ಪರ್ತ್: ಭಾರತ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರ ಆಸ್ಟ್ರೆಲಿಯಾ(IND vs AUS) ಪ್ರಯಾಣ ವಿಳಂಬವಾಗಲಿದೆ. ಹೀಗಾಗಿ ಪರ್ತ್ನಲ್ಲಿ ನಡೆಯುವ ಮೊದಲ ಪಂದ್ಯಕ್ಕೆ ಉಪನಾಯಕ ಜಸ್ಪ್ರೀತ್ ಬುಮ್ರಾ(Jasprit Bumrah) ಭಾರತ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತಗೊಂಡಿದೆ. ಡಿಸೆಂಬರ್ 6ರಿಂದ ಅಡಿಲೇಡ್ನಲ್ಲಿ ಪಿಂಕ್ಬಾಲ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ಗೆ ಮುನ್ನ ರೋಹಿತ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಪರ್ತ್ನ ಆಪ್ಟಸ್ ಸ್ಟೇಡಿಯಂನ ಪಿಚ್ ಭಾರಿ ಬೌನ್ಸ್ನಿಂದ ಕೂಡಿರುವ ಕಾರಣದಿಂದ ಯುವ ವೇಗದ ಬೌಲರ್ ನಿತೀಶ್ ರಾಣಾ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಈ ಮೂಲಕ 4ನೇ ವೇಗದ ಬೌಲರ್ ಆಗಿ ಅವರನ್ನು ಬಳಸಿಕೊಳ್ಳಲು ಭಾರತ ಯೋಜಿಸಿದೆ. 22 ವರ್ಷದ ದಿಲ್ಲಿಯ ವೇಗಿ ನಿತೀಶ್ ಇದುವರೆಗೆ ದಿಲ್ಲಿ ಪರ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಈ ವೇಳೆ 22 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ನಲ್ಲಿ ಕೆಕೆಆರ್ ಪರವೂ ಮಿಂಚಿದ್ದರು.
ಪಡಿಕ್ಕಲ್ಗೆ ಅವಕಾಶ?
ಭಾರತ ಎ ತಂಡದ ಸದಸ್ಯನಾಗಿದ್ದ ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಆಸೀಸ್ನಲ್ಲಿಯೇ ಉಳಿದಿದ್ದಾರೆ. ಶುಭಮಾನ್ ಗಿಲ್ ಎಡಗೈ ಹೆಬ್ಬೆರಳಿನ ಮೂಳೆ ಮುರಿತಕ್ಕೆ ಒಳಗಾಗಿರುವುದರಿಂದ ಅವರ ಸ್ಥಾನಕ್ಕೆ ಮೀಸಲು ಬ್ಯಾಟರ್ ಆಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ದ್ವಿತೀಯ ಟೆಸ್ಟ್ ವೇಳೆಗೂ ಗಿಲ್ ಚೇತರಿಕೆ ಕಾಣುವುದು ಅನುಮಾನ ಎನ್ನಲಾಗಿದೆ. ಆಸ್ಟ್ರೆಲಿಯಾ ಎ ವಿರುದ್ಧದ 2 ಚತುರ್ದಿನ ಪಂದ್ಯಗಳ 4 ಇನಿಂಗ್ಸ್ಗಳಲ್ಲಿ ಪಡಿಕ್ಕಲ್ 36, 88, 26 ಮತ್ತು 1 ರನ್ ಗಳಿಸಿದ್ದರು. ಇದುವರೆಗೆ ಭಾರತ ಪರ ಏಕೈಕ ಟೆಸ್ಟ್ ಆಡಿರುವ 24 ವರ್ಷದ ಪಡಿಕ್ಕಲ್, 65 ರನ್ ಬಾರಿಸಿ ಮಿಂಚಿದ್ದರು. ಒಂದೊಮ್ಮೆ ಗಿಲ್ ಟೂರ್ನಿಯಿಂದ ಹೊರಬಿದ್ದರೆ ಆಗ ಪಡಿಕ್ಕಲ್ ಆಸೀಸ್ ಸರಣಿಯ ಭಾಗವಾಗಲಿದ್ದಾರೆ.
ಇದನ್ನೂ ಓದಿ Border-Gavaskar Trophy: ಆಸೀಸ್ ಟೆಸ್ಟ್ಗೆ ಬುಮ್ರಾ ನಾಯಕನಾಗಲಿ; ಗಾವಸ್ಕರ್
💬💬 On track for the 22nd 🙌
— BCCI (@BCCI) November 18, 2024
Assistant Coach @abhisheknayar1 & Bowling Coach @mornemorkel65 wrap up #TeamIndia's Match Simulation in Perth 👌👌
WATCH 🎥🔽 #AUSvIND
ಶಮಿ ಆಯ್ಕೆ ಅನುಮಾನ
ವರ್ಷದ ಬಳಿಕ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದು 7 ವಿಕೆಟ್ ಕಬಳಿಸಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಪುನರಾಗಮನ ಮಾಡಿದ್ದ ಮೊಹಮದ್ ಶಮಿ ಆಸೀಸ್ ವಿರುದ್ಧದ ದ್ವಿತೀಯ ಟೆಸ್ಟ್ ವೇಳೆಗೆ ತಂಡ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಬಿಸಿಸಿಐ ಶಮಿ ಸೇರ್ಪಡೆಗೆ ಅವಸರ ತೋರುವುದಿಲ್ಲ ಎನ್ನಲಾಗಿದೆ. ಶಮಿ ಇನ್ನಷ್ಟು ದೇಶೀಯ ಪಂದ್ಯಗಳಲ್ಲಿ ಆಡಿ ಹಿಂದಿನ ಲಯ ಕಂಡುಕೊಳ್ಳಲಿ ಎಂದು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಕೂಡ ಬಯಸಿದೆ ಎನ್ನಲಾಗಿದೆ. ಮುಂದಿನ ಫೆಬ್ರವರಿಯಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಮಿಯನ್ನು ಕಣಕ್ಕಿಳಿಸುವ ಯೋಜನೆ ಬಿಸಿಸಿಐನದ್ದು ಎಂದು ತಿಳಿದುಬಂದಿದೆ. ಇದರಿಂದಾಗಿ ಶಮಿ ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲೂ ಆಡುವ ನಿರೀಕ್ಷೆ ಇದೆ.