Monday, 18th November 2024

Anmol Bishnoi: ಅಮೆರಿಕದಲ್ಲಿ ಗ್ಯಾಂಗ್​ಸ್ಟರ್ ಅನ್ಮೋಲ್ ಬಿಷ್ಣೋಯ್‌ ಬಂಧನ

Anmol Bishnoi

ವಾಷಿಂಗ್ಟನ್‌: ಜೈಲಿನಲ್ಲಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ (Anmol Bishnoi)​ನನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಪ್ರಕಟವಾಗಿಲ್ಲ.

“ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ನೊಂದಿಗೆ ಸೇರಿ ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನ್ಮೋಲ್ ಬಿಷ್ಣೋಯ್‌ನನ್ನು ನಾಲ್ಕೈದು ದಿನಗಳ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ. ಅಧಿಕೃತ ಮೂಲಗಳಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಇತ್ತೀಚೆಗೆ ನಡೆದ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲಿಸ್ತಾನಿ ಭಯೋತ್ಪಾದಕ ಮತ್ತು ಭಾರತದ ಮೋಸ್ಟ್ ವಾಂಟೆಡ್ ಅಪರಾಧಿ ಅರ್ಶ್‌ ದಲ್ಲಾ ಆಲಿಯಾಸ್‌ ಅರ್ಷ್‌ದೀಪ್‌ ಸಿಂಗ್‌ನನ್ನು ಕೆನಡಾದಲ್ಲಿ ಕಳೆದ ವಾರ ಬಂಧಿಸಲಾಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಮತ್ತೊಬ್ಬ ಅಪರಾಧಿಯನ್ನು ವಶಕ್ಕೆ ಪಡೆದಂತಾಗಿದೆ. ಈ ಬಗ್ಗೆ ಭಾರತೀಯ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಮೆರಿಕ ಅಧಿಕಾರಿಗಳು ಈಗಾಗಲೇ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಈ ವರ್ಷದ ಏ. 14ರಂದು ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಮತ್ತು ಅ. 12ರಂದು ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಅನ್ಮೋಲ್ ಬಿಷ್ಣೋಯ್ ಕೈವಾಡ ಇರುವ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನ್ಮೋಲ್ ಬಿಷ್ಣೋಯ್‌ನನ್ನು ಹಸ್ತಾಂತರಿಸುವಂತೆ ಅಮೆರಿಕಕ್ಕೆ ಮನವಿ ಸಲ್ಲಿಸಲು ಮುಂಬೈ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈಗಾಗಲೇ ಅನ್ಮೋಲ್ ಬಿಷ್ಣೋಯ್‌ನನ್ನು ‘ಮೋಸ್ಟ್ ವಾಂಟೆಡ್ ಅಪರಾಧಿ’ ಪಟ್ಟಿಗೆ ಸೇರಿಸಿದೆ.

ಅನ್ಮೋಲ್ ಬಿಷ್ಣೋಯ್‌ ಹಿನ್ನೆಲೆ

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ಸಹೋದರ ಈ ಅನ್ಮೋಲ್‌ ಬಿಷ್ಣೋಯ್‌. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲೂ ಆತನ ಕೈವಾಡವಿತ್ತು ಎನ್ನಲಾಗಿದೆ. ಸಿಧು ಮೂಸೆವಾಲಾ ಹತ್ಯೆಯ ಬಳಿಕ ಅನ್ಮೋಲ್‌ ನಕಲಿ ಪಾಸ್‌ಪೋರ್ಟ್‌ ಬಳಸಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿದ್ದ. ಕಳೆದ ವರ್ಷ ಆತ ಅಜರ್‌ಬೈಜಾನ್‌ನಲ್ಲಿ ಪತ್ತೆಯಾಗಿದ್ದರೂ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ಅಮೆರಿಕದಲ್ಲಿ ಕಂಡುಬಂದಿದ್ದ. ಕೆಲವು ತಿಂಗಳ ಹಿಂದೆ ಮದುವೆ ಸಮಾರಂಭಕ್ಕೆ ಆತ ತೆರಳಿದ್ದ ವಿಡಿಯೊ ವೈರಲ್‌ ಆಗಿತ್ತು.

ಏಪ್ರಿಲ್‌ನಲ್ಲಿ ಸಲ್ಮಾನ್‌ ಖಾನ್‌ ಮನೆಯ ಹೊರಗೆ ನಡೆದ ಗುಂಡಿನ ದಾಳಿಯನ್ನು ಆತ ಹೊತ್ತುಕೊಂಡಿದ್ದ. ಘಟನೆ ಬಳಿಕ ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ. ತಲೆ ಮರೆಸಿಕೊಂಡಿರುವ ಅನ್ಮೋಲ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಚಟುವಟಿಕೆ ನಡೆಸುತ್ತಿದ್ದಾರೆ. ಇವರ ಜಾಲ ಪಂಜಾಬ್‌, ಹರಿಯಾಣ, ಚಂಡಿಘಡ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ಬಿಹಾರ್‌ ಮತ್ತು ಜಾರ್ಖಂಡ್‌ ಮುಂತಾದ ಕಡೆ ವಿಸ್ತರಿಸಿದೆ.

ಇದನ್ನೂ ಓದಿ: Lawrence Bishnoi: ಲಾರೆನ್ಸ್‌ ಬಿಷ್ಣೋಯ್‌ ಎನ್‌ಕೌಂಟರ್‌ ಮಾಡುವ ಪೊಲೀಸರಿಗೆ 1,11,11,111ರೂ. ಬಹುಮಾನ; ಕರಣಿ ಸೇನೆ ಅನೌನ್ಸ್‌