Monday, 18th November 2024

Kapil Dev: ಪಾಕಿಸ್ತಾನ ಪ್ರಯಾಣದ ಬಗ್ಗೆ ಕಪಿಲ್‌ ಮಹತ್ವದ ಹೇಳಿಕೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್(Kapil Dev) ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿಯ(Champions Trophy) ಸ್ಥಳಗಳು ಮತ್ತು ಭಾರತ-ಪಾಕಿಸ್ತಾನ ಪಂದ್ಯದ(India-Pakistan match) ಸಾಧ್ಯತೆಯ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗಬೇಕೆ ಅಥವ ಬೇಡವೇ ಎಂಬ ನಿರ್ಧಾರಗಳಲ್ಲಿ ಸರ್ಕಾರದ ಪಾತ್ರ ಮುಖ್ಯ ಎಂದು ಹೇಳಿದ್ದಾರೆ.

ಗಾಲ್ಫ್‌ ಪಂದ್ಯದ ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಪಿಲ್‌ಗೆ, ಚಾಂಪಿಯನ್ಸ್‌ ಟ್ರೋಫಿ ಪ್ರವಾಸದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್‌, ʼಇದು ಸರ್ಕಾರದ ಜವಾಬ್ದಾರಿ. ನಮ್ಮಂತಹವರು ಅಭಿಪ್ರಾಯಗಳನ್ನು ನೀಡಬಾರದು. ಇಂತಹ ವಿಚಾರದಲ್ಲಿ ನಮ್ಮ ಅಭಿಪ್ರಾಯಗಳು ಮುಖ್ಯವಲ್ಲ. ಕಪಿಲ್ ದೇವ್ ಬೇರೆಯವರಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲʼ ಎಂದು ಹೇಳಿದರು.

2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಯಾವುದೇ ಸ್ನೇಹಪರ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಶತ್ರು ದೇಶದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯು ಎನ್​ಡಿಎ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ಆದರೆ, ಪಾಕ್​ ಕ್ರಿಕೆಟ್​ ಮಂಡಳಿ ಮಾತ್ರ ಭಾರತ ಕೂಡ ಪಾಕ್​ನಲ್ಲಿಯೇ ಆಡಲಿದೆ ಎಂದು ಬಲವಾಗಿ ನಂಬಿದೆ.

ಪಾಕಿಸ್ತಾನಕ್ಕೆ ಇಂಗ್ಲೆಂಡ್ ಬೆಂಬಲ

ಚಾಂಪಿಯನ್ಸ್‌ ಟ್ರೋಫಿ(Champions Trophy) ಆತಿಥ್ಯ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಬೆಂಬಲ ಸೂಚಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಲಂಡನ್​ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಅವರನ್ನು ಭೇಟಿಯಾಗಿದ್ದು ಅವರ ಬಳಿಕ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯದ ವಿಚಾರದಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪಿಸಿಬಿ ಜತೆ ನಿಲ್ಲುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ. ರಿಚರ್ಡ್ ಥಾಂಪ್ಸನ್ ಜತೆ ಮಾತುಕತೆ ನಡೆಸಿರುವ ಫೋಟೊವನ್ನು ಪಿಸಿಬಿ ತನ್ನ ಅಧಿಕೃತ ಟ್ವೀಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಯಶಸ್ವಿಯಾಗಿ ಆಯೋಜಿಸಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷರು ಭೇಟಿ ವೇಳೆ ಹೇಳಿರುವುದಾಗಿ ಪಾಕ್‌ ಮಾಧ್ಯಮಗಳು ವರದಿ ಮಾಡಿದೆ.