ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಕಂಬಾಳು ಗೊಲ್ಲರಹಟ್ಟಿಯ ಬಳಿ ಚಿರತೆ ದಾಳಿಯಿಂದ (Leopard attack) ಮೃತಪಟ್ಟ ಮಹಿಳೆ ಕರಿಯಮ್ಮ(55) ಕುಟುಂಬಕ್ಕೆ ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರ ಘೋಷಿಸಿದೆ. ಸ್ಥಳಕ್ಕೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿ ಪರಿಶೀಲಿಸಿ, ಮೃತ ಮಹಿಳೆಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರವನ್ನು ಅರಣ್ಯ ಇಲಾಖೆಯಿಂದ ನೀಡುವುದಾಗಿ ತಿಳಿಸಿದ್ದಾರೆ.
ಮಹಿಳೆಯನ್ನು ಬಲಿ ಪಡೆದ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಹೀಗಾಗಿ ಸ್ಥಳಕ್ಕೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿ ಪರಿಶೀಲಿಸಿ, ಮೃತ ಮಹಿಳೆ ಕುಟುಂಬಕ್ಕೆ ಶೀಘ್ರ ಪರಿಹಾರ ಘೋಷಿಸಲಾಗುತ್ತದೆ. ಅಲ್ಲದೆ ಚಿರತೆಯನ್ನು ಸೆರೆ ಹಿಡಿಯಲು ಬೋನು ಇರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮಹಿಳೆ ಮೇಲೆ ದಾಳಿ ಮಾಡಿ ರುಂಡ ಹೊತ್ತೊಯ್ದಿದ್ದ ಚಿರತೆ!
ನೆಲಮಂಗಲ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಕರಿಯಮ್ಮ (55) ಎಂಬ ಮಹಿಳೆ ಬಲಿಯಾಗಿದ್ದರು. ಜಾನುವಾರುಗಳಿಗೆ ಮೇವು ತರಲು ಜಮೀನಿಗೆ ತೆರಳಿದ್ದ ವೇಳೆ ದಾಳಿ ಮಾಡಿದ್ದ ಚಿರತೆ, ಮಹಿಳೆಯ ರಕ್ತ ಹೀರಿ ರುಂಡವನ್ನು ಹೊತ್ತೊಯ್ದಿತ್ತು. ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಗೊಲ್ಲರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಗ್ರಾಮದಲ್ಲಿ ಚಿರತೆಯು ಆಗಾಗ ಕಾಣಿಸಿಕೊಂಡಿದ್ದು, ಎಚ್ಚೆತ್ತುಕೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ | Viral News: ಮಾಟಗಾತಿ ಎಂಬ ಶಂಕೆಯಲ್ಲಿ ಗರ್ಭಿಣಿ ಸೊಸೆಯನ್ನೇ ಕೊಂದು ಕತ್ತರಿಸಿ ಚರಂಡಿಗೆಸೆದ ಪಾಪಿ ಅತ್ತೆ
ಮೃತದೇಹವನ್ನೂ ಹೊತ್ತೊಯ್ಯಲು ಯತ್ನಿಸಿದ ಚಿರತೆ
ಮಹಿಳೆ ಕರಿಯಮ್ಮನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ
ರವಾನೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಕುಟುಂಸ್ಥರಿಗೆ ಹಸ್ತಾಂತರಿಸಲಾಗಿದೆ. ಅಂತ್ಯ ಸಂಸ್ಕಾರದ ವೇಳೆ ಬೆಂಕಿ ಹಾಕಿ ಮಹಿಳೆಯ ಶವ ಕಾಯುತ್ತಿದ್ದವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪೊಲೀಸ್ ಹಾಗೂ ಸಾರ್ವಜನಿಕರನ್ನೇ ಬೆದರಿಸಿ ಮೃತದೇಹವನ್ನು ಹೊತ್ತೊಯಲು ಚಿರತೆ ಯತ್ನಿಸಿದೆ. ಕೂಡಲೇ ಅಲ್ಲಿದ್ದ ಜನರು ದೊಣ್ಣೆ, ಮಚ್ಚು ಮತ್ತು ಟಾರ್ಚ್ ಬಳಸಿ ಮತ್ತೊಮ್ಮೆ ಚಿರತೆ ಬಾಯಿಯಿಂದ ಮೃತದೇಹವನ್ನು ಬಿಡಿಸಿಕೊಂಡಿದ್ದಾರೆ.