Monday, 18th November 2024

Foxconn Company: ಭಾರೀ ಗಮನ ಸೆಳೆದ ಫಾಕ್ಸ್‌ಕಾನ್‌ ಉದ್ಯೋಗ ಜಾಹೀರಾತು! ವಯಸ್ಸು, ಲಿಂಗ ಸೇರಿ ಕೆಲವು ಮಾನದಂಡ ಕೈಬಿಡಲು ಸೂಚನೆ

Foxconn Company

ಚೆನೈ: ಆಪಲ್‌ ಫೋನ್ (Apple I phone) ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಯಲ್ಲಿ ಜಗತ್ತಿನ ಅಗ್ರಗಣ್ಯ ಕಂಪನಿಗಳಲ್ಲಿ ಒಂದಾಗಿರುವ ತೈವಾನ್‌ ಮೂಲದ ಫಾಕ್ಸ್‌ಕಾನ್‌ (Foxconn Company) ಕಂಪನಿ ಭಾರತದಲ್ಲಿನ ತನ್ನ ಐಫೋನ್ ಬಿಡಿಭಾಗ ತಯಾರಿಸುವ ಉದ್ಯೋಗಿಗಳನ್ನು ನೇಮಿಸಿಕೊಳ್ಳುವಾಗ ವಯಸ್ಸು, ಲಿಂಗ ಮತ್ತು ವೈವಾಹಿಕ ಸ್ಥಿತಿಯನ್ನು ಹೊರಗಿಡಲು ನೇಮಕಾತಿದಾರರನ್ನು ಕೇಳಿದೆ. ಉದ್ಯೋಗ ಜಾಹೀರಾತುಗಳನ್ನು ಪ್ರಕಟಿಸುವಾಗ ಕಂಪನಿಯ ಹೆಸರನ್ನು ಹಾಕದೆ ಹಾಗೆಯೇ ಪ್ರಕಟಿಸಲಿ ಎಂದು ಆದೇಶ ನೀಡಿದೆ. ಫಾಕ್ಸ್‌ಕಾನ್‌ ಲಿಂಗ ತಾರತಮ್ಯ ಮಾಡುತ್ತಿದೆ ಎಂದು ಆರೋಪ ಬಂದ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ತನಿಖೆ ನಡೆಸಿದ ರಾಯಿಟರ್ಸ್ ತಂಡ ವರದಿಯನ್ನು ಪ್ರಕಟಿಸಿತ್ತು.

ಜೂನ್ 25 ರಂದು ರಾಯಿಟರ್ಸ್ ತನಿಖೆಯು ಒಂದು ವರದಿಯನ್ನು ಪ್ರಕಟಿಸಿತ್ತು. ಅದರಲ್ಲಿ ಕಂಪನಿಯು ವಿವಾಹಿತ ಮಹಿಳೆಯರಿಗೆ ಅವಕಾಶ ನೀಡದೆ ಇರುವ ಅಂಶ ಬೆಳಕಿಗೆ ಬಂದಿತ್ತು. ಹೀಗಾಗಿ ಫಾಕ್ಸ್‌ಕಾನ್‌ ಕಂಪನಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಸಂದರ್ಶನದಲ್ಲಿ ಯಾವುದೇ ವಯಕ್ತಿಕ ಪ್ರಶ್ನೆಗಳನ್ನು ಕೇಳಬಾರದು ಎಂಬ ನಿಯಮವನ್ನು ಜಾರಿಗೆ ತಂದಿದೆ. ಇಷ್ಟಕ್ಕೆ ಸುಮ್ಮನಾಗದ ಕಂಪನಿ ಸಂದರ್ಶನಕ್ಕೆ ಕಂಪನಿಗೆ ಸಂಬಂಧಿಸದ ಬೇರೆ ವ್ಯಕ್ತಿಗಳನ್ನು ನೇಮಕಗೊಳಿಸುವ ಭರವಸೆ ನೀಡಿದೆ.

ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿರುವ ಐಫೋನ್ ಫ್ಯಾಕ್ಟರಿಯಲ್ಲಿ ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುತ್ತಿರುವ ಫಾಕ್ಸ್‌ಕಾನ್, ಅಸೆಂಬ್ಲಿ-ಲೈನ್ ಕೆಲಸಗಾರರನ್ನು ಹೊರಗುತ್ತಿಗೆ ನೀಡಿ ಸಂದರ್ಶನ ನಡೆಸುತ್ತದೆ.

ಜಾಹೀರಾತಿನ ಸೂಚನೆಯೇನು?

ಜಾಹೀರಾತುಗಳಲ್ಲಿ ಅವಿವಾಹಿತರು ಮಾತ್ರ ಎಂದು ನಮೂದಿಸಬೇಡಿ, ವಯಸ್ಸನ್ನು ಉಲ್ಲೇಖಿಸಬೇಡಿ, ಅಥವಾ ಪುರುಷ ಅಥವಾ ಮಹಿಳೆಯನ್ನು ಉಲ್ಲೇಖಿಸಬೇಡಿ ಎಂದು ಹೇಳಿದೆ. ಫಾಕ್ಸ್‌ಕಾನ್ ಹಾಗೂ ಆಪಲ್‌ ಕಂಪನಿಗಳು ಭಾರತದಲ್ಲಿ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳುತ್ತದೆ ಎಂದು ಈ ಹಿಂದೆ ಹೇಳಿದ್ದವು.

ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಹೂಡಿಕೆ

ಅಗಸ್ಟ್‌ನಲ್ಲಿ ಫಾಕ್ಸ್‌ಕಾನ್‌ನ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಐಫೋನ್‌ ಉತ್ಪಾದನಾ ಘಟಕವನ್ನು ತೆರೆಯಲು ಈಗಾಗಲೇ ಕರ್ನಾಟಕ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 8,500 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, ಮುಂದಿನ 10 ವರ್ಷಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ತಿಳಿದು ಬಂದಿದೆ. ಇದಲ್ಲದೆ ಫಾಕ್ಸ್‌ಕಾನ್‌ ಇಂಡಸ್ಟ್ರಿಯಲ್‌ ಇಂಟರ್‌ನೆಟ್ (FII) ರಾಜ್ಯದಲ್ಲಿ 8,800 ಕೋಟಿ ರೂಪಾಯಿ ಹೂಡಿಕೆಗೆ ಆಸಕ್ತಿ ತೋರಿದ್ದು, ಇದರಿಂದ 14,000 ಉದ್ಯೋಗ ಸೃಷ್ಟಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : Vadderse Raghurama Shetty: ‘ವಡ್ಡರ್ಸೆ ರಘುರಾಮ ಶೆಟ್ಟಿ’ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳಿಗೆ ಆಹ್ವಾನ