Saturday, 23rd November 2024

5ನೇ ದಿನಕ್ಕೆ ಕಾಲಿಟ್ಟ ರೈತರ ಬೃಹತ್ ಪ್ರತಿಭಟನೆ ’ದೆಹಲಿ ಚಲೋ’

ನವದೆಹಲಿ: ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ 5ನೇ ದಿನಕ್ಕೆ (ಸೋಮವಾರ) ಕಾಲಿಟ್ಟಿದೆ.

ರಾಜಧಾನಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರವೇಶದ ಐದು ಪ್ರವೇಶದ್ವಾರ ಗಳನ್ನು ಬಂದ್ ಮಾಡುವು ದಾಗಿ ಪ್ರತಿಭಟನಾ ನಿರತ ರೈತರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರೈತರು ನವೆಂಬರ್ 26 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿ ಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆ ಹಿಂಪಡೆದುಕೊಂಡಿದ್ದರು. ದೆಹಲಿ ಪ್ರವೇಶಿಸದಂತೆ ಗಡಿಯಲ್ಲೇ ತಡೆದಿದ್ದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳಗಳಲ್ಲಿಯೇ ಪ್ರತಿಭಟನೆ ಮುಂದುವರೆಸಿದ್ದಾರೆ.

ರೈತರ ಪ್ರತಿಭಟನೆಗೆ ವಿವಿಧ ಭಾಗಗಳಲ್ಲಿರುವ ರೈತರೂ ಕೂಡ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ದೆಹಲಿಗೆ ಸಮೀಪ ಇರುವ ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗ ವಹಿಸಿದ್ದಾರೆ.

ಗುರುನಾನಕ್ ಜಯಂತಿ, ಸಿಖ್ ಸಮುದಾಯದ ಪುಣ್ಯದಿನವಾಗಿದ್ದು, ಹಬ್ಬದ ದಿನವಾದರೂ ಪ್ರತಿಭಟನೆ ಕೈಬಿಡದ ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿ ಪ್ರವೇಶಿಸುವ ಸಿಂಘು ಗಡಿ ಪ್ರದೇಶದಿಂದಲೇ ಪ್ರಾರ್ಥನೆ ಸಲ್ಲಿಸಿದ್ದಾರೆ.