Monday, 18th November 2024

Kashmera Shah: ಬಾಲಿವುಡ್‌ ನಟಿ ಕಾಶ್ಮೇರಾ ಶಾಗೆ ಅಮೆರಿಕದಲ್ಲಿ ಅಪಘಾತ, ಪತ್ನಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತಿ

Kashmera Shah

ವಾಷಿಂಗ್ಟನ್‌: ಬಾಲಿವುಡ್‌ ನಟ ಹಾಸ್ಯನಟ ಕೃಷ್ಣ ಅಭಿಷೇಕ್ (Krushna Abhishek) ಅವರ ಪತ್ನಿ ನಟಿ ಕಾಶ್ಮೇರಾ ಶಾ (Kashmera Shah) ಅವರು ಅಮೆರಿಕದಲ್ಲಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಕಾರ್‌ ಸೀಟ್‌ನಲ್ಲಿ ರಕ್ತಸಿಕ್ತವಾದ ಫೋಟೋಗಳನ್ನು ಹಂಚಿಕೊಂಡ ಅವರು ತಾನು ಬದುಕಿದ್ದು ದೊಡ್ಡ ಪವಾಡ ಎಂದು ಹೇಳಿದ್ದಾರೆ. ಅಪಘಾತದ ವೇಳೆ ಒಂಟಿಯಾಗಿದ್ದ ಕಾಶ್ಮೇರಾ ತನ್ನನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಅಪಘಾತದ ಬಗ್ಗೆ ಬರೆದುಕೊಂಡಿರುವ ಅವರು, ʼʼನನ್ನನ್ನು ಉಳಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು. ತುಂಬಾ ಕೆಟ್ಟ ಅಪಘಾತವಾಗಿತ್ತು. ಅದನ್ನು ನೆನಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಏನೋ ಕೆಟ್ಟದ್ದು ಸಂಭವಿಸಬಹುದಿತ್ತು. ಆದರೆ ಅಪಘಾತ ಅಷ್ಟೇ ಆಗಿದೆ. ಸಣ್ಣಪುಟ್ಟ ಗಾಯಗಳಾಗಿವೆʼʼ ಎಂದು ಹೇಳಿದ್ದಾರೆ. ʼʼಇಂತಹ ಸಂದರ್ಭದಲ್ಲಿ ನಾನು ನನ್ನ ಕುಟುಂಬವನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ಅವರ ಈ ಇನ್ಸ್‌ಸ್ಟಾಗ್ರಾಂ ಪೋಸ್ಟ್‌ಗೆ ಕಾಮೆಂಟ್‌ ಮಾಡಿರುವ ಅವರ ಪತಿ ಕೃಷ್ಣ ಅವರು, ʼʼಕಾಶ್ಮೇರಾ ಈಗ ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆಯಿಲ್ಲʼʼ ಎಂದು ಹೇಳಿದ್ದಾರೆ. ಬಾಲಿವುಡ್‌ ಜನಪ್ರಿಯ ನಟ ಗೋವಿಂದ ಅವರು ಕೃಷ್ಣ ಅಭಿಷೇಕ್ ಅವರ ಸೋದರ ಮಾವ. ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿರುವ ಕಾಶ್ಮೇರಾ ಶಾ ಅವರು ಹಿಂದಿ, ಮರಾಟಿ ಸಿನಿಮಾಗಳಲ್ಲಿಯೂ ನಟಿಸಿಸದ್ದಾರೆ.

ಇತ್ತೀಚೆಗೆ ನಟ ಗೋವಿಂದ ಅವರಿಗೆ ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರನ್ನು ಭೇಟಿ ಮಾಡಲು ಕಶ್ಮೇರಾ ಆಸ್ಪತ್ರೆಗೆ ಧಾವಿಸಿದ್ದರು. ಕಳೆದ ಕೆಲವು ವರ್ಷಗಳಿಂದ 2 ಕುಟುಂಬಗಳ ನಡುವೆ ಕಲಹೆ ಏರ್ಪಟ್ಟಿದೆ. ಅದಾಗ್ಯೂ ಗೋವಿಂದ ಅವರು ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಕಾಶ್ಮೇರಾ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದರು.

ನಟ ಗೋವಿಂದ ತಮ್ಮದೇ ಪಿಸ್ತೂಲ್​​ನಿಂದ ಅವರು ಗುಂಡು ಹಾರಿಸಿಕೊಂಡು ಆಸ್ಪತೆಗೆ ದಾಖಲಾಗಿದ್ದರು. ಆಕಸ್ಮಿಕವಾಗಿ ಫೈರ್​ ಆಗಿದ್ದರಿಂದ ಅವರ ಕಾಲಿಗೆ ತೀವ್ರ ಗಾಯ ಆಗಿತ್ತು. ನಂತರ ಅವರನ್ನು ಮುಂಬೈಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗೋವಿಂದ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ವೈದ್ಯರು ಮಾಹಿತಿ ಹಂಚಿಕೊಂಡು ನಟನಿಗೆ 8ರಿಂದ 10 ಹೊಲಿಗೆ ಹಾಕಲಾಗಿದೆ ಎಂಬ ಮಾಹಿತಿ ನೀಡಿದ್ದರು.

ಇದನ್ನೂ ಓದಿ : Shah Rukh Khan death threat: ಬಾಲಿವುಡ್‌ ಬಾದ್‌ಷಾಗೆ ಬೆದರಿಕೆವೊಡ್ಡಿದ್ದ ವಕೀಲ ಫೈಜನ್‌ ಖಾನ್‌ ಅರೆಸ್ಟ್‌

ʼʼಅಭಿಮಾನಿಗಳು, ದೇವರು ಮತ್ತು ನನ್ನ ತಂದೆ-ತಾಯಿ ಆಶೀರ್ವಾದದಿಂದ ನಾನು ಗುಣಮುಖನಾಗುತ್ತಿದ್ದೇನೆ. ನನಗೆ ಗುಂಡೇಟು ಆಗಿತ್ತು. ಈಗ ಬುಲೆಟ್​ ತೆಗೆಯಲಾಗಿದೆ. ಇಲ್ಲಿನ ವೈದ್ಯರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನಗಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆʼʼ ಎಂದು ಗೋವಿಂದ ಅವರು ಹೇಳಿಕೆ ನೀಡಿದ್ದರು.