Monday, 18th November 2024

IND vs AUS: ಜಸ್‌ಪ್ರೀತ್‌ ಬುಮ್ರಾ ಅಲ್ಲ, ಭಾರತ ತಂಡಕ್ಕೆ ಕೀ ಬೌಲರ್‌ ಹೆಸರಿಸಿದ ನೇಥನ್‌ ಲಯಾನ್‌!

Nathan Lyon Calls THIS India Bowler 'Incredible' Ahead Of Border-Gavaskar Trophy

ಪರ್ತ್‌: ಮುಂಬರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರೆಣಿಗೂ ಮುನ್ನ ಆಸ್ಟ್ರೇಲಿಯಾ ತಂಡದ ಹಿರಿಯ ಸ್ಪಿನ್ನರ್‌ ನೇಥನ್‌ ಲಯಾನ್‌, ಭಾರತ ತಂಡದ ಹಿರಿಯ ಸ್ಪಿನ್ನರ್‌ ರವಿ ಚಂದ್ರನ್‌ ಅಶ್ವಿನ್‌ ಅವರನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಆರ್‌ ಅಶ್ವಿನ್‌ ಅವರಿಂದ ಸಾಕಷ್ಟು ಕಲಿತಿದ್ದೇನೆಂದು ತಿಳಿಸಿದ್ದಾರೆ. ಮುಂಬರುವ ಟೆಸ್ಟ್‌ ಸರಣಿಯಲ್ಲಿ ಆರ್‌ ಅಶ್ವಿನ್‌ ಮತ್ತು ನೇಥನ್‌ ಲಯಾನ್‌ ಇಬ್ಬರೂ ಮುಖಾಮುಖಿಯಾಗಲಿದ್ದಾರೆ.

ಆಸ್ಟ್ರೇಲಿಯಾದ ಫಾಸ್ಟ್‌ ಬೌಲಿಂಗ್‌ ಕಂಡೀಷನ್ಸ್‌ನಲ್ಲಿ ಸ್ಪಿನ್ನರ್‌ಗಳು ಸಕ್ಸಸ್‌ ಕಾಣುವುದು ತುಂಬಾ ವಿರಳ ಆದರೆ, ಭಾರತ ತಂಡದ ಸ್ಪಿನ್ನರ್‌ ಆರ್‌ ಅಶ್ವಿನ್‌, ಕಾಂಗೂರು ನಾಡಿನಲ್ಲಿ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇಡೀ ವಿಶ್ವದಲ್ಲಿಯೇ ಯಾವುದೇ ಕಂಡೀಷನ್ಸ್‌ಗೆ ಹೊಂದಿಕೊಳ್ಳಲಿದ್ದಾರೆ ಹಾಗೂ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು ನೀಡಲಿದ್ದಾರೆಂದು ಲಯಾನ್‌ ಹೊಗಳಿದ್ದಾರೆ.

IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!

ಆರ್‌ ಅಶ್ವಿನ್‌ಗೆ ನೇಥನ್‌ ಲಯಾನ್‌ ಶ್ಲಾಘನೆ

“ಆರ್‌ ಅಶ್ವಿನ್‌ ಅಸಾಧಾರಣ ಬೌಲರ್‌. ನಾನು ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಬಾರಿ ಅಶ್ವಿನ್‌ ಅವರೊಂದಿಗೆ ಮುಖಾಮುಖಿ ಕಾದಾಟ ನಡೆಸಿದ್ದೇನೆ ಹಾಗೂ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರು ಸ್ಮಾರ್ಟ್‌ ಬೌಲರ್‌ ಆಗಿದ್ದು, ಯಾವುದೇ ಕಂಡೀಷನ್ಸ್‌ಗೆ ಬಹುಬೇಗ ಹೊಂದಿಕೊಳ್ಳುವ ಹಾಗೂ ಕಲಿಯುವ ಸಾಮರ್ಥ್ಯವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ವಿಶ್ವದ ಅತ್ಯುತ್ತಮ ಬೌಲರ್‌ಗಳಿಂದ ಮಾತ್ರ ಇದು ಸಾಧ್ಯ,” ಎಂದು ನೇಥನ್‌ ಲಯಾನ್‌ ಶ್ಲಾಘಿಸಿದ್ದಾರೆ.

ಈ ಹಿಂದಿನ ಆಸ್ಟ್ರೇಲಿಯಾ ತಂಡದ ಭಾರತದ ಪ್ರವಾಸದಲ್ಲಿಯೂ ನಥೇನ್‌ ಲಯಾನ್‌ ಮತ್ತು ಆರ್‌ ಅಶ್ವಿನ್‌ ಮುಖಾಮುಖಿಯಾಗಿದ್ದರು. ಧೂಳಿನ ಪಿಚ್‌ಗಳಲ್ಲಿ ಆರ್‌ ಅಶ್ವಿನ್‌ ಅವರ ಬೌಲಿಂಗ್‌ ವಿಡಿಯೋಗಳನ್ನು ನೇಥನ್‌ ಲಯಾನ್‌ ವೀಕ್ಷಿಸಿದ್ದರು ಹಾಗೂ ಅಧ್ಯಯನ ನಡೆಸಿದ್ದರು. ಇಂಥಾ ಪಿಚ್‌ಗಳಲ್ಲಿ ಹೇಗೆ ಬೌಲ್‌ ಮಾಡಬೇಕೆಂಬುದಕ್ಕೆ ಸಂಬಂಧಿಸಿದಂತೆ ಆರ್‌ ಅಶ್ವಿನ್‌ ಅವರು ತಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದಾರೆಂದು ಆಸೀಸ್‌ ಸ್ಪಿನ್ನರ್‌ ತಿಳಿಸಿದ್ದಾರೆ.

ಬ್ಯಾಟ್‌ ಬದಿಗಿಟ್ಟು ಮೈಕ್‌ ಹಿಡಿದ ಪೂಜಾರ; ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಕಾಮೆಂಟರಿ

ಅಶ್ವಿನ್‌ರಿಂದ ಸಾಕಷ್ಟು ಕಲಿತಿದ್ದೇನೆ: ಲಯಾನ್‌

“ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಿಮಗೆ ಎದುರಾಗುವ ವಿಶ್ವದ ಬೌಲರ್‌ಗಳೆಲ್ಲರೂ ನಿಮ್ಮ ಪಾಲಿಗೆ ಗುರುಗಳೇ ಎಂಬ ಅಂಶವನ್ನು ನಾನು ಬಲವಾಗಿ ನಂಬುತ್ತೇನೆ. ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನು ಆಡಲು ಭಾರತಕ್ಕೆ ಬರುವುದಕ್ಕೂ ಮೊದಲು ನಾನು ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇನೆ. ಅದರಲ್ಲಿಯೂ ವಿಶೇಷವಾಗಿ ಆರ್‌ ಅಶ್ವಿನ್‌ ಅವರ ಬೌಲಿಂಗ್‌ ತಂತ್ರವನ್ನು ವೀಕ್ಷಿಸಿದ್ದೇನೆ ಹಾಗೂ ಅವರಿಂದ ನಾನು ಏನಾದರೂ ಅಳವಡಿಸಿಕೊಳ್ಳಬಹುದೆ ಎಂಬ ಉದ್ದೇಶ ನನ್ನದಾಗಿತ್ತು,” ಎಂದು ನೇಥನ್‌ ಲಯಾನ್‌ ತಿಳಿಸಿದ್ದಾರೆ.

“ರವೀಂದ್ರ ಜಡೇಜಾ ಅವರಲ್ಲಿಯೂ ಇದೆಲ್ಲಾ ಅಂಶಗಳ ಇವೆ ಹಾಗೂ ಈ ಎಲ್ಲಾ ಗುಟ್ಟುಗಳನ್ನು ನಾನು ಬಹಿರಂಗಪಡಿಸುವುದಿಲ್ಲ. ಬ್ಯಾಕ್‌ ಆಫ್‌ ದಿ ಬಾಲ್‌ನಲ್ಲಿ ಸ್ಪಿನ್‌ ಮಾಡುವುದು ಹಾಗೂ ಬೌನ್ಸ್‌ ಮಾಡುವುದು ನನ್ನ ತಂತ್ರವಾಗಿದೆ. ಆದರೆ, ಆಸ್ಟ್ರೇಲಿಯಾದಲ್ಲಿ ಈ ತಂತ್ರವನ್ನು ಕಾರ್ಯರೂಪಕ್ಕೆ ತರುವುದು ತುಂಬಾ ಕಷ್ಟ,”ಎಂದು ಆಸೀಸ್‌ ಸ್ಪಿನ್ನರ್‌ ಹೇಳಿದ್ದಾರೆ.

IND vs NZ: ಈ ಆಟಗಾರನಿಂದಲೇ ನ್ಯೂಜಿಲೆಂಡ್‌ ಎದುರು ಟೆಸ್ಟ್‌ ಸರಣಿ ಸೋತಿದ್ದೇವೆಂದ ಆರ್‌ ಅಶ್ವಿನ್‌!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ನವೆಂಬರ್‌ 22 ರಂದು ಪರ್ತ್‌ನ ಆಪ್ಟಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಪಂದ್ಯದ ಮೂಲಕ ಉಭಯ ತಂಡಗಳ ನಡುವಣ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಆರಂಭವಾಗಲಿದೆ.