Monday, 18th November 2024

Champions Trophy: ʻಹೈಬ್ರಿಡ್‌ ಮಾದರಿ ಇಲ್ಲ, ಪಾಕಿಸ್ತಾನದಲ್ಲಿಯೇ ಟೂರ್ನಿʼ-ಭಾರತಕ್ಕೆ ಪಿಸಿಬಿ ವಾರ್ನಿಂಗ್‌!

'If India have any concerns, we will talk',says PCB chief Mohsin Naqvi

ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಇನ್ನೂ ಯಾವುದೇ ಹೊಸ ಮಾಹಿತಿ ಬಂದಿಲ್ಲ. ಈ ಟೂರ್ನಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ. ಐಸಿಸಿಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನದಲ್ಲಿಯೇ ಆಯೋಜಿಸುವ ಭರವಸೆಯನ್ನು ಹೊಂದಿದ್ದಾರೆ. ಈ ಬಗ್ಗೆ ಐಸಿಸಿಯ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪಿಸಿಬಿಯೊಂದಿಗೆ ಮಾತನಾಡಬೇಕು ಮತ್ತು ಅದರ ಸಮಸ್ಯೆ ಏನೆಂದು ವ್ಯಕ್ತಪಡಿಸಬೇಕು ಎಂದು ಪಿಸಿಬಿ ಮುಖ್ಯಸ್ಥರು ಬಿಸಿಸಿಐಗೆ ಸಂದೇಶವನ್ನು ರವಾನಿಸಿದ್ದಾರೆ. “ನಾವು ಗುರಿಯನ್ನು ಸಾಧಿಸುತ್ತೇವೆ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿಯೇ ಆಯೋಜಿಸುತ್ತೇವೆ,” ಎಂದು ಪಿಸಿಬಿ ಮುಖ್ಯಸ್ಥ ಸೋಮವಾರ ಸಂಜೆ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

Champions Trophy: ಪಿಒಕೆ ಚಾಂಪಿಯನ್ಸ್‌ ಟ್ರೋಫಿ ಪ್ರವಾಸ ಕೈ ಬಿಟ್ಟ ಪಾಕ್‌

ಪಿಸಿಬಿ ಮುಖ್ಯಸ್ಥ ಹೇಳಿದ್ದೇನು?

“ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಎಲ್ಲಾ ತಂಡಗಳು (ಭಾರತ ಹೊರತುಪಡಿಸಿ) ಪಾಕಿಸ್ತಾನಕ್ಕೆ ಬರಲು ಸಿದ್ಧವಾಗಿದ್ದು, ಯಾರಿಗೂ ಯಾವುದೇ ತೊಂದರೆ ಇಲ್ಲ. ಭಾರತಕ್ಕೆ ಯಾವುದೇ ಸಮಸ್ಯೆ ಇದ್ದರೆ ಅವರು ನಮ್ಮೊಂದಿಗೆ ಮಾತನಾಡಬೇಕು ಎಂದು ನಾನು ಇಂದಿಗೂ ಹೇಳುತ್ತೇನೆ. ಅವರ ಎಲ್ಲಾ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಬರಲು ಯಾವುದೇ ಕಾರಣವಿಲ್ಲ ಎಂದು ನಾನು ನಂಬುತ್ತೇನೆ. ನೀವು ಕಾಯಿರಿ ಮತ್ತು ಎಲ್ಲಾ ತಂಡಗಳು ಬರುತ್ತವೆ.

ಫೆಬ್ರವರಿ 29 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಜಗಳ ಮುಂದುವರಿದಿದೆ. ಟೂರ್ನಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲು ಸಿದ್ಧವಿಲ್ಲ ಎಂದು ಪಿಸಿಬಿಗೆ ಐಸಿಸಿ ತಿಳಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ಸರ್ಕಾರ ತನ್ನ ತಂಡವನ್ನು ಪಾಕಿಸ್ತಾನದಿಂದ ಹೊರಗೆ ಕಳುಹಿಸದಂತೆ ಪಿಸಿಬಿಗೆ ಸೂಚನೆ ನೀಡಿದೆ.

ನಮ್ಮ ನಿಲುವು ಸ್ಪಷ್ಟವಾಗಿದೆ: ನಖ್ವಿ

ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತಿದೆಯೇ? ಅಥವಾ ಪಾಕಿಸ್ತಾನದ ಹೊರಗೆ ಭಾರತದ ಪಂದ್ಯಗಳನ್ನು ಆಡಲಾಗುತ್ತಿದೆ ಎಂಬುದರ ಕುರಿತು ಕೇಳಲಾದ ಪ್ರಶ್ನೆಗೆ, ಪಿಸಿಬಿ ಸಂಪೂರ್ಣ ಟೂರ್ನಿಯನ್ನು ಪಾಕಿಸ್ತಾನದಲ್ಲಿಯೇ ಆಯೋಜಿಸುವ ತನ್ನ ನಿಲುವಿಗೆ ಬದ್ಧವಾಗಿದೆ ಎಂದು ನಖ್ವಿ ತಿಳಿಸಿದ್ದಾರೆ.

“ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ. ಇದನ್ನು ಈ ಹಿಂದೆಯೂ ಹೇಳಿದ್ದೇವೆ. ನಾವು ನಮ್ಮ ನಿಲುವಿಗೆ ಅಂಟಿಕೊಳ್ಳುತ್ತೇವೆ. ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಬೇಕಿದೆ. ವೇಳಾಪಟ್ಟಿಯ ಪ್ರಕಟಣೆಗಾಗಿ ನಾವು ಕಾಯುತ್ತಿದ್ದೇವೆ ಆದ್ದರಿಂದ ನಾವು ಅದಕ್ಕೆ ಅನುಗುಣವಾಗಿ ಸಿದ್ಧತೆಗಳನ್ನು ಪ್ರಾರಂಭಿಸಬಹುದು. ವೇಳಾಪಟ್ಟಿಯನ್ನು ಘೋಷಿಸಿದ ತಕ್ಷಣ, ನಾವು ಸಾಧ್ಯವಾದಷ್ಟು ಬೇಗ ನಮ್ಮ ಸಿದ್ಧತೆಗಳನ್ನು ಪ್ರಾರಂಭಿಸುತ್ತೇವೆ,” ಎಂದು ತಿಳಿಸಿದ್ದಾರೆ ಮೊಹ್ಸಿನ್‌ ನಖ್ವಿ.

Champions Trophy: ಚಾಂಪಿಯನ್ಸ್​ ಟ್ರೋಫಿ ಆತಿಥ್ಯ ಕೈ ತಪ್ಪಿದರೆ ಪಾಕ್‌ಗೆ 548 ಕೋಟಿ ರೂ. ನಷ್ಟ

ಐಸಿಸಿ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ

“ನಾನು ಕ್ರೀಡಾಂಗಣಗಳ ಬಗ್ಗೆ ಮಾತ್ರ ಮಾತನಾಡಲು ಬಯಸಿದ್ದೆ, ಆದರೆ ನಾವು ಪತ್ರ ಬರೆದಿದ್ದೇವೆ. ನಾವು ಈ ಸಂಬಂಧ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ನಮ್ಮ ಮಾತುಕತೆಗಳು ಐಸಿಸಿಯೊಂದಿಗೆ ಮಾತ್ರ ಮತ್ತು ಐಸಿಸಿಯ ಪ್ರತಿಕ್ರಿಯೆಗಾಗಿ ನಾವು ಕಾಯುತ್ತೇವೆ. ಇಂದಿಗೂ ಕ್ರೀಡೆ ಮತ್ತು ರಾಜಕೀಯ ಬೇರೆ ಬೇರೆ ಎಂದು ನಂಬಿದ್ದೇನೆ. ಯಾವುದೇ ದೇಶವು ಇದನ್ನು ಮಿಶ್ರಣ ಮಾಡಬಾರದು. ನಾನು ಇನ್ನೂ ಉತ್ತಮವಾದದ್ದನ್ನು ಆಶಿಸುತ್ತೇನೆ,” ಎಂದು ಪಿಸಿಬಿ ಚೀಫ್‌ ಹೇಳಿದ್ದಾರೆ.