Monday, 18th November 2024

Beant Singh killer: ಮಾಜಿ ಸಿಎಂ ಹತ್ಯೆ ಕೇಸ್‌; ಹಂತಕನ ಕ್ಷಮಾದಾನ ಅರ್ಜಿ ಬಗ್ಗೆ 2 ವಾರಗಳಲ್ಲಿ ನಿರ್ಧಾರ! ರಾಷ್ಟ್ರಪತಿ ಕಚೇರಿಗೆ ಸುಪ್ರೀಂ ಕೋರ್ಟ್‌ ಸೂಚನೆ

supreme court

ನವದೆಹಲಿ: ಪಂಜಾಬ್‌ ಮಾಜಿ ಸಿಎಂ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಬಲ್ವಂತ್ ಸಿಂಗ್ ರಾಜೋನಾನ(Balwant Singh Rajoana) ಕ್ಷಮಾದಾನ ಅರ್ಜಿ(Mercy Plea)ಯ ಕುರಿತು ಎರಡು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುಪ್ರೀಂ ಕೋರ್ಟ್(Supreme Court) ಸೋಮವಾರ ಹೇಳಿದೆ. 1995 ರಲ್ಲಿ ಆಗಿನ ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್(Beant Singh killer) ಅವರ ಹತ್ಯೆಯಲ್ಲಿ ರಾಜೋನಾ ಅವರನ್ನು ಅಪರಾಧಿ ಎಂದು ಘೋಷಿಸಲಾಯಿತು.

ಇದೀಗ ತನ್ನ ಮರಣದಂಡನೆ ಶಿಕ್ಷೆಗೆ ಪ್ರತಿಯಾಗಿ ಕ್ಷಮಾಧಾನ ಕೋರಿ ಬಲ್ವಂತ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ಬಗ್ಗೆ ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊ‍ಳ್ಳುವಂತೆ ಆದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿಗೆ ನೊಟೀಸ್‌ ಕಳುಹಿಸಿದೆ. ಮರಣದಂಡನೆ ಕೈದಿ ರಾಜೋನಾ ಅವರ ಕ್ಷಮಾದಾನ ಅರ್ಜಿಯ ವಿಷಯವನ್ನು ರಾಷ್ಟ್ರಪತಿಯವರ ಮುಂದೆ ಇಡುವಂತೆ ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಎರಡು ವಾರಗಳಲ್ಲಿ ಅದನ್ನು ಪರಿಗಣಿಸುವಂತೆ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಪಿ ಕೆ ಮಿಶ್ರಾ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ. ಅಲ್ಲದೇ ನ್ಯಾಯಾಲಯವು ಡಿಸೆಂಬರ್ 5 ರಂದು ವಿಚಾರಣೆಯನ್ನು ಮುಂದೂಡಿದೆ. ಸೆಪ್ಟೆಂಬರ್ 25 ರಂದು, ಸುಪ್ರೀಂ ಕೋರ್ಟ್ ರಾಜೋನಾನ ಮನವಿಯ ಮೇರೆಗೆ ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳಿಂದ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶದ ಆಡಳಿತದಿಂದ ಸುಪ್ರೀಂ ಕೋರ್ಟ್‌ ಪ್ರತಿಕ್ರಿಯೆಗಳನ್ನು ಕೇಳಿತ್ತು. ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (SGPC) ಮಾರ್ಚ್ 2012ರಲ್ಲಿ ತನ್ನ ಪರವಾಗಿ ಸಂವಿಧಾನದ 72ನೇ ವಿಧಿಯ ಅಡಿಯಲ್ಲಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದೆ ಎಂದು ರಾಜೋನಾ ಹೇಳಿದ್ದ.

1995ರಲ್ಲಿ ಏನಾಗಿತ್ತು?

1995ರಲ್ಲಿ ಪಂಜಾಬ್ ಸಿವಿಲ್ ಸೆಕ್ರೆಟರಿಯೇಟ್‌ನ ಹೊರಗೆ ನಡೆದ ಸ್ಫೋಟದಲ್ಲಿ ಬಿಯಾಂತ್ ಸಿಂಗ್ ಮತ್ತು ಇತರ 16 ಮಂದಿಯನ್ನು ಕೊಂದಿದ್ದಕ್ಕಾಗಿ ಪಂಜಾಬ್ ಪೊಲೀಸ್ ಮಾಜಿ ಕಾನ್‌ಸ್ಟೆಬಲ್ ರಾಜೋನಾನನ್ನು ತಪ್ಪಿತಸ್ಥರೆಂದು ತೀರ್ಪು ನೀಡಲಾಗಿತ್ತು. ವಿಶೇಷ ನ್ಯಾಯಾಲಯವು 2007 ರಲ್ಲಿ ಆತನಿಗೆ ಮರಣದಂಡನೆಯನ್ನು ವಿಧಿಸಿತು.

ಈ ಸುದ್ದಿಯನ್ನೂ ಓದಿ: Tirupati temple: ತಿರುಪತಿ ಪ್ರತ್ಯೇಕ ರಾಜ್ಯ ಆಗಬೇಕಾ? ಸುಪ್ರೀಂ ಕೋರ್ಟ್‌ ಹೇಳಿದ್ದೇನು?