Friday, 22nd November 2024

Viral Video: ಸೇತುವೆಯಿಂದ ನದಿಗೆ ಜಿಗಿಯಲಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಪತ್ರಕರ್ತರು!

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ (suicide) ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಕ್ಕಳನ್ನು ಹಿಡಿದುಕೊಂಡು ನದಿ, ನಾಲೆಗಳಿಗೆ ಜಿಗಿಯುವ ಪ್ರಕರಣಗಳೂ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಆದರೆ ಕೆಲವೊಂದು ಆತ್ಮಹತ್ಯಾ ಯತ್ನ ಪ್ರಕರಣಗಳನ್ನು ಸಾರ್ವಜನಿಕರ ಸಕಾಲಿಕ ಮಧ್ಯಪ್ರವೇಶದಿಂದ ತಡೆಯಲ್ಪಡುವ ಘಟನೆಗಳೂ ಅಲ್ಲೊಂದು ಇಲ್ಲೊಂದು ಎಂಬಂತೆ ವರದಿಯಾಗುತ್ತಿದೆ. ಇದಕ್ಕೊಂದು ತಾಜಾ ನಿದರ್ಶನವೆಂಬಂತೆ ಸೇತುವೆ ಮೇಲಿಂದ ಗೋದಾವರಿ (Godavari) ನದಿಗೆ ಹಾರಲು ಸಿದ್ಧನಾಗಿದ್ದ ವ್ಯಕ್ತಿಯೊಬ್ಬನ ಪ್ರಾಣ ಪತ್ರಕರ್ತರ (Journalists) ಸಮಯೋಚಿತ ಪ್ರವೇಶದಿಂದ ತಪ್ಪಿದ್ದು, ಈ ವಿಡಿಯೋ (Viral Video) ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ.

ಆಂಧ್ರಪ್ರದೇಶದ (Andhra Pradesh) ಭದ್ರಾಚಲಂನಲ್ಲಿ (Bhadrachalam) ಈ ಘಟನೆ ನಡೆದಿದ್ದು, ʼತೆಲಂಗಾಣ ಟುಡೇʼ (Telangana Today) ವರದಿಗಳ ಪ್ರಕಾರ – ವೃತ್ತಿಯಲ್ಲಿ ಪತ್ರಕರ್ತರಾಗಿರುವ ಮಹಮ್ಮದ್‌ ಅಬ್ದುಲ್‌ ಘನಿ ಹಾಗೂ ಶೇಖ್‌ ಝಾಕಿರ್‌ ಎಂಬವರು ವ್ಯಕ್ತಿಯೊಬ್ಬ ಸೇತುವೆಯ ಕಂಬಿಗಳ ಮೇಲೆ ಕುಳಿತಿರುವುದನ್ನು ನೋಡಿದ್ದಾರೆ. ಅವರು ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ʼಇಲ್ಲೇನೋ ನಡೀತಿದೆ..ʼ ಎಂದು ನೋಡಿ, ಆ ವ್ಯಕ್ತಿಯ ಬಳಿ, ʼನೀನ್ಯಾಕೆ ಇಲ್ಲಿ ಕುಳಿತಿದ್ದಿ..?ʼ ಎಂದು ಕೇಳಿದ್ದಾರೆ. ಅದಕ್ಕೆ ಆ ವ್ಯಕ್ತಿ, ʼತಾನು ಸಾಯಲು ಬಯಸುತ್ತಿರುವುದಾಗಿ..ʼ ಹೇಳಿದ್ದಾನೆ.

ಕೂಡಲೇ ಅಪಾಯದ ಸೂಚನೆಯನ್ನ ಅರಿತ ಇವರಿಬ್ಬರು ಆತನ ಬಳಿ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ಆ ಮೂಲಕ ಆತನ ಮನ ಒಲಿಸುವ ಪ್ರಯತ್ನನ್ನು ಮಾಡಿದ್ದಾರೆ. ಆದರೆ ಆ ವ್ಯಕ್ತಿ ಇವರ ಮಾತನ್ನು ಕೇಳಲು ಸಿದ್ಧನಿರಲಿಲ್ಲ, ಹಾಗೂ ತನ್ನ ಹತ್ತಿರಕ್ಕೆ ಬರದಂತೆ ಅವರಿಗೆ ಪದೇ ಪದೇ ಹೇಳುತ್ತಿರುವುದು ಮತ್ತು ಹಾಗೆ ಹತ್ತಿರ ಬಂದರೆ ತಾನು ನದಿಗೆ ಜಿಗಿಯುತ್ತೇನೆ ಎಂದು ಹೇಳುತ್ತಿರುವುದು ವೈರಲ್‌ ವಿಡಿಯೋದಲ್ಲಿ ದಾಖಲಾಗಿದೆ.

ಇಷ್ಟೆಲ್ಲಾ ನಡೆಯುತ್ತಿರುವ ಸಂದರ್ಭದಲ್ಲಿ ಅಬ್ದುಲ್‌ ಘನಿ ಅವರ ಸ್ನೇಹಿತರೊಬ್ಬರು ಸೇತುವೆಯ ಇನ್ನೊಂದು ಬದಿಯಿಂದ ಬರುತ್ತಿದ್ದವರು ಇದನ್ನು ಗಮನಿಸಿ ಆ ವ್ಯಕ್ತಿಯ ಸಮೀಪವೇ ತನ್ನ ಬೈಕನ್ನು ಮೆಲ್ಲನೆ ನಿಲ್ಲಿಸಿ, ಇವರಿಬ್ಬರು ಆತನ ಬಳಿ ಮಾತನಾಡುತ್ತಿರುವಂತೆ ಬೈಕಿನಿಂದ ಇಳಿದ ಆ ವ್ಯಕ್ತಿ ಸಡನ್ನಾಗಿ ಸೇತುವೆ ಕಂಬಿ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ಸೇತುವೆ ಮೇಲೆ ಎಳೆದು ಹಾಕುತ್ತಾರೆ. ಇಷ್ಟು ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Koratagere News: ಕೆರೆ ನೋಡಲು ಹೋಗಿ ಬೆಂಗಳೂರು ಮೂಲದ ತಂದೆ-ಮಗಳು ನೀರುಪಾಲು

ಅಲ್ಲಿಗೆ, ಗೋದಾವರಿ ನದಿಗೆ ಬಿದ್ದು ಸಾಯಲು ಹೊರಟಿದ್ದ ವ್ಯಕ್ತಿಯ ಜೀವ ಇಬ್ಬರು ಪತ್ರಕರ್ತರು ಮತ್ತು ಅವರ ಸ್ನೇಹಿತರಿಂದ ಉಳಿದಂತಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಭದ್ರಾಚಲಂ ಪಟ್ಟಣದ ಎಎಂಸಿ ಕಾಲನಿ ನಿವಾಸಿ ಆನಂದ್‌ ಎಂದು ಗುರುತಿಸಲಾಗಿದೆ. ಹಣಕಾಸು ಮತ್ತು ಕೌಟುಂಬಿಕ ಸಮಸ್ಯೆಗಳ ಕಾರಣ ಆತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಎಂಬ ವಿಚಾರ ಆ ಬಳಿಕ ತಿಳಿದುಬಂದಿದೆ.

ಬಳಿಕ ಪತ್ರಕರ್ತರು ಈ ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಹಾಗೂ ಆನಂದನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಮತ್ತು ಆತನ ಕುಟುಂಬಸ್ಥರು ಸ್ಥಳಕ್ಕಾಗಮಿಸಿದ್ದಾರೆ. ಬಳಿಕ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕುಟುಂಬಸ್ಥರ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ತೆಲಂಗಾಣ ಟುಡೇ ಜೊತೆ ಮಾತನಾಡಿದ ಅಬ್ದುಲ್‌ ಘನಿ ಅವರು, ತಾನು ಮತ್ತು ತನ್ನ ಗೆಳೆಯ ಆ ವ್ಯಕ್ತಿಯ ಜೊತೆ ಸಂಭಾಷಣೆ ನಡೆಸುತ್ತಿದ್ದರೂ ಆ ಸೇತುವೆ ಮೂಲಕ ಸಾಗುತ್ತಿದ್ದವರು ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮೂರು ಜನರ ಸಕಾಲಿಕ ಧೈರ್ಯದ ನಿರ್ಧಾರದಿಂದ ಗೋದಾವರಿ ನದಿ ಪಾಲಾಗಬೇಕಿದ್ದ ಜೀವವೊಂದು ಉಳಿದಂತಾಗಿದೆ.