Monday, 18th November 2024

Medicine Shortage: ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ; ರಾಜ್ಯದಲ್ಲಿ ಜೀವರಕ್ಷಕ ಔಷಧಗಳ ಬರ!

Medicine shortage

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಆರ್ಭಟದಿಂದಾಗಿ ಸಾಂಕ್ರಾಮಿಕ ರೋಗಗಳ (Infectious Diseases) ಭೀತಿ ಹೆಚ್ಚಳವಾಗಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ಸಿಎಲ್‌) ಬರೋಬ್ಬರಿ ಇನ್ನೂರು ಐವತ್ತು ಔಷಧಗಳು ಶೂನ್ಯ ದಾಸ್ತಾನು ಇರುವುದು ಈಗ ಬೆಳಕಿಗೆ ಬಂದಿದೆ. ವಿವಿಧ ಟೆಂಡರ್‌ಗಳ ಕೊನೆಯ ಪ್ರಕ್ರಿಯೆ ಮುಗಿದಿದ್ದರೂ ಸರಬರಾಜು ಆದೇಶ ಪತ್ರ ನೀಡುವುದಕ್ಕೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳುವವರಿಗೆ ಔಷಧಗಳ ಅಭಾವ (Medicine Shortage) ಎದುರಾಗಿದೆ. ಇದರಿಂದಾಗಿ, ರೋಗಿಗಳು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ಜೀವ ರಕ್ಷಕ ಔಷಧಗಳನ್ನು ಖರೀದಿಸುವಂತಾಗಿದೆ.

ಕೆಎಸ್‌ಎಂಎಸ್‌ಸಿಎಲ್‌, ಪ್ರತಿ ವರ್ಷ ಹತ್ತಾರು ಟೆಂಡರ್‌ಗಳನ್ನು ನಡೆಸಿ ನೂರಾರು ಕೋಟಿ ರೂ. ಮೌಲ್ಯದ ಬ್ಯಾಂಡೇಜ್‌ ಬಟ್ಟೆ, ಕಾಟನ್‌, ಸರ್ಜಿಕಲ್‌ ಗ್ಲೌಸ್‌, ಗ್ಲೂಕೋಸ್‌ ಬಾಟಲ್‌, ಅಂಟಿ ಬಯೋಟಿಕ್‌ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸೇರಿ ವಿವಿಧ ಔಷಧಗಳನ್ನು ದಾಸ್ತಾನು ಮಾಡುತ್ತಿದೆ. ಔಷಧ ದಾಸ್ತಾನಿಗಾಗಿ ಪ್ರತಿ ವರ್ಷ ನೂರಾರು ಕೋಟಿ ರೂ. ಮೊತ್ತದ ಟೆಂಡರ್‌ ನಡೆಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಟೆಂಡರ್‌ ಆಹ್ವಾನಿಸಲಾಗುತ್ತದೆ. ಮಾರ್ಚ್‌ನಲ್ಲಿ ಅಂತಿಮ ಪ್ರಕ್ರಿಯೆ ಮುಗಿಸಿ ಏಪ್ರಿಲ್‌ನಲ್ಲಿ ಔಷಧ ಸ್ವೀಕರಿಸಲಾಗುತ್ತದೆ. ಆದರೆ ರಾಜ್ಯದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಸಲು, ಸರಬರಾಜು ಆದೇಶ ಪತ್ರ ನೀಡುವಿಕೆಯಲ್ಲಿ ವಿಳಂಬ ಸೇರಿ ಇತರೆ ಕಾರಣಗಳಿಂದ ಎರಡು ವರ್ಷಗಳ ಹಳೆಯ ಟೆಂಡರ್‌ಗಳ ಪ್ರಕ್ರಿಯೆಗಳು ಇನ್ನೂ ನಡೆಯುತ್ತಿವೆ.

ಈ ಸುದ್ದಿಯನ್ನೂ ಓದಿ | Gold Watch: 700 ಟೈಟಾನಿಕ್ ಪ್ರಯಾಣಿಕರನ್ನು ರಕ್ಷಿಸಿದ ಕ್ಯಾಪ್ಟನ್‍ಗೆ ನೀಡಿದ್ದ ಚಿನ್ನದ ವಾಚ್‌ ದಾಖಲೆ ಮೊತ್ತಕ್ಕೆ ಹರಾಜು!

ಒಂದು ಕಡೆ ಟೆಂಡರ್‌ ಪ್ರಕ್ರಿಯೆ ಮುಗಿಸುವ ಮುನ್ನ ಅಧಿಕಾರಿಗಳು ಬರೀ ಶೇ.25ರಷ್ಟು ಮಾತ್ರ ಸರಬರಾಜು ಆದೇಶ ನೀಡುತ್ತಿದ್ದಾರೆ. ಪೂರೈಕೆದಾರರು ಶೇ.100 ರಷ್ಟು ಪ್ರಮಾಣಕ್ಕೆ ಬೆಲೆ ನೀಡಿದ್ದರೂ ಬಿಡ್‌ದಾರರಿಗೆ ಕಿರುಕುಳ ನೀಡಲು ಶೇ.100 ರಷ್ಟು ಸರಬರಾಜು ಆದೇಶವನ್ನೇ ನೀಡುತ್ತಿಲ್ಲ. ಇಲಾಖೆ ಆಯುಕ್ತರರು ಅನುಮೋದನೆಗೆ ಕಳುಹಿಸಿದ ಕಡತಗಳನ್ನೇ ಗಮನಿಸುತ್ತಿಲ್ಲ. ನಿಗಮದ ಅಧಿಕಾರಿಗಳ ಕಡೆಗಣನೆಯಿಂದಾಗಿ ಪ್ರಮುಖ ಜೀವರಕ್ಷಕ ಔಷಧಗಳ ಕೊರತೆ ಕಾಡುತ್ತಿವೆ. ಕಮಿಷನ್‌ ತಡೆಗೆ ರೂಪಿಸಿರುವ ʼಇ-ಪೇಮೆಂಟ್‌ ಮಾಡಲ್‌ʼ ವ್ಯವಸ್ಥೆಯನ್ನೇ ಅಧಿಕಾರಿಗಳು ವಿರೋಧಿಸುತ್ತಿದ್ದಾರೆ.

ನಿಗಮದಲ್ಲಿ ಕೋಟ್ಯಂತರ ರುಪಾಯಿ ಔಷಧ ಬಿಲ್‌, ಭದ್ರತಾ ಠೇವಣಿ ಹಾಗೂ ಇಎಂಡಿ ಬಾಕಿಯಿವೆ. ಹಲವು ವರ್ಷಗಳಿಂದ ಬಾಕಿ ಔಷಧ ಬಿಲ್‌ಗಳಿಗೆ ಹಣ ಪಾವತಿಸಲು ವಿಳಂಬವಾಗುತ್ತಿದೆ. ಟೆಂಡರ್‌ ನಿಯಮಾನುಸಾರ 30 ದಿನದೊಳಗೆ ಔಷಧ ಬಿಲ್‌ಗಳಿಗೆ ಹಣ ಪಾವತಿಸಬೇಕೆಂಬ ನಿಯಮವಿದೆ. ನೆರೆಯ ತಮಿಳುನಾಡು ಸೇರಿ ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಔಷಧಗಳಿಗೆ ಪೇಮೆಂಟ್‌ ಆಗುತ್ತಿದೆ. ಆದರೆ ಕೆಎಸ್‌ಎಂಎಸ್‌ಸಿಎಲ್‌ನಲ್ಲಿ ಸರಿಯಾದ ಸಮಯಕ್ಕೆ ಬಾಕಿ ಬಿಲ್‌ಗಳಿಗೆ ಹಣ ಪಾವತಿಯಾಗುತ್ತಿಲ್ಲ. ಬಿಡ್ಡರ್‌ ಟೆಂಡರ್‌ನಲ್ಲಿ ಭಾಗವಹಿಸಿದಾಗ ಇಲಾಖೆಯು ಅರ್ನೆಸ್ಟ್‌ ಮನಿ ಡೆಪಾಸಿಟ್‌ ಅನ್ನು ಸಂಗ್ರಹಿಸುತ್ತದೆ. ಟೆಂಡರ್‌ನಲ್ಲಿ ಎಲ್‌1 ಗೆ ಆಯ್ಕೆಯಾದ ಬಿಡ್ಡರ್‌ ಭದ್ರತಾ ಠೇವಣಿಯನ್ನು ಇಲಾಖೆಗೆ ಸಲ್ಲಿಸಿದ ನಂತರ ಕೆಟಿಪಿಪಿ ಕಾಯಿದೆ ಪ್ರಕಾರ ಅವರಿಗೆ ಮರುಪಾವತಿಸಬೇಕು. ರದ್ದಾದ ಮತ್ತು ಮತ್ತೆ ಟೆಂಡರ್‌ ನಡೆಸಿದ್ದ ಬಳಿಕವೂ ಬಿಡ್ಡರ್‌ ಗೆ ಭದ್ರತಾ ಠೇವಣಿ ಮತ್ತು ಇಎಂಡಿ ಮರು ಪಾವತಿಸುತ್ತಿಲ್ಲ.

ಯಾವ್ಯಾವ ಕಾಯಿಲೆಗಳಿಗೆ ಔಷಧ ಕೊರತೆ?

ಶ್ವಾಸಕೋಶ, ಕರಳು, ರಕ್ತಹೀನತೆ, ಸರ್ಪಸುತ್ತು, ನ್ಯುಮೋನಿಯಾ, ಅಸ್ತಮಾ, ಸಕ್ಕರೆ ಕಾಯಿಲೆ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶ್ರಯ ರಕ್ತಸ್ರಾವ, ಹೃದಯಘಾತ, ಮೂಳೆ, ತುರಿಕೆ, ಫಂಗಸ್‌, ಮೈಗ್ರೇನ್‌, ಯೋನಿ ಸೋಂಕು, ಶೀತ,ಅನೇಸ್ತಿಯಾ, ಹೃದಯ ಶಸ್ತ್ರಚಿಕಿತ್ಸೆ, ರಕ್ತಹೆಪ್ಪುಗಟ್ಟುವಿಕೆ, ಹುಣ್ಣು, ನೋವು, ವಾಕರಿಕೆ, ವಾಂತಿ,ಮಿದುಳು ಮತ್ತು ನರ, ಕಣ್ಣಿನ ಸೋಂಕು ಸೇರಿ ವಿವಿಧ ಗಂಭೀರ ಕಾಯಿಲೆಗಳ ನಿವಾರಿಸುವ ಔಷಧಗಳ ಅಭಾವ ಉಂಟಾಗಿದೆ.

ಈ ಸುದ್ದಿಯನ್ನೂ ಓದಿ | Winter Season Care: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಪೋಷಕಾಂಶಗಳನ್ನು ಸೇವಿಸಿ

ಯಾವ್ಯಾವ ಔಷಧ ಅಭಾವ?

ಪ್ಯಾರಸಿಟಮಾಲ್‌, ಅಲ್ಬುಮಿನಿ, ಆಂಪ್ಸಿಲಿನ್‌, ಲೆವೊಥ್ರಕ್ಸಿನ್‌, ವಿಲ್ಡಗ್ಲೀಪ್ಟಿನ್‌, ಅಕ್ಲೇವಿರ್‌, ಪ್ಯಾರಾಸಿಟಾ, ನ್ಯುಸ್ಟೊಜಿಮೈನ್‌, ಸಬ್ಲೋಟಮಲ್‌, ಅಸ್ಟೋಪೈನ್‌, ಡಿಕ್ಲೋಮೈನ್‌, ಮಿಡಝೊಲಂ, ಅಝಥ್ರೊಮೈಸಿನ್‌, ಥಿಯೋಪ್ಲಲೈನ್‌ ಡಿಕ್ಲೋಪೆನಕ್‌ ಸೇರಿ ವಿವಿಧ ಬಗೆಯ ಮಾತ್ರೆ ಹಾಗೂ ಚುಚ್ಚುಮದ್ದು ಔಷಧಗಳ ಕೊರತೆ ಉಂಟಾಗಿದೆ. ಗ್ಲೂಕೋಸ್‌, ಬ್ಯಾಂಡೇಜ್‌, ಸರ್ಜಿಕಲ್‌ ಮತ್ತು ಇಂಜೆಕ್ಷನ್‌ಗಳ ಅಭಾವ ಎದುರಾಗಿದೆ.