Monday, 18th November 2024

West Bengal Unrest: ಬಂಗಾಳದಲ್ಲಿ ಕೋಮು ಗಲಭೆ..ಮನೆಗಳನ್ನು ದೋಚಿ ಬೆಂಕಿ ಇಟ್ಟ ಕಿಡಿಗೇಡಿಗಳು; ಇಂಟರ್‌ನೆಟ್‌ ಸೇವೆ ಸ್ಥಗಿತ

West Bengal Incident

ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನ (Murshidabad) ಬೆಲ್ದಂಗಾದಲ್ಲಿ ಶನಿವಾರ ಎರಡು ಕೋಮುಗಳ ನಡುವೆ ಸಂಘರ್ಷ (Communal riots) ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಆರು ಮಂದಿ ಗಾಯಾಳುಗಳಾಗಿದ್ದಾರೆ. ಎರಡು ಧರ್ಮಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಮಾತಿಗೆ ಮಾತು ಬೆಳೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮುಂಜಾಗೃತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ(West Bengal Unrest).

ಧಾರ್ಮಿಕ ಸಮಾರಂಭದಲ್ಲಿ (LED) ಡಿಸ್ಪ್ಲೇ ಬೋರ್ಡ್‌ನಲ್ಲಿ ಹಾಕಲಾಗಿದ್ದ ಬರಹವನ್ನು ನೋಡಿ ಮತ್ತೊಂದು ಕೋಮು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಬರಹಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಒಂದು ಕೋಮಿನ ಜನ ಗಲಾಟೆ ಶುರು ಮಾಡಿದ್ದಾರೆ. ಎರಡು ಗುಂಪುಗಳ ಜನರ ನಡುವಿನ ಘರ್ಷಣೆಯ ನಂತರ ಉದ್ರಿಕ್ತರ ಗುಂಪು ಹಲವಾರು ಮನೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿದೆ. ಕೆಲ ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಯ ನಂತರ ಬೆಲ್ದಂಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿಯಲ್ಲಿ ಪೊಲೀಸರು ನಿರ್ಬಂಧಗಳನ್ನು ವಿಧಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತೆಗೆ ದಾಖಲು ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗಲಭೆ ನಡೆಸಿದ 17 ಜನರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಶಾಂತಿ ಕಾಪಾಡುವ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪಶ್ಚಿಮ ಬಂಗಾಳ ಪೊಲೀಸರು , “ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದೇವೆ. ಶಾಂತಿ ಕದಡಲು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಮಾಹಿತಿಯನ್ನು ನಂಬಬೇಡಿ” ಎಂದು ಹೇಳಿದ್ದಾರೆ ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರ ಮುರ್ಷಿದಾಬಾದ್ ಮತ್ತು ಜಂಗಿಪುರ ಮತ್ತು ನೆರೆಯ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಘಟನೆಗೆ ಸಂಬಂಧ ಪಟ್ಟಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಇತರೆ ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುರ್ಷಿದಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಸೂರ್ಯಪ್ರತಾಪ್ ಯಾದವ್ ಕಾನೂನು ಮತ್ತು ಸುವ್ಯವಸ್ಥೆಯನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : RG KAR Hospital : ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕೇಂದ್ರ ಸರ್ಕಾರ