Monday, 18th November 2024

Bengaluru News: ಭಾರತವನ್ನು ಭಾರತವಾಗಿಯೇ ಉಳಿಸೋದು ಕಷ್ಟವಿದೆ; ಸ್ವಾಮಿ ವೀರೇಶಾನಂದಜಿ ಆತಂಕ

Bengaluru News

ಬೆಂಗಳೂರು: ಭಾರತವನ್ನು ಭಾರತವಾಗೇ ಉಳಿಸೋದು ಕಷ್ಟವಿದೆ. ಪ್ರಜ್ಞಾವಂತರನ್ನು ವೇದಿಕೆಗೆ ಕರೆಸಿ ಮಾತನಾಡಿಸುವ ಅವಶ್ಯಕತೆಯಿದೆ. ಇಲ್ಲವಾದರೆ ಮುಂದಿನ ತಲೆಮಾರಿನ ಮಕ್ಕಳು ತಿರುಚಿದ ಇತಿಹಾಸವನ್ನೇ ನಿಜ ಇತಿಹಾಸವೆಂದುಕೊಳ್ಳುತ್ತಾರೆ ಎಂದು ಸ್ವಾಮಿ ವೀರೇಶಾನಂದಜಿ ಮಹಾರಾಜ್‌ ಹೇಳಿದ್ದಾರೆ. ನಗರದ (Bengaluru News) ರಾಷ್ಟ್ರೋತ್ಥಾನ ಪರಿಷತ್‌ನ ʼಕೇಶವಶಿಲ್ಪʼ ಸಭಾಂಗಣದಲ್ಲಿ ಶನಿವಾರ ಲೇಖಕರಾದ ಅಜ್ಜಂಪುರ ಮಂಜುನಾಥ ಮತ್ತು ಬಿ.ಪಿ ಪ್ರೇಮಕುಮಾರ್‌ ಅವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಭಾರತ ಸತ್ತರೆ ಬೇರೆಯವರಿಗೂ ಉಳಿಗಾಲವಿಲ್ಲ ಎಂದು ಹೇಳಿದ್ದರು. ಇಂದು ಭಾರತದ ಉಳಿವಿಗೆ ಸ್ವಾಮಿ ವಿವೇಕಾನಂದರ ಅಧ್ಯಯನದ ಅಗತ್ಯವಿದೆ. ವಿವೇಕಾನಂದರನ್ನು ಇವತ್ತು ಪ್ರಪಂಚ ಒಪ್ಪಿಕೊಂಡಿದೆ ಎಂದರು. ಇದು ಕೇವಲ ಪುಸ್ತಕಗಳ ಲೋಕರ್ಪಣೆ ಮಾತ್ರವಲ್ಲ. ಇದೊಂದು ಆತ್ಮಾವಲೋಕನ ಕಾರ್ಯಕ್ರಮ. ಇಂತಹ ಯಾವುದೇ ಕಾರ್ಯಕ್ರಮ ಅದು ಆತ್ಮಾವಲೋಕನಕ್ಕೆ ಪ್ರೇರಣಾದಾಯಕವಾಗಬೇಕು. ನಿಜವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗುವಂತಹ ಹತ್ತಾರು ವಿಚಾರಗಳು ನಮಗೆ ಸಿಗಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Winter Season Care: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಪೋಷಕಾಂಶಗಳನ್ನು ಸೇವಿಸಿ

ಖ್ಯಾತ ವಾಗ್ಮಿ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಬಿಡುಗಡೆಗೊಂಡ ಪುಸ್ತಕಗಳನ್ನು ಪರಿಚಯಿಸುತ್ತಾ, ಈ ಮೂರು ಪುಸ್ತಕಗಳು ಸೆಕ್ಯುಲರ್‌ ಭಾವಕ್ಕೆ ಸಣ್ಣ ಧಕ್ಕೆಯನ್ನು ತಂದಿವೆ. ಪಠ್ಯ ಪುಸ್ತಕಗಳಲ್ಲಿ ಇಲ್ಲದ ಎಳೆಯನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ. ಸೀತಾರಾಂ ಗೋಯೆಲ್‌ ಅವರ ಪ್ರಯತ್ನದ ಫಲ ʼವಾಯ್ಸ್‌ ಆಫ್‌ ಇಂಡಿಯಾʼ ಸರಣಿ ಗ್ರಂಥಗಳು. ಅದರ ಮುಂದುವರೆದ ಭಾಗವೇ ʼಹಿಂದೂ ಟೆಂಪಲ್ಸ್‌- ವಾಟ್‌ ಹ್ಯಾಪೆಂಡ್‌ ಟು ದೆಮ್ʼ‌ ಆ ಪುಸ್ತಕವನ್ನು ಅಜ್ಜಂಪುರ ಮಂಜುನಾಥ ಅವರು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ ಎಂದು ತಿಳಿಸಿದರು.

ಬಹುತೇಕರು ಎಲ್ಲರೂ ಕೆಟ್ಟವರಲ್ಲ ಎಂದು ಹೇಳುತ್ತಾರೆ. ಹಾಗಿದ್ದ ಮೇಲೆ ಒಳ್ಳೆಯ ಮುಸ್ಲಿಮರು ಕೆಟ್ಟ ಮುಸ್ಲಿಮರಿಗೆ ಯಾಕೆ ಬುದ್ಧಿ ಹೇಳುವುದಿಲ್ಲ ಎಂದ ಅವರು, ನಿಜ ಇತಿಹಾಸ ವ್ಯವಸ್ಥಿತವಾಗಿ ನಾಶವಾಗಿದೆ. ಈ ಹಿಂದೆ ಸ್ವತಃ ಸೀತಾರಾಂ ಗೋಯೆಲ್‌ ಅವರು ಇತಿಹಾಸಕಾರರು ಮಾರು ವೇಷದಲ್ಲಿರುವ ಮಾರ್ಕ್ಸ್‌ವಾದದ ರಾಜಕಾರಣಿಗಳು ಎಂದಿದ್ದರು ಎಂದರು.

ಲೇಖಕ ಅಜ್ಜಂಪುರ ಮಂಜುನಾಥ ಮಾತನಾಡಿ, ವರ್ತಮಾನ ಮತ್ತು ಭವಿಷ್ಯವನ್ನು ಬದಲಿಸುವ ಶಕ್ತಿ ಈ ಪುಸ್ತಕಕ್ಕಿದೆ. ಭಾರತದ ಇತಿಹಾಸ ಅಂಧಕಾರ ಮತ್ತು ಅಜ್ಞಾನದಲ್ಲಿದೆ ಅದನ್ನು ತೊಡೆದು ಹಾಕುವ ಕೆಲಸವನ್ನು ಸೀತಾರಾಮ್‌ ಗೋಯೆಲ್‌ ಮಾಡಿದ್ದಾರೆ ಎಂದರು. ಇನ್ನು ಹೆಚ್ಚಿನ ಧರ್ಮ ಸಂರಕ್ಷಣೆ ಆಗಬೇಕೆಂದು ಸನಾತನ ಧರ್ಮ ನಿರೀಕ್ಷೆ ಮಾಡುತ್ತಿದೆ. ನಮ್ಮ ಹಿಂದೂಗಳಿಗೆ ಈಗಲೂ ಧರ್ಮ ಮತ್ತು ಮತದ ನಡುವಿನ ವ್ಯತ್ಯಾಸ ಗೊತ್ತಿಲ್ಲ ಎಂದು ಹೇಳಿದರು.

ಲೇಖಕ ಬಿ.ಪಿ ಪ್ರೇಮಕುಮಾರ್‌, ತಮ್ಮ ಪುಸ್ತಕ ರಚನೆಗೆ ಸಹಕರಿಸಿದ ವ್ಯಕ್ತಿಗಳನ್ನು ಸ್ಮರಿಸಿದರು. ನೂರಾರು ವರ್ಷಗಳಿಂದ ಈ ದೇಶದಲ್ಲಿ ಚರ್ಚೆಗೆ ಒಳಪಡದ ವೀರರ ಕುರಿತು ಈಗಿನ ತಲೆಮಾರಿನ ಮಕ್ಕಳು ತಿಳಿದುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಕೋಶಾಧ್ಯಕ್ಷ ನಾರಾಯಣ್‌ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಮಲ್ಲೇಪುರಂ ಜಿ ವೆಂಕಟೇಶ್‌, ಹಿರಿಯ ಲೇಖಕ ಬಾಬು ಕೃಷ್ಣಮೂರ್ತಿ ಮತ್ತು ಮಿಥಿಕ್‌ ಸೊಸೈಟಿಯ ಅಧ್ಯಕ್ಷವಿ. ನಾಗರಾಜ್‌ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ | Gold Price Today: ಭಾರೀ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿ ಮತ್ತೆ ಏರಿಕೆ

ಬಿಡುಗಡೆಗೊಂಡ ಪುಸ್ತಕಗಳು

  1. ʼಹಿಂದೂ ದೇವಾಲಯಗಳು : ಇಸ್ಲಾಮೀ ವಿಧ್ವಂಸದ ಇತಿಹಾಸ: ಪ್ರಥಮ ಸಂಪುಟ, ಒಂದು ಪೂರ್ವಭಾವಿ ಸರ್ವೇಕ್ಷಣʼ ಮೂಲ – ಸೀತಾರಾಂ ಗೋಯೆಲ್‌, ಕನ್ನಡಕ್ಕೆ : ಅಜ್ಜಂಪುರ ಮಂಜುನಾಥ
  2. ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ: ಅಜ್ಜಂಪುರ ಮಂಜುನಾಥ
  3. ಮಾಡಿ ಮಡಿದವರು: ಬಿ.ಪಿ. ಪ್ರೇಮಕುಮಾರ್.