ಮುಂಬಯಿ: ಮುಂಬರುವ ಸೈಯದ್ ಮುಷ್ತಾಕ್ ಅಲಿ(SMAT 2024) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಮುಂಬೈ(Mumbai) ತಂಡವನ್ನು ಮುನ್ನಡೆಸಲಿದ್ದಾರೆ. ಈ 23 ರಿಂದ ಡಿಸೆಂಬರ್ 15ರವರೆಗೆ ಟೂರ್ನಿಯು ನಡೆಯಲಿದೆ. ಭಾರತ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರೇಯಸ್ ಅಯ್ಯರ್‌ಗೆ(Shreyas Iyer) ಈ ಟೂರ್ನಿ ಪ್ರಮುಖವಾಗಿದೆ.
ರಣಜಿ ಟೂರ್ನಿಯಲ್ಲಿ ಅಯ್ಯರ್ ಒಡಿಶಾ ವಿರುದ್ಧ ದ್ವಿಶತಕ ಬಾರಿಸಿ ಮಿಂಚಿದ್ದರು. ಫಿಟ್‌ನೆಸ್ ಮತ್ತು ಫಾರ್ಮ್ ಕಳೆದುಕೊಂಡು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಕೂಡ ತಂಡದಲ್ಲಿದ್ದಾರೆ. ಅನುಭವಿ ಆಟಗಾರ ರಣಜಿ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಆಲ್‌ರೌಂಡರ್ ಶಿವಂ ದುಬೆ, ಮುಶೀರ್ ಖಾನ್ ಮತ್ತು ತುಷಾರ್ ದೇಶಪಾಂಡೆ ಅವರನ್ನು ಗಾಯದಿಂದ ಚೇತರಿಕೆ ಕಾಣದಿಂದ ಟೂರ್ನಿಗೆ ಪರಿಗಣಿಸಲಾಗಿಲ್ಲ. ಮುಂಬೈ ತಂಡ ‘ಇ’ ಗುಂಪಿನಲ್ಲಿ ಕಾಣಿಸಿಕೊಂಡಿದ್ದು ತನ್ನ ಮೊದಲ ಪಂದ್ಯವನ್ನು ಗೋವಾದ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ನ.23 ರಂದು ನಡೆಯಲಿದೆ.
ಮುಂಬೈ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಅಂಗಕ್ರಿಷ್ ರಘುವಂಶಿ, ಜೈ ಬಿಸ್ತ್, ಅಜಿಂಕ್ಯ ರಹಾನೆ, ಸಿದ್ಧೇಶ್ ಲಾಡ್, ಸೂರ್ಯಾಂಶ್ ಶೆಡ್ಗೆ, ಸಾಯಿರಾಜ್ ಪಾಟೀಲ, ಹಾರ್ದಿಕ್ ತಮೋರೆ (ವಿಕೆಟ್‌ಕೀಪರ್), ಆಕಾಶ್ ಆನಂದ್ (ವಿಕೆಟ್‌ಕೀಪರ್), ಶಮ್ಸ್ ಮುಲಾನಿ, ಹಿಮಾಂಶು ಸಿಂಗ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ಮೋಹಿತ್ ಅವಸ್ತಿ, ರಾಯ್ಸ್‌ಟನ್ ದಿಯಾಸ್, ಜುನೇದ್ ಖಾನ್.
ಇದನ್ನೂ ಓದಿ SMAT 2024: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ರಾಜ್ಯ ತಂಡ ಪ್ರಕಟ; ಸಮಿತ್ ದ್ರಾವಿಡ್‌ಗೆ ನಿರಾಸೆ
ಕರ್ನಾಟಕ ತಂಡಕ್ಕೆ ಅಗರ್ವಾಲ್ ನಾಯಕ
ಕರ್ನಾಟಕ ತಂಡವನ್ನು ಮಯಾಂಕ್ ಅಗರ್ವಾಲ್ (Mayank Agarwal) ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರ ಮನೀಶ್ ಪಾಂಡೆ ಉಪ ನಾಯಕನಾಗಿದ್ದು, ವಿಕೆಟ್ ಕೀಪರ್ ಗಳಾಗಿ ಶ್ರೀಜಿತ್ ಕೆಎಲ್ ಮತ್ತು ಚೇತನ್ ಎಲ್ ಆರ್ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ವೇಗಿ ವೈಶಾಖ್ ವಿಜಯ್ ಕುಮಾರ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವಿಜಯ್ ಕುಮಾರ್ ಹರಿಣಗಳ ನಾಡಿನಲ್ಲಿ ಪದಾರ್ಪಣೆ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಆಡುವ ಅವಕಾಶ ಸಿಗಲಿಲ್ಲ.
ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ಗುಜರಾತ್, ಸೌರಾಷ್ಟ್ರ, ತಮಿಳುನಾಡು ಮತ್ತು ಬರೋಡಾ ತಂಡಗಳು ಕಾಣಿಸಿಕೊಂಡಿದೆ. ನವೆಂಬರ್ 23 ರಂದು ಉತ್ತರಾಖಂಡ ವಿರುದ್ಧ ಕಣಕ್ಕಿಳಿಯುವ ಮೂಲಕ ಕರ್ನಾಟಕ ತಂಡ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯಲ್ಲಿ ರಾಜ್ಯ ತಂಡ ತನ್ನ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ನಾಕೌಟ್ ಪ್ರವೇಶಿಸಲು ವಿಫಲವಾಗಿತ್ತು.
ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾಯಕ), ಮನೀಶ್ ಪಾಂಡೆ (ಉಪ ನಾಯಕ), ದೇವದತ್ತ ಪಡಿಕ್ಕಲ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್, ಶ್ರೀಜಿತ್ ಕೆಎಲ್, ವೈಶಾಖ್ ವಿಜಯ್ ಕುಮಾರ್, ಮೆಖೈಲ್ ಎಚ್ ನರೋನ್ಹಾ, ಕೌಶಿಕ್ ವಿ, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಚೇತನ್ ಎಲ್ ಆರ್, ಶುಭಾಂಗ್ ಹೆಗ್ಡೆ ಮತ್ತು ಮನ್ವಂತ್ ಕುಮಾರ್ ಎಲ್.