ಲಾಹೋರ್: ಆಘಾತಕಾರಿ ಘಟನೆಯೊಂದರಲ್ಲಿ ತನ್ನ ಸೊಸೆ ಮಾಟಗಾತಿಯಾಗಿದ್ದಾಳೆ (Witchcraft) ಎಂಬ ಸಂಶಯದಲ್ಲಿ ಗರ್ಭಿಣಿ ಸೊಸೆಯನ್ನು ಅತ್ತೆಯೇ ಕೆಲವು ದುಷ್ಕರ್ಮಿಗಳೊಂದಿಗೆ ಸೇರಿಕೊಂಡು ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅವುಗಳನ್ನು ಚರಂಡಿಗೆ ಎಸೆದಿದ್ದಾಳೆ. ಈ ಬೀಭತ್ಸ ಘಟನೆ (Viral News) ಪಾಕಿಸ್ಥಾನದ (Pakistan) ಪಂಜಾಬ್ (Punjab) ಪ್ರಾಂತ್ಯದಲ್ಲಿ ನಡೆದಿದೆ. ಈ ಘಟನೆ ಕಳೆದ ವಾರ ಸೈಲ್ ಕೋಟ್ (Sialkot) ಜಿಲ್ಲೆಯಲ್ಲಿ ನಡೆದಿದ್ದು,ಇದು ಲಾಹೋರ್ನಿಂದ 100 ಕಿ.ಮೀ. ದೂರದಲ್ಲಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಂತ್ರಸ್ತೆಯ ಅತ್ತೆ ಸುಗ್ರಾನ್ ಬಿಬಿ, ಆಕೆಯ ಪುತ್ರಿ ಯಾಸ್ಮಿನ್ ಮತ್ತು ಆಕೆಯ ಮೊಮ್ಮಗ ಹಂಝ ಹಾಗೂ ದೂರದ ಸಂಬಂಧಿ ನವಿದ್ ಎಂಬವರನ್ನು ಬಂಧಿಸಿದ್ದಾರೆ.
ಕೊಲೆಯಾದ ಗರ್ಭಿಣಿಯನ್ನು 20 ವರ್ಷದ ಝರಾ ಖಾದಿರ್ ಎಂದು ಗುರುತಿಸಲಾಗಿದ್ದು ಈಕೆ ಕಳೆದ 1 ವಾರದಿಂದ ನಾಪತ್ತೆಯಾಗಿದ್ದಳು. ಆ ಬಳಿಕದ ಬೆಳವಣಿಯೊಂದರಲ್ಲಿ ಪೊಲೀಸರಿಗೆ ಮಹಿಳೆಯೊಬ್ಬರ ಮೃತದೇಹ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಬಳಿಕ ಇದು ಝರಾಳ ಮೃತದೇಹವೆಂದೇ ಗುರುತಿಸಲಾಗಿತ್ತು.
ಪೊಲೀಸ್ ಅಧಿಕಾರಿಯೊಬ್ಬರ ಮಗಳಾಗಿರುವ ಝರಾಳನ್ನು ನಾಲ್ಕು ವರ್ಷಗಳ ಹಿಂದೆ ತನ್ನದೇ ಅತ್ತೆ ಮಗನಾಗಿರುವ ಖಾದಿರ್ ಅಹಮ್ಮದ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಮೂರು ವರ್ಷ ಪ್ರಾಯದ ಒಂದು ಮಗುವಿದೆ. ಝರಾ ತನ್ನ ಮದುವೆಯ ಬಳಿಕ ಸೌದಿಗೆ ತೆರಳಿ ಗಂಡನೊಂದಿಗೆ ವಾಸವಾಗಿದ್ದಳು. ಕೆಲವೇ ತಿಂಗಳುಗಳ ಹಿಂದೆಯಷ್ಟೇ ಆಕೆ ಪಾಕಿಸ್ಥಾನಕ್ಕೆ ಮರಳಿದ್ದಳು.
ಬಂಧಿಸಲ್ಪಟ್ಟರುವ ಶಂಕಿತ ಆರೋಪಿಗಳು ತಾವು ಝರಾಳನ್ನು ಕೊಂದು ಆಕೆಯ ದೇಹವನ್ನು ತುಂಡು ಮಾಡಿ ಎಸೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಹಿರಿಯ ಪೊಲೀಸ್ ಅಧಿಕಾರಿ ಒಮರ್ ಫಾರೂಕ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Belagavi News: ನದಿಯಲ್ಲಿ ಮೀನು ಹಿಡಿಯಲು ಹೋಗಿ ತಂದೆ, ಇಬ್ಬರು ಮಕ್ಕಳು ದಾರುಣ ಸಾವು
ಝರಾ ಮಾಟ-ಮಂತ್ರಗಳನ್ನು ಅಭ್ಯಾಸ ಮಾಡುತ್ತಿದ್ದಳು ಎಂಬ ಸಂದೇಹ ಅತ್ತೆ ಸುಗ್ರಾನ್ ಬೀಬಿಗೆ ಇತ್ತು. ಮಾತ್ರವಲ್ಲದೇ ಸೌದಿಯಲ್ಲಿರುವ ಆಕೆಯ ಮಗ ಹಣವನ್ನೆಲ್ಲಾ ನೇರವಾಗಿ ಝರಾಳ ಬ್ಯಾಂಕ್ ಅಕೌಂಟಿಗೆ ಕಳುಹಿಸುತ್ತಿದ್ದ. ಈ ಕೋಪದಲ್ಲಿ ತಾನು ಇನ್ನುಳಿದವರೊಂದಿಗೆ ಸೇರಿಕೊಂಡು ಝರಾಳನ್ನು ಕೊಂದಿರುವುದಾಗಿ ಅತ್ತೆ ಸುಗ್ರಾನ್ ಬೀಬಿ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಗರ್ಭಿಣಿ ಝರಾ ಮಲಗಿದ್ದ ಸಂದರ್ಭದಲ್ಲಿ ನಾಲ್ವರು ಶಂಕಿತರು ಆಕೆಯ ಮುಖಕ್ಕೆ ದಿಂಬನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿದ್ದಾರೆ. ಬಳಿಕ ಆಕೆಯ ಮುಖವನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ ಮತ್ತು ಆಮೇಲೆ ಆಕೆಯ ದೇಹವನ್ನು 12ಕ್ಕಿಂತಲೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದಾರೆ ಬಳಿಕ ಆ ತುಂಡುಗಳನ್ನುಚರಂಡಿಗೆ ಎಸೆದಿದ್ದಾರೆ ಎಂದು ಕೊಲೆಯ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಇನ್ನು ತನ್ನ ಸೊಸೆಯನ್ನು ಕೊಲೆ ಮಾಡಿದ ಬಳಿಕ ಅತ್ತೆ ಸುಗ್ರಾನ್, ತನ್ನ ಸೊಸೆ ಯಾರೊಂದಿಗೋ ಓಡಿ ಹೋಗಿದ್ದಾಳೆ. ಎಂದು ಕಥೆ ಕಟ್ಟಿದ್ದಳು. ಇದರ ಬಗ್ಗೆ ಸಂಶಯಗೊಂಡ ಝರಾಳ ತಂದೆ ಸುಗ್ರಾನ್ ಳನ್ನು ತನಿಖೆಗೊಳಪಡಿಸಿದಾಗ ಆಕೆ ನಿಜ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ ಎಂದು ಝರಾಳ ತಂದೆ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.