ಬೆಂಗಳೂರು: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಳ್ವಿ (Who is Omkar Salvi?) ಅವರು ಸೋಮವಾರ ನೇಮಕಗೊಂಡಿದ್ದಾರೆ. ಕಳೆದ 2024ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಓಂಕಾರ್ ಸಾಳ್ವಿ ಸಹಾಯಕ ಬೌಲಿಂಗ್ ಕೋಚ್ ಆಗಿದ್ದರು. ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಕೆಕೆಆರ್ ಗೆದ್ದು ಮೂರನೇ ಬಾರಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ರಣಜಿ ಟ್ರೋಫಿ ಹಾಗೂ ಇರಾನಿ ಟ್ರೋಫಿ ಗೆದ್ದಿದ್ದ ಮುಂಬೈ ತಂಡಕ್ಕೂ ಕೂಡ ಓಂಕಾರ್ ಸಾಳ್ವಿ ಅವರು ಬೌಲಿಂಗ್ ಕೋಚ್ ಆಗಿದ್ದರು. ಕಳೆದ ಎಂಟು ತಿಂಗಳುಗಳಿಂದ ಅವರು ಎಂಟು ಟ್ರೋಫಿಗಳನ್ನು ಗೆದ್ದಿದ್ದಾರೆ. ಇದೀಗ ಅವರು ತಮ್ಮ ಗೆಲುವಿನ ಪಯಣವನ್ನು ಆರ್‌ಸಿಬಿ ತಂಡದಲ್ಲಿಯೂ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಭಾರತ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಸೇವೆಯನ್ನು ಮುಗಿಸಿದ ಬಳಿಕ ಆರ್‌ಸಿಬಿ ತಂಡದಲ್ಲಿ ತಮ್ಮ ಕಾರ್ಯವನ್ನು ಆರಂಭಿಸಲು ಎದುರು ನೋಡುತ್ತಿದ್ದಾರೆ.
ಓಂಕಾರ್‌ರ ಸಹೋದರ ವುಮೆನ್ಸ್ ತಂಡಕ್ಕೆ ಬೌಲಿಂಗ್ ಕೋಚ್
ಓಂಕಾರ್ ಸಾಳ್ವಿ ಅವರ ಸಹೋದರ ಆವಿಷ್ಕಾರ್ ಸಾಳ್ವಿ ಅವರು ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಪಂಜಾಬ್ ತಂಡದಲ್ಲಿಯೂ ಅವರು ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
2023-24ರ ಸಾಲಿನ ದೇಶಿ ಕ್ರಿಕೆಟ್ ನಿಮಿತ್ತ ಓಂಕಾರ್ ಸಾಳ್ವಿ ಅವರನ್ನು ಹೆಡ್ ಕೋಚ್ ಆಗಿ ನೇಮಿಸಲಾಗಿತ್ತು. ಇವರ ಮಾರ್ಗದರ್ಶನದಲ್ಲಿ ಮುಂಬೈ ತಂಡ ಎಂಟು ವರ್ಷಗಳ ಬಳಿಕ ರಣಜಿ ಟ್ರೋಫಿಯನ್ನು ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ದ ಮುಂಬೈ 102 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ದಾಖಲೆಯ 42ನೇ ಬಾರಿ ಮುಂಬೈ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಓಂಕಾರ್ ಸಾಳ್ವಿ ಅವರನ್ನು ಶ್ಲಾಘಿಸಿದ್ದ ರಹಾನೆ
ವಿದರ್ಭ ಹಾಗೂ ಮುಂಬೈ ನಡುವಣ ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನ ನಾಯಕ ಅಜಿಂಕ್ಯಾ ರಹಾನೆ ಅವರು ತಮ್ಮ ತಂಡದ ಕೋಚ್‌ಗಳಿಗೆ ಬೆಂಬಲವನ್ನು ನೀಡಿದ್ದರು.
“ಓಂಕಾರ್ ಸಾಳ್ವಿ ಅವರಂಥ ಕೋಚ್‌ಗಳು ನಮ್ಮ ಜೊತೆ ಇರುವುದು ನಿಜಕ್ಕೂ ಒಳ್ಳೆಯದು. ಅಗ್ರ ದರ್ಜೆಯ ಕೋಚ್‌ಗಳು ಹಾಗೂ ಮಿನುಗುವ ಕೋಚ್‌ಗಳು ತಂಡದಲ್ಲಿ ಇರುವುದು ಬೇಡವೆಂಬುದನ್ನು ಇದು ತೋರಿಸುತ್ತದೆ. ನೀವಿನ್ನೂ ಕೆಳ ದರ್ಜೆಯಲ್ಲಿದ್ದೀರಿ ಹಾಗೂ ಪ್ರತಿಯೊಬ್ಬ ಆಟಗಾರನಲ್ಲಿ ಉತ್ತಮ ಪ್ರದರ್ಶನವನ್ನು ಹೊರಗೆಳೆಯುತ್ತಿದ್ದಾರೆ,” ಎಂದು ಅಜಿಂಕ್ಯಾ ರಹಾನೆ ತಿಳಿಸಿದ್ದಾರೆ.
2008ರಿಂದ ಇಲ್ಲಿಯವರೆಗೂ ಪ್ರತಿಯೊಂದು ಆವೃತ್ತಿಯಲ್ಲಿ ಆಡಿದ ಹೊರತಾಗಿಯೂ ಆರ್‌ಸಿಬಿ ಇನ್ನೂ ಒಂದೇ ಒಂದು ಟ್ರೋಫಿಯನ್ನು ಕೂಡ ಗೆದ್ದಿಲ್ಲ. ಇದೀಗ ಆರ್‌ಸಿಬಿಗೆ ಬಂದಿರುವ ಓಂಕಾರ್ ಸಾಳ್ವಿ ಅವರಿಗೆ ಸಂಗತಿಗಳು ಅಷ್ಟೊಂದು ಸುಲಭವಾಗಿಲ್ಲ. ಮೆಗಾ ಹರಾಜಿನಲ್ಲಿ ಉತ್ತಮ ಬೌಲರ್‌ಗಳನ್ನು ಖರೀದಿಸುವುದು ಇವರಿಗೆ ಮೊದಲನೇ ಸವಾಲು. ನಂತರ ಆರ್‌ಸಿಬಿಗೆ ಚೊಚ್ಚಲ ಕಪ್ ಗೆದ್ದುಕೊಡುವ ದೊಡ್ಡ ಸವಾಲು ಎದುರಾಗಲಿದೆ.