Tuesday, 19th November 2024

Tunic Tops Fashion: ಹುಡುಗಿಯರ ಮನಗೆದ್ದ ಬಗೆಬಗೆಯ ಟ್ಯೂನಿಕ್ ಔಟ್ ಫಿಟ್ಸ್!

Tunic Tops Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಟ್ಯೂನಿಕ್ ಫ್ಯಾಷನ್ ಹುಡುಗಿಯರ ಮನ ಗೆದ್ದಿದೆ. ಬಗೆಬಗೆ ವಿನ್ಯಾಸದ ಈ ಟ್ಯೂನಿಕ್ ಫ್ಯಾಷನ್ ಟಾಪ್ (Tunic Tops Fashion) ಹಾಗೂ ಕುರ್ತಾಗಳು ಸೀದಾ-ಸದಾ ಡಿಸೈನ್‌ನಲ್ಲಿ, ಬಗೆಬಗೆಯ ನೆಕ್ಲೈನ್‌ಗಳಲ್ಲಿ, ವೈವಿಧ್ಯಮಯ ಸ್ಲೀವ್‌ಗಳಲ್ಲಿ, ಬೆಲ್ಟ್ ಫ್ಯಾಷನ್‌ನಲ್ಲಿ, ಟ್ರಾಪಿಕಲ್, ಫ್ಲೋರಲ್ ಹಾಗೂ ಡಾರ್ಕ್-ಲೈಟ್ ಶೇಡ್ಸ್‌ನಲ್ಲಿ ಫ್ಯಾಷನ್‌ಲೋಕದಲ್ಲಿ ರಾರಾಜಿಸುತ್ತಿವೆ.

ಚಿತ್ರಕೃಪೆ: ಪಿಕ್ಸೆಲ್

ಭಿನ್ನ-ವಿಭಿನ್ನ ಡಿಸೈನ್‌ನಲ್ಲಿ ಟ್ಯೂನಿಕ್ ಡ್ರೆಸ್

ಅಂದಹಾಗೆ, ಟ್ಯೂನಿಕ್ ಫ್ಯಾಷನ್‌ನಲ್ಲಿ ಸಾಕಷ್ಟು ವೆರೈಟಿಗಳಿವೆ. ಡಿಸೈನ್‌ಗಂತೂ ಲೆಕ್ಕವೇ ಇಲ್ಲ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಈ ಟ್ಯೂನಿಕ್ ಟಾಪ್‌ಗಳು ಇತರೆ ಟಾಪ್‌ಗಳಂತೆ ಕೊನೆಯಲ್ಲಿ ಸಮನಾಗಿ ಕೊನೆಯಾಗಿರುವುದಿಲ್ಲ. ಬದಲಿಗೆ ವಕ್ರ, ತ್ರಿಕೋನಾ, ಮಧ್ಯೆ ಮಧ್ಯೆ ಮೊನಾಚಾದ ಆಕಾರದಲ್ಲಿರುತ್ತವೆ. ವಿಚಿತ್ರ ಕಟ್ ಹೊಂದಿರುತ್ತವೆ. ಕೆಲವು ಸಿಂಪಲ್ ಆಗಿ ಕಂಡರೂ ವಿಭಿನ್ನ ಹೊಲಿಗೆ ಹೊಂದಿರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಉದಾಹರಣೆಗೆ, ಜೀಬ್ರಾ ಪ್ರಿಂಟ್ಸ್, ಸ್ಟ್ರೈಪ್ಸ್, ಫ್ಲೋರಲ್, ಪ್ರಿಂಟೆಡ್ ಇವೆಲ್ಲಾ ಟ್ಯೂನಿಕ್ ಟಾಪ್ ಹಾಗೂ ಟ್ಯೂನಿಕ್ ಕುರ್ತಾಗಳ ಇತ್ತೀಚಿನ ಡಿಸೈನ್ಸ್. ರಾಯಲ್ ಬ್ಲ್ಯೂ, ಚಾಕೋಲೇಟ್, ಟಾಫಿ, ಮಜೆಂತಾ, ತಿಳಿ ಗುಲಾಬಿ, ತಿಳಿ ಹಳದಿ, ಕೆಂಪು, ನೀಲಿ, ಹಸಿರು, ರೇಡಿಯಂ, ಕೇಸರಿ ಹೀಗೆ ಟ್ರೆಂಡಿ ಕಲರ್‌ಗಳಲ್ಲಿ ದೊರೆಯುತ್ತಿವೆ. ಇನ್ನು, ಫ್ಯಾಷನಿಸ್ಟಾ ರಾಜ್ ಪ್ರಕಾರ, ಇಂದು ಹೆಚ್ಚು ಟ್ರೆಂಡ್‌ನಲ್ಲಿರೋದು ಮಿಕ್ಸ್ ಅಂಡ್ ಮ್ಯಾಚ್ ಟ್ಯೂನಿಕ್ ಟಾಪ್ ಹಾಗೂ ಕುರ್ತಾಗಳಂತೆ.

ಹುಡುಗಿಯರ ಚಾಯ್ಸ್‌ನಲ್ಲಿ ಟ್ಯೂನಿಕ್ ಟಾಪ್ಸ್

ಧರಿಸಿದರೂ ಭಾರವೆನಿಸದ, ಉಸಿರುಗಟ್ಟಿಸದ, ಆರಾಮ ಎನಿಸುವ, ಯಾವುದೇ ಪ್ಯಾಂಟ್ ಮೇಲೂ ಧರಿಸಬಹುದಾದ ಸಿಂಪಲ್ ಹಾಗೂ ಡಿಸೈನರಿ ನೆಕ್ಲೈನ್ ಇರುವ ಟ್ಯೂನಿಕ್ ಟಾಪ್ ಈ ಬಾರಿಯ ವರ್ಷಾಂತ್ಯದ ಫ್ಯಾಷನ್ ಹಿಟ್‌ಲಿಸ್ಟ್‌ಗೆ ಸೇರಿದೆ. ನೋಡಲು ಮೋಹಕವಾಗಿ ಕಾಣಬಲ್ಲ ಇವುಗಳನ್ನು ಹೆಚ್ಚಾಗಿ ಇಷ್ಟಪಡುತ್ತಿರುವವರು ಹುಡುಗಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು.

ಮಿಕ್ಸ್ ಮ್ಯಾಚ್ ಫ್ಯಾಷನ್‌ಗೆ ಬೆಸ್ಟ್

ಸ್ಟೈಲಿಸ್ಟ್ ಜಯಂತ್ ಹೇಳುವಂತೆ, ಸಾವಿರಗಟ್ಟಲೆ ಸುರಿದು ಒಂದು ಸೆಲ್ವಾರ್ ಕೊಳ್ಳುವ ಬದಲು ಒಂದತ್ತು ಟ್ಯೂನಿಕ್ ಟಾಪ್ ಇಲ್ಲವೇ ಟ್ಯೂನಿಕ್ ಕುರ್ತಾಗಳನ್ನು ಕೊಳ್ಳಿ. ಇದು ನಯಾ ಫ್ಯಾಷನ್‌ಗೆ ಒಗ್ಗುವುದಲ್ಲದೇ, ಎಲ್ಲಾ ವರ್ಗದ ಹಾಗೂ ಕ್ಷೇತ್ರದ ಮಹಿಳೆಯರಿಗೂ ಒಪ್ಪುತ್ತದೆ.

ಎಲಿಗೆಂಟ್ ಲುಕ್ ನೀಡುವ ಉಡುಗೆ

ಫ್ಯಾಷನ್ ವಿನ್ಯಾಸಕ ಓಮಿ ಹೇಳುವಂತೆ, ಮೊದಲೆಲ್ಲಾ ಮಕ್ಕಳ ಉಡುಪುಗಳಿಗೆ ಮಾತ್ರ ಮೀಸಲಾಗಿದ್ದ ಈ ವಿನ್ಯಾಸ ಇದೀಗ ರೂಪ ಬದಲಿಸಿ ಇದೀಗ ಮಾನಿನಿಯರ ಮನ ಗೆದ್ದಿದೆ. ಹತ್ತಿ ಬಟ್ಟೆ ಮಾತ್ರವಲ್ಲ, ಸಿಲ್ಕ್, ಕ್ರೇಪ್, ಜಾರ್ಜೆಟ್, ಶಿಫಾನ್ ಹೀಗೆ ಎಲ್ಲಬಗೆಯ ಮೇಟಿರಿಯಲ್‌ಗಳಲ್ಲೂ ದೊರೆಯತೊಡಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ಈ ಸುದ್ದಿಯನ್ನೂ ಓದಿ | Winter Jacket Fashion: ಈ ಜಮಾನಾದ ಹುಡುಗಿಯರ ವಿಂಟರ್ ಜಾಕೆಟ್ ಫ್ಯಾಷನ್ ಕ್ರೇಜ್‌ ಹೀಗಿದೆ!

ಟ್ಯೂನಿಕ್ ಟಾಪ್/ಕುರ್ತಾ ಪ್ರಿಯರ ಗಮನಕ್ಕೆ

ಟ್ಯೂನಿಕ್ ಟಾಪ್‌ಗಳನ್ನು ಕೊಂಡರಷ್ಟೇ ಸಾಲದು. ಅವಕ್ಕೆ ತಕ್ಕಂತೆ ಪ್ಯಾಂಟ್‌ಗಳ ಆಯ್ಕೆ ಮ್ಯಾಚ್ ಆಗುವಂತಿರಬೇಕು. ಇಲ್ಲವಾದಲ್ಲಿ, ನೋಡುವವರಿಗೆ ಅಭಾಸ ಉಂಟುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವ ಫ್ಯಾಷನಿಸ್ಟಾ ರಾಜ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

  • ಎರಡಕ್ಕಿಂತ ಹೆಚ್ಚು ಶೆಡ್ ಇರುವ ಟ್ಯೂನಿಕ್ ಟಾಪ್ ಬಣ್ಣ ಮಿಶ್ರವಾಗುವ ಸಾಧ್ಯತೆ ಹೆಚ್ಚು.
  • ಬಾಂದನಿ ವಿನ್ಯಾಸದ ಟ್ಯೂನಿಕ್ ಟಾಪ್ ಕೊಳ್ಳುವಾಗ ಎಚ್ಚರ.
  • ಗಾಢ ವರ್ಣದ ಟ್ಯೂನಿಕ್ ಟಾಪ್ ಕೊಂಡಲ್ಲಿ, ಇವಕ್ಕೆ ತಿಳಿ ಬಣ್ಣದ ಪ್ಯಾಂಟ್ ಮ್ಯಾಚ್ ಮಾಡಿದರೇ ಒಳಿತು.
  • ನೆಕ್ಲೈನ್ ಹಾಗೂ ಡಿಸೈನ್ ವಿನ್ಯಾಸ ನೋಡಿ, ಕೊಂಡರೆ ಒಳಿತು.
  • ಅಸ್ಸೆಮ್ಮಿಟ್ರಿಕಲ್ ಕಟ್‌ನ ಟ್ಯೂನಿಕ್ ಟಾಪ್ ಟ್ರೆಂಡಿಯಾಗಿವೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)