನುಸರಿಸಿದ ನಿಷ್ಠುರ ಕ್ರಿಯೆಗಳಿಂದಾಗಿ ಕನಕರಿಗೆ ಮಹತ್ವ ಬರುತ್ತದೆ. ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ ಮುಂತಾದ ಕೃತಿಗಳನ್ನಲ್ಲದೆ, ಕೀರ್ತನೆಗಳು, ಮುಂಡಿಗೆಗಳು, ಸುಳಾದಿಗಳು, ಉಗಾಭೋಗಗಳನ್ನು ರಚಿಸಿದ ಕನಕರು, ಸಮಾಜ ಸಂಘಟನೆ ಮತ್ತು ಪರಿವರ್ತನೆಗಳಲ್ಲಿ ಸರಿಸಾಟಿ
ಯಿಲ್ಲವೆಂಬಂತೆ ದುಡಿದರು. ಅಂದಿನವರು, ಇಂದಿನ ವರು ಮತ್ತು ಮುಂದಿನವರು ಮರೆಯಲು ಸಾಧ್ಯವಾಗದಂತೆ ಬಾಳಿ ಬದುಕಿದ ಮಹಾಚೇತನ ಕನಕದಾಸರು.

“ಕನಕದಾಸರಲ್ಲಿ ವಿಚಾರ ಸ್ವಾತಂತ್ರ್ಯ, ಜನಜೀವನದ ಜನಭಾಷೆಯ ಅರಿವು ಹೆಚ್ಚು. ತಮ್ಮ ಎಷ್ಟೋ ಕೀರ್ತನೆಗಳಲ್ಲಿ ಅವರು ಸಮಾಜದ ಕುಂದುಕೊರತೆಗಳ ಕುರಿತು ಮುಚ್ಚುಮರೆಯಿಲ್ಲದೆ ನುಡಿದಿದ್ದಾರೆ. ಅವರ ಕಳಕಳಿ ನೈಜ, ಮಾತು ಹರಿತ, ನಿರೀಕ್ಷಣೆ ತೀವ್ರ ಎಂಬುದು ಇದರಿಂದ ತಿಳಿಯುತ್ತದೆ” ಎಂದಿದ್ದಾರೆ ರಂ.ಶ್ರೀ.ಮುಗಳಿ ಅವರು. ಮತ್ತೊಂದೆಡೆ ವರದರಾಜರಾಯರು, “ಕೆಚ್ಚು ನುಡಿ, ಭಕ್ತಿಪಾರಮ್ಯ, ರಹಸ್ಯ ತತ್ತ್ವ ವಿಶಾಲದೃಷ್ಟಿಗಳು ಕನಕದಾಸರ ಕೀರ್ತನೆಯ ಮುಖ್ಯ ಲಕ್ಷಣಗಳು. ಇವನ್ನು ಪುನಃ ಓದಿ ಓದಿ ತಿಳಿಯಬಹುದೇ ಹೊರತು ಒಮ್ಮೆ ಪಠಿಸಿ
ಬಿಡುವಂತಿಲ್ಲ. ಕನಕದಾಸರ ನಡೆ ಆಧ್ಯಾತ್ಮಿಕ ಲೋಕದಲ್ಲಿ ಒಂದು ಮುನ್ನಡೆ. ಅವರ ನುಡಿ ಮಾನವಕೋಟಿಗೆ ಒಂದು ಕನ್ನಡಿ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ವಚನ ಸಾಹಿತ್ಯದಲ್ಲಿ ಕಂಡುಬರುವ ‘ಬೆಡಗಿನ ವಚನ’ಗಳಂತೆ, ಕನಕದಾಸರು ರಚಿಸಿರುವ ಮುಂಡಿಗೆಗಳು ‘ಕನಕ ಮುಂಡಿಗೆ’ಗಳೆಂದೇ ಪ್ರಖ್ಯಾತವಾಗಿದ್ದು, ಅವರ ಮತ್ತೊಂದು ಮುಖವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ಈ ಮುಂಡಿಗೆಗಳಲ್ಲಿ ಚಮತ್ಕಾರದ ಜತೆಜತೆ ಯಲ್ಲೇ ಪಾಂಡಿತ್ಯ, ತತ್ತ್ವಜ್ಞಾನ, ಆತ್ಮಾನುಭವ ಮುಂತಾದವು ಆಕರ್ಷಕವಾಗಿ ವ್ಯಕ್ತಗೊಂಡಿವೆ. ಅವನ್ನು ಅರ್ಥಮಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಆದ್ದರಿಂದಲೇ, “ಕನಕನನ್ನು ಕೆಣಕಬಾರದು, ಕೆಣಕಿದ ಮೇಲೆ ತಿಣುಕಬಾರದು” ಎಂಬ ಮಾತು ಹುಟ್ಟಿಕೊಂಡಿರಬೇಕು! ಕನ್ನಡ ಸಾಹಿತ್ಯದ ಮುಖ್ಯವಾಹಿನಿಯು ಮೊದಲಿನಿಂದಲೂ ಹರಿಯುತ್ತಿದ್ದುದು ಅರಮನೆ ಮತ್ತು ಕೋಟೆ-ಕೊತ್ತಲಗಳ ಸುತ್ತಲಿನ ಕಂದಕದ ಕಡೆಗೆ. ಆದರೆ, ಸಮಕಾಲೀನ ಜೀವನವನ್ನು ಸ್ಪಷ್ಟವಾಗಿ ನೋಡುವ, ನಡೆಯುವ, ಅಳೆಯುವ, ಮಾರ್ಪಡಿಸುವ, ವಿಮರ್ಶೆಗೆ ಗುರಿಮಾಡಿ ಹೊಸದಿಕ್ಕಿಗೆ ಒಯ್ಯುವ ಸಾಮಾಜಿಕ ಧ್ಯೇಯೋದ್ದೇಶದಿಂದ ಕವಿತ್ವವನ್ನು ಸಮಕಾಲೀನವಾಗಿ ಸ್ಪಂದಿಸುವಂತೆ ಬಳಸಿಕೊಂಡು ಕ್ರಾಂತಿಯ ಕಿಚ್ಚನ್ನು ನಿಗಿನಿಗಿ ಎನ್ನುವಂತೆ ಮಾಡಿದವರು ಕನಕದಾಸರು.

ಸಾಹಿತ್ಯ, ಜೀವನ ಮತ್ತು ನೈತಿಕ ಮೌಲ್ಯಗಳ ನಿರೂಪಣೆಯ ಕಾರಣದಿಂದಾಗಿ ದಾಸಶ್ರೇಷ್ಠರಾಗಿ ಪರಿಗಣಿಸಲ್ಪಟ್ಟಿದ್ದಾರೆ ಕನಕರು. ಈ ವಿಭೂತಿ ಪುರುಷರು ಸಂತರಾಗುವ ಮುನ್ನ ದಣ್ಣಾಯಕರಾಗಿದ್ದರು ಎಂಬುದನ್ನು, “ದೊರೆತನವ ಬಿಡಿಸಿ, ಸುಸ್ಥಿರ ಮಾರ್ಗ ತೋರಿಸಿದೆ, ನರಮಾತ್ರ ದವನೆನದೆ ಹರಿಯೆ…” ಎಂಬ ಅವರದೇ ಸಾಲು ಹೇಳುತ್ತದೆ. ವ್ಯಕ್ತಿಯು ಹುಟ್ಟಿದ ನೆಲೆ ಮುಖ್ಯವಲ್ಲ, ಆತ ಮುಟ್ಟಿದ ಭೇದರಹಿತ ಎತ್ತರಕ್ಕೆ ಬೆಲೆ ಎಂಬುದನ್ನು ಕನಕರು ಸ್ವಾನುಭವಪೂರ್ಣವಾಗಿ ಹೇಳಿದ್ದಾರೆ. ಇದು ಸಾರ್ವತ್ರಿಕ ಸತ್ಯ. ಅತೀವ ವಿಚಾರವಂತರಾಗಿದ್ದ ಕನಕದಾಸರು, ಮೇಲ್ವರ್ಗದವರ ಖುಷಿಗಾಗಿ ಹುಟ್ಟುಹಾಕಲಾಗಿದ್ದ ಬೆತ್ತಲೆ ಸೇವೆಯ ಕುರಿತು ಮನನೊಂದು, ಅವಿದ್ಯೆ, ಅಜ್ಞಾನ, ಮೌಢ್ಯಗಳ ಕತ್ತಲ ಕೋಣೆಯಲ್ಲಿ ಕಾಲ ಕಳೆಯುತ್ತಿದ್ದ ಜನಸಾಮಾನ್ಯರಿಗೆ ತಿಳಿಹೇಳಲು ಯತ್ನಿಸಿದ್ದು ಸರ್ವಕಾಲಕ್ಕೂ ಸ್ತುತ್ಯರ್ಹವಾದುದು. ಕಂದಾಚಾರಗಳನ್ನು, ಅರ್ಥವಿಲ್ಲದ ಆಚರಣೆಗಳನ್ನು ಕನಕರಂತೆ ಬೇರಾವ ದಾಸರೂ ಖಂಡಿಸಿಲ್ಲ. ಜನಪದ ಭಾಷೆಯ ಸಾಧ್ಯತೆಗಳನ್ನೆಲ್ಲ ಸೂರೆ ಮಾಡಿ ಸೆರೆ ಹಿಡಿದು ಕೊಟ್ಟ ಕನಕರು, ಉಪ್ಪು-ಹುಳಿ-ಖಾರವಿಲ್ಲದ ದಾಸಸಾಹಿತ್ಯದ ಸಪ್ಪೆ ಅಭಿವ್ಯಕ್ತಿಗೆ ಚುರುಕುತನವನ್ನು ತಂದುಕೊಟ್ಟವರು.

ದಾಸ ಸಾಹಿತ್ಯ ಕ್ಷೇತ್ರದಲ್ಲಿ ವಟವೃಕ್ಷದಂತೆ ಬೆಳೆದು ನಿಂತಿದ್ದ ಕನಕರು, ಕರ್ನಾಟಕದಲ್ಲಿ ಮಾತ್ರವಲ್ಲದೆ ಅನ್ಯಪ್ರಾಂತ್ಯಗಳಲ್ಲೂ ಹೆಸರುವಾಸಿ ಯಾಗಿದ್ದರು. ಕೇರಳದ ಅನಂತಶಯನಂ ಊರ ಬಳಿಯಲ್ಲಿರುವ ಕನಕನ ಕೊಳ’, ರಾಜಸ್ಥಾನದ ಜೈಪುರ ಅರಮನೆಯ ಮುಂದಿರುವ ‘ಕನಕ ಬೃಂದಾವನ’ ಎಂಬ ಸ್ಥಳನಾಮಗಳು ಇದಕ್ಕೆ ಸಾಕ್ಷಿಯಾಗಿವೆ. “ಕನಕ, ಮೀರು ಬಂಗಾರ ತುಣಕ, ಕನ್ನಡ ಕವುಲೆಲ್ಲ ನೂವೆನಕ” (ಕನಕ, ನೀನು ಬಂಗಾರದ ತುಣುಕು, ಕನ್ನಡ ಕವಿಗಳಲ್ಲೆಲ್ಲ ನೀನು ಅಗ್ರಗಣ್ಯ) ಎಂಬ ಆಂಧ್ರದವರ ಪ್ರಶಂಸೆ ಇಂಥ ಮತ್ತೊಂದು ನಿದರ್ಶನ.

ಸಮಾಜದ ಸ್ಥಿತಿಗತಿಗಳನ್ನು ತೆರೆದ ಕಣ್ಣಿಂದ ನೋಡಿದ ಕನಕದಾಸರು ಜಾತಿವರ್ಗಗಳ ಅನಿಷ್ಟವನ್ನು ನಿಷ್ಠುರವಾಗಿ ಖಂಡಿಸಿದ್ದಾರಲ್ಲದೆ, ‘ಭಕ್ತವರ್ಗ’ವೆಂಬ ಜಾತ್ಯತೀತ ಸಮಾಜವನ್ನು ‘ಭಕ್ತಿಮೌಲ್ಯ’ದಿಂದ ಕಟ್ಟಿದ್ದಾರೆ. ವ್ಯಂಗ್ಯ, ವಿಡಂಬನೆ, ಮಾರ್ಮಿಕ ನುಡಿಗಟ್ಟಿನಿಂದ ಸಮಾಜವನ್ನು ಚಿಂತನೆಗೆ ಹಚ್ಚಿದವರು ಕನಕರು. ಆದರೆ, ಅವರು ತಮ್ಮ ಸಮಕಾಲೀನ ಸಮಾಜದಲ್ಲಿ ಕಂಡು ಖಂಡಿಸಿದ್ದ ಅಪಮೌಲ್ಯಗಳು ಇಂದಿಗೂ ಹೇಗೋ ಮುಂದುವರಿದು ಕೊಂಡು ಉಳಿದಿವೆ. ಪ್ರಗತಿಪರ ಸಮಾಜದ ನಿರೀಕ್ಷೆಯಲ್ಲಿರುವ ನಾವು, ಕನಕದಾಸರ ಬೋಧನೆಗಳನ್ನು ಇಂದಿಗೂ ಅನ್ವಯಿಸಿ, ಪುನರುಚ್ಚರಿಸಿ, ಬೇರುಬಿಟ್ಟ ಅನಿಷ್ಟಗಳಿಂದ ಪಾರಾಗಬೇಕಿದೆ.

ಆಗ ಮಾತ್ರವೇ ಅರ್ಥಪೂರ್ಣವಾದ ಆಧ್ಯಾತ್ಮಿಕ ವಾತಾವರಣ ನಮ್ಮ ಮಧ್ಯೆ ತಲೆ ಎತ್ತೀತು. ತಮ್ಮ ಕಾಲಕ್ಕೆ ಕನಕರು ಕಂಡುಕೊಂಡ ಸತ್ಯವು ಇಂದಿಗೂ, ಮುಂದೆಯೂ ಮಾರ್ಗದರ್ಶಿ. ಅಂತೆಯೇ, ಕನಕದಾಸರು ಸಾರ್ವಕಾಲಿಕ ಸತ್ಯವನ್ನು ಸಾರಿದ ಸಂತರಾಗಿದ್ದಾರೆ.

(ಲೇಖಕರು ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು)

ಇದನ್ನೂ ಓದಿ: Kannadacolumn