Tuesday, 19th November 2024

Pralhad Joshi: ಜಾತಿ ರಹಿತ ಸಮಾಜಕ್ಕೆ ಸುಭದ್ರ ಅಡಿಪಾಯ ಹಾಕಿದವರು ಕನಕದಾಸರು; ಪ್ರಲ್ಹಾದ್‌ ಜೋಶಿ

pralhad joshi

ಹುಬ್ಬಳ್ಳಿ: ನಾಡಿನಲ್ಲಿ ಅನ್ಯಾಯ-ಅಕ್ರಮವನ್ನು ನಿಲ್ಲಿಸುವಂತೆ 15, 16ನೇ ಶತಮಾನದಲ್ಲೇ ಪ್ರಾಂತ್ಯ ಆಳುವ ಪ್ರಭುತ್ವವನ್ನು ಒತ್ತಾಯಿಸಿದಂಥ ಸಂತ ಶ್ರೇಷ್ಠ ಕನಕದಾಸರು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಪ್ರತಿಪಾದಿಸಿದರು. ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದಲ್ಲಿ ಬೀದಿ ಬದಿಯೇ ಮುತ್ತು-ರತ್ನ- ಹವಳಗಳ ವ್ಯಾಪಾರ ನಡೆಯುತ್ತಿತ್ತು. ಅಂಥ ಸಿರಿತನದ ಸಾಮ್ರಾಜ್ಯವೇ ಆಗಿದ್ದರೂ ಆಗಲೂ ಅಕ್ರಮ, ಅನ್ಯಾಯ ನಡೆಯುತ್ತಿತ್ತು. ಆಗ ಅದರ ವಿರುದ್ಧ ದನಿ ಎತ್ತಿದ ಏಕೈಕ ಸಂತ ಶ್ರೇಷ್ಠ ಕನಕರು ಎಂದು ಹೇಳಿದರು.

ಅಂದಿನ ಕಾಲದಲ್ಲಿ ಬಂಕಾಪುರ ಪ್ರಾಂತ್ಯದ ದಂಡ ನಾಯಕರಾಗಿದ್ದ ಕನಕದಾಸರು, ವಿಜಯನಗರ ಸಾಮ್ರಾಜ್ಯದ ಉಳಿವಿಕೆಗಾಗಿ ಬಹುಮುರಿ ಸುಲ್ತಾನನೊಂದಿಗೆ ಯುದ್ಧ ಮಾಡಿದವರು. ಯುದ್ಧದಲ್ಲಿ ಪ್ರಜ್ಞೆ ತಪ್ಪಿ ಬಿದ್ದರು. ಕನಕಪ್ಪ ಸತ್ತ ಎಂದೇ ಹರಡಿತು. ಆದರೆ, ಪ್ರಜ್ಞೆ ಬಂದ ನಂತರದಲ್ಲಿ ಕನಕಪ್ಪ ಯುದ್ಧ, ಮೋಹ ಎಲ್ಲ ತೊರೆದು ಆದಿಕೇಶವನ ಸೇವೆಗೆ ಭಕ್ತಿಯ ಪಂಕ್ತಿಯಲ್ಲಿ ಸಾಗಿ ಸಂತ ಶ್ರೇಷ್ಠ, ದಾಸ ಶ್ರೇಷ್ಠರಾದರು ಎಂದು ಕನಕದಾಸರ ಜೀವನ ಚರಿತ್ರೆಯನ್ನು ಸಚಿವ ಪ್ರಲ್ಹಾದ್‌ ಜೋಶಿ ವರ್ಣಿಸಿದರು.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿದೆ 164 ಹುದ್ದೆ; 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಿ

ವಿಜಯನಗರವೇ ದ್ವಾರಕಾಪುರಿ. ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿ ಕುಬೇರನಿಗೂ ಸಾಲ ಕೊಡುವಂಥ ಸಿರಿತನದ ಸಾಮ್ರಾಜ್ಯವಿದು. ಬಂಗಾರದಿಂದಲೇ ನಿರ್ಮಿಸಿದಂತಹ ಮನೆಗಳಿದ್ದವು ಎಂಬುದನ್ನು ತಮ್ಮ ಮೋಹನ ತರಂಗಿಣಿ ಕೃತಿಯಲ್ಲಿ ವರ್ಣಿಸಿದವರು ಕನಕದಾಸರು ಎಂದು ಅವರು ಸ್ಮರಿಸಿದರು.

ಕನಕದಾಸರು ಮೋಹನ ತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತ್ರೆ, ಹರಿಭಕ್ತಿ ಸಾರ ಕೃತಿಗಳನ್ನು ರಚಿಸಿ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಈ ದೇಶದ ಮೂಲ ಭಾಷೆ ಸಂಸ್ಕೃತ. ಸಂಸ್ಕೃತಕ್ಕೆ ವೈಜ್ಞಾನಿಕ ತಳಹದಿಯೇ ಇದೆ ಎಂಬುದನ್ನು ಬೇರೆ ಬೇರೆ ರಾಷ್ಟ್ರಗಳ ಸಂಶೋಧಕರು, ಅಧ್ಯಯನಕಾರರೂ ಹೇಳಿದ್ದಾರೆ. ಇಂಥ ಒಂದು ಭಾಷೆ ಮತ್ತು ಕನ್ನಡ ಸಾಹಿತ್ಯಕ್ಕೆ ಪ್ರಾಂತೀಯ ಭಾಷೆಯಲ್ಲಿ ಭಕ್ತಿ ಗೀತೆಗಳ ಮೂಲಕ ಅನನ್ಯ ಕೊಡುಗೆ ನೀಡಿದರು ಕನಕದಾಸರು ಎಂದು ಸ್ಮರಿಸಿದರು.

ಅಂದಿನ ಕಾಲದಲ್ಲೇ ಜಾತಿ ರಹಿತ ಸಮಾಜಕ್ಕೆ ಸುಭದ್ರ ಅಡಿಪಾಯ ಹಾಕಿದವರು ಕನಕದಾಸರು. ‘ಜಾತಿಯಿಂದ ಮನುಷ್ಯ’ ಎಂಬುದನ್ನು ಅಲ್ಲಗಳೆದು ನಮ್ಮ ನಾಡಿನದು ಜಾತ್ಯಾತೀತ ಸಂಸ್ಕೃತಿ ಎಂದು ಪ್ರಬುದ್ಧವಾಗಿ, ಪ್ರಬಲವಾಗಿ ಪ್ರತಿಪಾದಿಸಿದವರು ಕನಕದಾಸರು ಎಂದು ಹೇಳಿದರು.

ಮಹಾತ್ಮರನ್ನು ಒಂದೊಂದು ಜಾತಿಗೆ ಸೀಮಿತವಾಗಿ ನೋಡುತ್ತಿರುವುದು ದುರ್ದೈವ

ಶಂಕರಾಚಾರ್ಯರು, ರಾಮಾನುಜಚಾರ್ಯರು ಅಂದಿನ ಕಾಲದಲ್ಲೇ ಜಾತೀಯತೆ ತೊಡೆದು ಹಾಕಲು ಪ್ರಯತ್ನಿಸಿದ್ದರು. ಅದಕ್ಕೆ ಬಲ ತುಂಬುವ ಕಾರ್ಯ ಮಾಡಿದವರು ಕನಕದಾಸರು. ಆದರೆ ಇಂದಿನ ಸಮಾಜ ಶಂಕರಾಚಾರ್ಯ, ರಾಮಾನುಜಚಾರ್ಯ, ಬಸವಣ್ಣ, ಅಂಬೇಡ್ಕರ್, ವಾಲ್ಮೀಕಿ ಅವರಂಥ ಮಹಾತ್ಮರನ್ನು ಒಂದೊಂದು ಜಾತಿಗೆ ಸೀಮಿತವಾಗಿ ನೋಡುತ್ತಿರುವುದು ದುರ್ದೈವ ಎಂದು ಸಚಿವ ಪ್ರಲ್ಹಾದ್‌ ಜೋಶಿ ವಿಷಾದ ವ್ಯಕ್ತಪಡಿಸಿದರು.

ಕೇವಲ ರಜೆಗೆ ಸೀಮಿತವಾಗಿವೆ ಮಹಾತ್ಮರ ಜಯಂತಿಗಳು

ಕನಕ, ಶಂಕರಾಚಾರ್ಯ, ಅಂಬೇಡ್ಕರ್, ಬಸವ, ವಾಲ್ಮೀಕಿ ಜಯಂತಿ ಆಚರಣೆಗಳು ಇಂದು ಕೇವಲ ರಜೆಗೆ, ಸಿನಿಮಾ ಥೇಟರ್‌ಗಳಿಗೆ ಸೀಮಿತ ಆಗಿವೆ ಎಂದು ತೀವ್ರ ಬೇಸರದಿಂದ ನುಡಿದರು.

ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು

ಭಾರತದಲ್ಲಿ ಹುಟ್ಟಿದಂತಹ ಮಹಾತ್ಮರು ಜಗತ್ತಿನ ಬೇರೆ ಯಾವ ರಾಷ್ಟ್ರಗಳಲ್ಲೂ ಜನಿಸಿಲ್ಲ. ಇಂಥವರ ಬಗ್ಗೆ ನಾವು ಸಮಗ್ರ ಅಧ್ಯಯನ ನಡೆಸಬೇಕು. ಅಲ್ಲದೆ, ಮಹನೀಯರನ್ನು ಸ್ಮರಿಸುವ ಇಂಥ ದಿನಾಚರಣೆಗಳಲ್ಲಿ ಯಾರೊಬ್ಬರೂ ಆ ಪಕ್ಷ, ಈ ಪಕ್ಷ ಎನ್ನದೇ ಎಲ್ಲರೂ ಪಕ್ಷಾತೀತ ಮತ್ತು ಜಾತ್ಯತೀತರಾಗಿ ಪಾಲ್ಗೊಳ್ಳಬೇಕು. ಈ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಾರುವ ಪ್ರಯತ್ನವನ್ನು ಮಾಡಬೇಕಿದೆ ಎಂದು ಅವರು ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ | Largest Airport: ಇದು ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ; ಎಲ್ಲಿದೆ? ಏನಿದರ ವಿಶೇಷತೆ?

ದಾಸಶ್ರೇಷ್ಠ ಕನಕದಾಸರ ಜೀವನ ಚರಿತ್ರೆ, ಜಾತೀಯತೆ ವಿರುದ್ಧ ಅವರ ನಯವಾದ ಹೋರಾಟದ ಬಗೆ, ಭಕ್ತಿಗೀತೆ, ಕೀರ್ತನೆಗಳನ್ನು ಒಂದೊಂದಾಗಿ ವರ್ಣಿಸುತ್ತಾ ಅವುಗಳಲ್ಲಿನ ತಿರುಳನ್ನು ಮನಮುಟ್ಟುವಂತೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿವರಿಸಿದರು.