Monday, 18th November 2024

Kailash Gahlot: ಆಪ್‌ ತೊರೆದ ಕೈಲಾಶ್‌ ಗಹ್ಲೋಟ್‌ ಬಿಜೆಪಿಗೆ ಸೇರ್ಪಡೆ

kailash gahlot

ನವದೆಹಲಿ: ಆಪ್‌(AAP)ಗೆ ರಾಜೀನಾಮೆ ನೀಡಿದ ದೆಹಲಿಯ ಮಾಜಿ ಸಚಿವ ಕೈಲಾಶ್ ಗಹ್ಲೋಟ್(Kailash Gahlot) ಇಂದು ಮಧ್ಯಾಹ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಈ ರಾಜಕೀಯ ನಡೆಯನ್ನು ಯಾವುದೇ ಒತ್ತಡದಿಂದ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದರು. ಹರ್ಯಾಣ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್, ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಮತ್ತು ಇತರ ಉನ್ನತ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಗಹ್ಲೋಟ್‌ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಅವರ ವಿರುದ್ಧ ಹಲವು ಬಾರಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ರೇಡ್‌ ನಂತರ ಒತ್ತಡಕ್ಕೆ ಒಳಗಾದ ಗಹ್ಲೋಟ್ ಅವರು ಪಕ್ಷವನ್ನು ತೊರೆಯುವುದನ್ನು ಬಿಟ್ಟು ಯಾವುದೇ ಆಯ್ಕೆಯಿಲ್ಲ ಎಂಬ ಆಪ್‌ ಆರೋಪಕ್ಕೆ ತಿರುಗೇಟು ನೀಡಿರುವ ಗಹ್ಲೋಟ್‌ ನಾನು ಅಣ್ಣಾ ಹಜಾರೆಯವರ ಕಾಲದಲ್ಲಿ ಪಕ್ಷಕ್ಕೆ ಸೇರಿದ್ದರಿಂದ ಇದು ಸುಲಭದ ಹೆಜ್ಜೆಯಲ್ಲ. ಇದು ರಾತ್ರೋರಾತ್ರಿ ನಿರ್ಧಾರ ಅಥವಾ ಒತ್ತಡದಲ್ಲಿ ತೆಗೆದುಕೊಂಡ ನಿರ್ಧಾರ ಎಂದು ಜನ ಭಾವಿಸಬಹುದು. ಆದರೆ ನಾನು ಯಾವುದೇ ಒತ್ತಡದಲ್ಲಿ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಇದು ಒಂದೇ ದಿನದ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದರು.

ಗಹ್ಲೋಟ್‌ ರಾಜೀನಾಮೆ ಬಗ್ಗೆ ಕೇಜ್ರಿವಾಲ್‌ ಪ್ರತಿಕ್ರಿಯೆ

ಪಕ್ಷದ ನಾಯಕ ಗಹ್ಲೋಟ್ ಅವರ ರಾಜೀನಾಮೆ ಕುರಿತು ಸೋಮವಾರ ಮೌನ ಮುರಿದ ಕೇಜ್ರಿವಾಲ್, ಅವರು ಸ್ವತಂತ್ರರು, ಅವರು ಎಲ್ಲಿ ಬೇಕಾದರೂ ಹೋಗಬಹುದು ಎಂದು ಹೇಳಿದ್ದಾರೆ. ಬಿಜೆಪಿ ನಮ್ಮ ನಾಯಕರ ವಿರುದ್ಧ ಷಡ್ಯಂತ್ರ ರಚಿಸಿ ನಮ್ಮನ್ನು ಸೋಲಿಸುವ ಪ್ರಯತ್ನದಲ್ಲಿದೆ. ನಮ್ಮ ನಾಯಕರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Arvind Kejriwal : ಮಹಾರಾಷ್ಟ್ರದಲ್ಲಿ ಆಪ್‌ ಸ್ಪರ್ಧೆ ಇಲ್ಲ; ಮಿತ್ರ ಪಕ್ಷಕ್ಕಾಗಿ ಪ್ರಚಾರ ಮಾಡಲಿದ್ದಾರೆ ಕೇಜ್ರಿವಾಲ್‌