Monday, 18th November 2024

Indian Airlines: ಇಂಡಿಯನ್‌ ಏರ್‌ಲೈನ್ಸ್‌ನಿಂದ ಹೊಸ ದಾಖಲೆ- ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಹಾರಾಟ!

Indian Airlines

ನವದೆಹಲಿ : ಭಾರತೀಯ ವಿಮಾನಯಾನ ಸಂಸ್ಥೆಗಳು (Indian Airlines) ಇತ್ತೀಚೆಗೆ ಹೊಸ ದಾಖಲೆಯನ್ನು ನಿರ್ಮಿಸಿದ್ದು, ನವೆಂಬರ್‌ 17 ರಂದು ಒಂದೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು (Passengers) ಹೊತ್ತೊಯ್ಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳು ಒಟ್ಟಾಗಿ 5,05,412 ದೇಶೀಯ ಪ್ರಯಾಣಿಕರು ಪ್ರಯಾಣಿಸಿದ್ದಾರೆ.  

ನವೆಂಬರ್ 08 ರಂದು 4.9 ಲಕ್ಷ ಪ್ರಯಾಣಿಕರು, ನವೆಂಬರ್ 09 ರಂದು 4.96 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದು, ನವೆಂಬರ್ 14 ಮತ್ತು ನವೆಂಬರ್ 15 ರಂದು 4.97 ಲಕ್ಷ, 4.99 ಲಕ್ಷ ಪ್ರಯಾಣಿಕರು ಮತ್ತು ನವೆಂಬರ್ 16 ರಂದು 4.98 ಲಕ್ಷ ಹಾಗೂ ನವೆಂಬರ್‌ 17 ರಂದು ಅತೀ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ತಿಳಿದು ಬಂದಿದೆ.

ದೀಪಾವಳಿಗೂ ಮುನ್ನ ಇಂಡಿಗೋ ತನ್ನ Q2-FY25 ಫಲಿತಾಂಶಗಳನ್ನು ಘೋಷಿಸುವ ಮೂಲಕ ತನ್ನ ನಷ್ಟವನ್ನು ವರದಿ ಮಾಡಿತ್ತು. ಇದೀಗ ದೀಪಾವಳಿ ಹಾಗೂ ಭಾರತದಲ್ಲಿ ಮದುವೆ ಸೀಸನ್‌ ಶುರುವಾಗಿದ್ದು, ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಗಮನೀಯವಾಗಿ ಏರಿಕೆ ಕಂಡಿದೆ. ಇತ್ತೀಚೆಗೆ ಇಂಡಿಗೋ ತನ್ನ ವಿಮಾನಯಾನದ ದರವನ್ನು ಹೆಚ್ಚಿಸಿತ್ತು. ಈ ಸಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಯಾಣಿಕರು ದೂರಿದ್ದರು. ಅದರ ಬೆನ್ನಲೇ ತನಗೆ ಆದ ನಷ್ಟವನ್ನು ಇಂಡಿಗೋ ಹಂಚಿಕೊಂಡಿತ್ತು.

ಬೆದರಿಕೆ ಕರೆಗಳಿಂದ ನಷ್ಟ

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಹುಸಿ ಬಾಂಬ್‌ ಬೆದರಿಕೆಗಳು ಬರುತ್ತಿದ್ದು, ವಿಮಾನಯಾನ ಸಂಸ್ಥೆಗಳು ಅಧಿಕ ನಷ್ಟವಾಗಿದೆ. ವಿಮಾನ ಲ್ಯಾಂಡ್‌ ಮಾಡುವಲ್ಲಿ ವಿಳಂಬ, ಎಮರ್ಜೆನ್ಸಿ ಲ್ಯಾಂಡಿಂಗ್‌ನಿಂದಾಗಿ ಅನೇಕ ವಿಮಾನಯಾನ ಸಂಸ್ಥೆಗಳು ಕೋಟ್ಯಂತರ ರೂ. ನಷ್ಟ ಅನುಭವಿಸಿವೆ.

ಏರ್‌ ಇಂಡಿಯಾ ಜತೆ ವಿಲೀನವಾದ ವಿಸ್ತಾರ

ಏರ್ ಇಂಡಿಯಾ ಸಂಸ್ಥೆಯೊಂದಿಗೆ ಸಂಪೂರ್ಣವಾಗಿ ವಿಲೀನಗೊಂಡಿರುವ ವಿಸ್ತಾರ ಏರ್‌ಲೈನ್ಸ್‌ (Vitstara Airline) ನವೆಂಬರ್ 11ರ ಸೋಮವಾರ ತನ್ನ ಬ್ರಾಂಡ್ ಅಡಿಯಲ್ಲಿ ಅಂತಿಮ ಹಾರಾಟವನ್ನು ನಡೆಸಿತು. ನವೆಂಬರ್ 12ರಿಂದ ವಿಸ್ತಾರ ಕಾರ್ಯಾಚರಣೆ ಏರ್ ಇಂಡಿಯಾದೊಂದಿಗೆ ವಿಲೀನಗೊಂಡಿದೆ. ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್‌ಲೈನ್ಸ್‌ ನಡುವಿನ ಜಂಟಿ ಉದ್ಯಮವಾದ ವಿಸ್ತಾರ, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾದೊಂದಿಗೆ ಸಂಪೂರ್ಣವಾಗಿ ವಿಲೀನಗೊಂಡಿದೆ.

ಇದನ್ನೂ ಓದಿ Air India Express : ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಕ್ಕೆ ಮತ್ತೆ ಬಾಂಬ್ ಬೆದರಿಕೆ

ದೇಶವು ಅಭಿವೃದ್ಧಿ ಹೊಂದುತ್ತಿರುವಂತೆ ಮತ್ತು ಅದರ ಆರ್ಥಿಕತೆಯು ವಿಸ್ತರಿಸುತ್ತಿರುವುದರಿಂದ, ವಿಮಾನ ಪ್ರಯಾಣದ ಬೇಡಿಕೆಯು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು ಭಾರತದ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ವಾಯುಯಾನ ಕ್ಷೇತ್ರಕ್ಕೆ ಮಹತ್ವದ ಅವಕಾಶವನ್ನು ಒದಗಿಸುತ್ತದೆ.