ತಿರುವನಂತಪುರಂ: ಕೇರಳದ ರಾಜಕೀಯವೇ ಒಂಥರಾ ವಿಚಿತ್ರ! ಇಲ್ಲಿ ಎದುರಾಳಿ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷಕ್ಕಾಗಿ, ತಮ್ಮ ನಾಯಕರ ಪರವಾಗಿ ಬೀದಿಬೀದಿಯಲ್ಲೇ ಹೊಡೆದಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಇಂತಹ ಘರ್ಷಣೆ-ಗಲಾಟೆಗಳು ಕೊಲೆಯಲ್ಲಿ ಪರ್ಯಾವಸನಗೊಂಡಿದ್ದೂ ಇದೆ. ಆದರೆ, ಇಲ್ಲೊಂದು ಘಟನೆಯಲ್ಲಿ ಎರಡು ಪಕ್ಷಗಳ ಕಾಯಕರ್ತರು ಬೀದಿಬದಿಯಲ್ಲೇ ಗಲಾಟೆ ಮಾಡುತ್ತಿದ್ದರೂ, ಆಂಬುಲೆನ್ಸ್ ಒಂದು ಬಂದ ಸಂದರ್ಭದಲ್ಲಿ ಅದಕ್ಕೆ ದಾರಿ ಮಾಡಿಕೊಟ್ಟು, ಅದು ಹೋಗುವವರೆಗೆ ತಮ್ಮ ಜಗಳಕ್ಕೆ ʼಕದನ ವಿರಾಮʼ ನೀಡಿದ ಘಟನೆಯ ವಿಡಿಯೋ ಒಂದು ಇದೀಗ ವೈರಲ್ (Viral Video) ಆಗುತ್ತಿದೆ.
ಈ ಘಟನೆ ನ.16ರ ಶನಿವಾರದಂದು ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿನ ಕೊ-ಅಪರೇಟಿವ್ ಬ್ಯಾಂಕ್ ಒಂದರ ಚುನಾವಣಾ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ಸಂಭವಿಸಿದೆ. ಈ ಸಂದರ್ಭದಲ್ಲಿ ಆ ದಾರಿಯಲ್ಲಿ ಆಂಬುಲೆನ್ಸ್ ಬಂದಾಗ ತಮ್ಮ ಜಗಳವನ್ನು ಕ್ಷಣಕಾಲ ನಿಲ್ಲಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಕೊ-ಅಪರೇಟಿವ್ ಸೊಸೈಟಿಯಲ್ಲಿ ಕಳೆದ 61 ವರ್ಷಗಳಿಂದ ಕಾಂಗ್ರೆಸ್ ನೇತೃತ್ವದ ಆಡಳಿತ ಮಂಡಳಿ ಅಧಿಕಾರ ಚುಕ್ಕಾಣಿಯನ್ನು ಹಿಡಿದಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ತೊರೆದ ಸದಸ್ಯರು ಸಿಪಿಐ(ಎಂ) ಬೆಂಬಲದೊಂದಿಗೆ ಇದೀಗ ಇಲ್ಲಿ ಅಧಿಕಾರಕ್ಕೇರಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ಕಾಣಿಸುವಂತೆ, ಸುರಿಯುತ್ತಿರುವ ಮಳೆಯಲ್ಲಿ, ಒಂದು ಕಿರಿದಾದ ರಸ್ತೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಬೆಂಬಲಿತ ಕಾಂಗ್ರೆಸ್ ಸದಸ್ಯರು ಬೀದಿ ಕಾಳಗಕ್ಕಿಳಿದಿದ್ದಾರೆ. ಈ ಸಮಯದಲ್ಲೇ ಅಲ್ಲಿಗೆ ಆಂಬುಲೆನ್ಸ್ ಒಂದು ಸೈರನ್ ಮೊಳಗಿಸುತ್ತಾ ಬಂದಿದೆ. ತಕ್ಷಣವೇ ಅಲ್ಲಿದ್ದವರು ಜಗಳಕ್ಕೆ ಅಲ್ಪ ವಿರಾಮ ನೀಡಿ ಆಂಬುಲೆನ್ಸ್ ಸಾಗಲು ದಾರಿ ಮಾಡಿಕೊಟ್ಟಿದ್ದಾರೆ. ಮತ್ತೆ ಅವರ ಜಗಳ ಕಂಟಿನ್ಯೂ ಆಗಿರಲೂಬಹುದು..!
ಈ ಹಿಂದೆಯೂ 2020ರಲ್ಲಿ ಸಿಎಎ-ಎನ್.ಆರ್.ಸಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಒಂದಕ್ಕೆ ದಾರಿ ಮಾಡಿಕೊಟ್ಟ ವಿಚಾರ ಸುದ್ದಿಯಾಗಿತ್ತು.
ಇದನ್ನೂ ಓದಿ: Manipur Violence: ಒಂದೆಡೆ ರುಂಡ ಕತ್ತರಿಸಿದ ಮೃತದೇಹ ಪತ್ತೆ…ಮತ್ತೊಂದೆಡೆ ರಾಜಕೀಯ ಬಿಕ್ಕಟ್ಟು…ಈ ನಡುವೆ ಅಮಿತ್ ಶಾ ಹೈವೋಲ್ಟೇಜ್ ಸಭೆ; ಈಶಾನ್ಯ ರಾಜ್ಯದಲ್ಲೇನಾಗ್ತಿದೆ?
ಈ ವಿಡಿಯೋಗೆ ಎಕ್ಸ್ ಬಳಕೆದಾರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದು, ಕೆಲವರು ಇದನ್ನು “ಕೇರಳ ಸ್ಟೋರಿ” ಎಂದಿದ್ದರೆ, ಇನ್ನು ಕೆಲವರು “ನಾಗರಿಕ ಪ್ರಜ್ಞೆ ಮೊದಲು, ಜಗಳ ಆಮೇಲೆ” ಎಂದು ಕಮೆಂಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಕೇರಳದಲ್ಲಿ ಒಂದೇ ದಿನ ಎರಡು ಆಂಬುಲೆನ್ಸ್ ಸ್ಟೋರಿಗಳು ಗಮನಸೆಳೆದಿವೆ. ಒಂದೆಡೆ ಬೀದಿ ಜಗಳವಾಡುತ್ತಿದ್ದವರು ತಮ್ಮ ಗಲಾಟೆಯನ್ನು ಅರೆಕ್ಷಣ ನಿಲ್ಲಿಸಿ ಆಂಬುಲೆನ್ಸ್ ಸಾಗಲು ದಾರಿಮಾಡಿಕೊಡುವ ಮೂಲಕ ಸುದ್ದಿಯಾದರೆ, ಇನ್ನೊಂದೆಡೆ ಒಬ್ಬಾತ ಆಂಬುಲೆನ್ಸ್ ಗೆ ಅಡ್ಡಲಾಗಿ ತನ್ನ ಕಾರನ್ನು ಚಲಾಯಿಸಿ ಬಳಿಕ ೨.೫ ಲಕ್ಷ ರೂಪಾಯಿ ದಂಡ ಕಟ್ಟಿದ ಘಟನೆಯೂ ವರದಿಯಾಗಿದೆ. ಎರಡನೇ ಘಟನೆಯಲ್ಲಿ ಆಂಬುಲೆನ್ಸ್ ಚಾಲಕ ಪದೇ ಪದೇ ಹಾರ್ನ್ ಮಾಡಿದರೂ ಕಾರಿನ ಚಾಲಕನೊಬ್ಬ ಅದಕ್ಕೆ ದಾರಿ ಮಾಡಿಕೊಡದೆ ಉದ್ಧಟತನ ಮೆರೆದಿದ್ದಾನೆ.