Monday, 18th November 2024

ಬ್ಯಾಟ್‌ ಬದಿಗಿಟ್ಟು ಮೈಕ್‌ ಹಿಡಿದ ಪೂಜಾರ; ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಕಾಮೆಂಟರಿ

Cheteshwar Pujara

ಮುಂಬಯಿ: ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌(Border Gavaskar Trophy) ಸರಣಿಯಲ್ಲಿ ಭಾರತ ತಂಡದ ಗೆಲುವಿಗೆ ನೋವನ್ನು ಲೆಕ್ಕಿಸದೆ ಚೆಂಡಿನೇಡು ತಿಂದಿದ್ದ ಚೇತೇಶ್ವರ್‌ ಪೂಜಾರ(Cheteshwar Pujara) ಈ ಬಾರಿಯ ಪ್ರವಾಸದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದಾರೆ. ಇದೀಗ ಅವರು ಸ್ಟಾರ್‌ ಸ್ಪೋರ್ಟ್ಸ್‌ ಹಿಂದಿ(Star Sports Hindi) ಚಾನೆಲ್‌ನಲ್ಲಿ ಟೆಸ್ಟ್‌ ಸರಣಿಯ ಕಾಮೆಂಟರಿ ಮಾಡಲಿದ್ದಾರೆ.

2020-21ರ ಬಾರ್ಡರ್‌- ಗಾವಸ್ಕರ್‌ ಟ್ರೋಫಿ (Border Gavaskar Trophy) ಭಾರತದ ಪಾಲಿಗೆ ಅವಿಸ್ಮರಣೀಯ ಸರಣಿ. ಅಂದು ಆಸೀಸ್‌ ಬೌಲರ್‌ಗಳ ಬೆಂಕಿ ಎಸೆತಕ್ಕೆ ಚೇತೇಶ್ವರ ಪೂಜಾರ ತಿಂದ ಪೆಟ್ಟಿನ ನೋವು ಭಾರತೀಯರು ಮರೆಯಲು ಅಸಾಧ್ಯ. ಈ ಬಾರಿ ಅವರು ಬ್ಯಾಟ್‌ ಬದಲು ಮೈಕ್‌ ಹಿಡಿದು ಆಟಗಾರರ ಪ್ರದರ್ಶನವನ್ನು ವರ್ಣಿಸಲಿದ್ದಾರೆ. ಮೊದಲ ಬಾರಿಗೆ ಕಾಮೆಂಟ್ರಿ ಪ್ಯಾನಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭಾರತ ತಂಡ 2018-19 ಮತ್ತು 2020-21ರ ಕೊನೇ ಎರಡು ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್​ ಸರಣಿಗಳಲ್ಲಿ 2-1 ಅಂತರದಿಂದ ಜಯಿಸಿತ್ತು. ಅಲ್ಲದೆ 2016-17ರಿಂದ ಬಾರ್ಡರ್​-ಗಾವಸ್ಕರ್​ ಟ್ರೋಫಿ ಭಾರತದ ಕೈಯಲ್ಲೇ ಇದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಸತತ 3ನೇ ಬಾರಿ ಫೈನಲ್​ಗೇರಲು ಆಸೀಸ್​ನಲ್ಲಿ 4-0ಯಿಂದ ಸರಣಿ ಗೆಲ್ಲುವ ಸವಾಲು ಕೂಡ ಭಾರತದ ಮುಂದಿದೆ.

​35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ. ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್​ಗೆ ಬಂದ ಚೆಂಡನ್ನು ಬ್ಯಾಟ್​ ಎತ್ತಿ ಹಿಡಿದು ಕ್ಲೀನ್​ ಬೌಲ್ಡ್​ ಆಗಿದ್ದರು. ಪೂಜಾರ ಈ ರೀತಿ ವಿಕೆಟ್​ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಪೂಜಾರ ಇದುವರೆಗೆ ಭಾರತ ಪರ 103 ಟೆಸ್ಟ್​ ಪಂದ್ಯ ಆಡಿ 7195 ರನ್​ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 35 ಅರ್ಧಶತಕ ಒಳಗೊಂಡಿದೆ.

ಇದನ್ನೂ ಓದಿ IND vs AUS: ಜಸ್‌ಪ್ರೀತ್ ಬುಮ್ರಾರಲ್ಲಿ ನಾಯಕತ್ವದ ಗುಣ ಇದೆಯಾ? ಸುರೇಶ್ ರೈನಾ ಹೇಳಿದ್ದಿದು!

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಚೇತೇಶ್ವರ ಹೆಸರಿನಲ್ಲಿದೆ. ಅವರು ಒಟ್ಟು 17* ದ್ವಿಶತಕ ಬಾರಿಸಿದ್ದಾರೆ. 61 ಶತಕಗಳು ಹಾಗೂ 78 ಅರ್ಧಶತಕಗಳು ಕೂಡ ಬಾರಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 20 ಸಾವಿರ ರನ್ ಪೂರೈಸಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಪೂಜಾರ ಅವರದ್ದಾಗಿದೆ.