ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
‘ಮಾತು ಬೆಳ್ಳಿ, ಮೌನ ಬಂಗಾರ’ ಎನ್ನುವುದು ಸತ್ಯ. ರಾಜಕೀಯದಲ್ಲಿ ಮಾತು ಎಷ್ಟು ಮುಖ್ಯವೋ, ಮೌನವೂ ಅಷ್ಟೇ ಮುಖ್ಯವಾಗುತ್ತದೆ. ಕೇವಲ ಮಾತುಗಳ ಮೂಲಕವೇ ಚುನಾವಣೆಗಳನ್ನು ಗೆದ್ದಿರುವ ಅನೇಕರಿದ್ದಾರೆ.
ಈ ಮಾತುಗಳ ಮೂಲಕ ಇಂದಿನ ಚುನಾವಣೆಯನ್ನು ಗೆಲ್ಲಲು ಸಾಧ್ಯವೋ ಇಲ್ಲವೋ ಗೊತ್ತಿಲ್ಲ, ಆದರೆ ಅದೇ ಮಾತುಗಳಿಂದ ಚುನಾವಣೆಗಳನ್ನು ಸೋಲಬಹುದು ಎನ್ನುವುದಕ್ಕಂತೂ ಹಲವು ಉದಾಹರಣೆಗಳಿವೆ. ಈ ‘ರಾಂಗ್ ಟಾಕ್’ ಮಾಡುವವರು ಯಾವುದೋ ಒಂದು ಪಕ್ಷಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಪ್ರತಿ ಚುನಾವಣೆಯ ಸಮಯದಲ್ಲಿ ಅತಿರೇಕದ ಮಾತುಗಳಿಂದ ಪಕ್ಷಕ್ಕೆ ಸಮಸ್ಯೆ ತಂದೊಡ್ಡುವವರ ಪಟ್ಟಿ ದೊಡ್ಡಮಟ್ಟದಲ್ಲಿದೆ. ಚುನಾವಣಾ ಸಮಯದಲ್ಲಿ ನಾಯಕರು ಬಂದು ಭಾಷಣ ಮಾಡಿದರೆ ಸಾಕು ಎನ್ನುವ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳಿರುತ್ತಾರೆ. ಆದರೆ ಕೆಲ ನಾಯಕರ ವಿಷಯದಲ್ಲಿ, ‘ಇವರು ಮೌನವಾಗಿದ್ದರೆ ಸಾಕು’ ಎನ್ನುವ ಮನಸ್ಥಿತಿ ಈ ಅಭ್ಯರ್ಥಿಗಳಲ್ಲಿ ಕೆನೆಗಟ್ಟಿರುತ್ತದೆ. ಇನ್ನು ಕೆಲವೊಮ್ಮೆ, ಕೆಲ ನಾಯಕರನ್ನು ಬಿಡಲಾಗದೇ, ಪ್ರಚಾರಕ್ಕೆ ಕರೆತಂದರೆ ಆಗಬಹುದಾದ ಡ್ಯಾಮೇಜ್ ಅನ್ನು ಎದುರಿಸಲು ಆಗದ ಸ್ಥಿತಿಯಲ್ಲಿ ಅಭ್ಯರ್ಥಿಗಳಿರುತ್ತಾರೆ. ಅಂಥ ಇಕ್ಕಟ್ಟಿನ ಪರಿಸ್ಥಿತಿ ಚನ್ನಪಟ್ಟಣದಲ್ಲಿಯೂ ನಿರ್ಮಾಣವಾಗಿತ್ತು ಎನ್ನುವುದು ರಾಜಕೀಯ ಪಡಸಾಲೆಯ ಈಗಿನ ‘ಹಾಟ್-ಟಾಕ್’ ಆಗಿದೆ ಎಂದರೆ ತಪ್ಪಾಗುವುದಿಲ್ಲ.
ವಕ್ಫ್ ವಿವಾದ ಭುಗಿಲೇಳಲು ಕಾರಣರಾಗಿದ್ದ ಸಚಿವ ಜಮೀರ್ ಆಡಿದ ಮಾತನ್ನು ಪಕ್ಷವು ಸಮರ್ಥಿಸಿಕೊಳ್ಳುವ ಮೊದಲೇ, ಚನ್ನಪಟ್ಟಣ ಚುನಾವಣಾ ರ‍್ಯಾಲಿಯ ವೇಳೆ ಕುಮಾರಸ್ವಾಮಿ ಅವರ ಬಗ್ಗೆ ‘ಫ್ರೆಂಡ್ಲಿ ಟಾಕ್’ ಮಾಡಲು ಹೋಗಿ ಜಮೀರ್ ಎಡವಟ್ಟು ಮಾಡಿಕೊಂಡರು. ಬಳಿಕ
ಇದನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್‌ನ ಹಲವರು ಶತಪ್ರಯತ್ನ ಪಟ್ಟರೂ ಸಾಧ್ಯವಾಗದೇ ಇದೀಗ ‘ಜಮೀರ್ ಮಾಡಿದ್ದು ತಪ್ಪು’ ಎನ್ನುವ ಷರಾ ಬರೆಯುತ್ತಿದ್ದಾರೆ. ಆದರೆ ಈ ಎಲ್ಲ ಆರೋಪ-ಪ್ರತ್ಯಾರೋಪಗಳನ್ನು ಮೀರಿ, ಜಮೀರ್ ಹೇಳಿಕೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ
ಬೀರುವುದೇ ಎನ್ನುವುದು ಕಾಂಗ್ರೆಸ್ ಪಾಳಯದಲ್ಲಿ ಈಗಿರುವ ಆತಂಕ!
ಅಷ್ಟಕ್ಕೂ ಸಚಿವ ಜಮೀರ್ ಚನ್ನಪಟ್ಟಣದಲ್ಲಿ ಮಾಡಿದ ಎಡವಟ್ಟು ಏನು ಎನ್ನುವುದನ್ನು ಗಮನಿಸಬೇಕಿದೆ. ಅಲ್ಲಿನ ರ‍್ಯಾಲಿಯೊಂದರಲ್ಲಿ ಜಮೀರ್ ಮಾತನಾಡುವಾಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಕರಿಯ’ ಎಂದು ಕರೆದರು. ಜತೆಗೆ ದೇವೇಗೌಡರ ಕುಟುಂಬವನ್ನೇ
ಖರೀದಿಸುವೆ ಎನ್ನುವ ಹೇಳಿಕೆ ನೀಡಿದರು. ಕುಮಾರಸ್ವಾಮಿ ಕುರಿತು ಹೀಗೆ ಆಡಿದ ಮಾತಿಗೆ ‘ಮೊದಲಿನಿಂದಲೂ ನಾನು ಅವರನ್ನು ಹಾಗೇ ಕರೆಯುತ್ತಿದ್ದೆ’ ಎನ್ನುವ ಸಮರ್ಥನೆ ನೀಡಿದರೂ, ಆ ವೇಳೆಗಾಗಲೇ ಆಗಬೇಕಾದ ಡ್ಯಾಮೇಜ್ ಆಗಿ ಹೋಗಿತ್ತು. ಇನ್ನು ದೇವೇಗೌಡರ ಕುಟುಂಬ ವನ್ನು ಖರೀದಿಸಬಹುದು ಎನ್ನುವ ಹೇಳಿಕೆಯಿಂದ ಒಕ್ಕಲಿಗ ಸಮುದಾಯದ ‘ಅಸ್ಮಿತೆ’ಗೆ ಹೊಡೆತ ಬಿದ್ದಿದ್ದರಿಂದ ಚುನಾವಣೆ ಮೇಲೂ
ಹೊಡೆತ ಬಿದ್ದಿದೆ ಎನ್ನುವ ಆತಂಕದಲ್ಲಿ ಅನೇಕರಿದ್ದಾರೆ.
ಉಪಚುನಾವಣೆ ಘೋಷಣೆಯಾದ ಕ್ಷಣದಿಂದ ಚನ್ನಪಟ್ಟಣ ಕಣವು ತೀವ್ರ ಪೈಪೋಟಿಯಿಂದ ಕೂಡಿತ್ತು. ಯೋಗೇಶ್ವರ ಅವರು ಕಾಂಗ್ರೆಸ್‌ಗೆ ಸೇರಿ ಸ್ಪಽಸುತ್ತಿದ್ದಂತೆ ಕಣ ಮತ್ತಷ್ಟು ರಂಗೇರಿತ್ತು. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಯೋಗೇಶ್ವರ ಇಬ್ಬರಿಗೂ ಈ ಚುನಾವಣೆಯ ಫಲಿತಾಂಶ ನಿರ್ಣಾಯಕವಾಗಿತ್ತು ಹಾಗೂ ಸೋತವರಿಗೆ ‘ಡೆಡ್ ಎಂಡ್’ ಎನ್ನುವ ಮಾತಿತ್ತು. ಕಣವು ಆರಂಭದಲ್ಲಿ ಯೋಗೇಶ್ವರ ಪರ ವಾಗಿದ್ದಂತೆ ಕಂಡರೂ, ಪ್ರಚಾರಕ್ಕೆ ದೇವೇಗೌಡರು ಎಂಟ್ರಿ ಕೊಡುತ್ತಿದ್ದಂತೆ ‘ಫಿಫ್ಟಿ-ಫಿಫ್ಟಿ ಚಾನ್ಸ್’ ಎನ್ನುವ ಸ್ಥಿತಿ ನಿರ್ಮಾಣ ವಾಗಿತ್ತು. ಈ ಎಲ್ಲದರ ನಡುವೆ ಜಮೀರ್ ಅವರ ‘ಕರಿಯ’ ಹೇಳಿಕೆ ಬಿಜೆಪಿ ನಾಯಕರಿಗೆ ಬ್ರಹ್ಮಾಸ್ತ್ರದ ರೀತಿ ಸಿಕ್ಕಿತ್ತು.
ಮತದಾನಕ್ಕೂ ಮೊದಲ ಮೂರು ದಿನ ಇಡೀ ಚುನಾವಣಾ ಪ್ರಚಾರವು ಈ ‘ಕರಿಯ’ ಹೇಳಿಕೆಯ ಸುತ್ತಮುತ್ತಲೇ ನಡೆದಿದ್ದರಿಂದ ಈ ಹೇಳಿಕೆಯ ‘ಆಫ್ಟರ್ ಎಫೆಕ್ಟ್’ ಸ್ಪಷ್ಟವಾಯಿತು. ಹಾಗೆ ನೋಡಿದರೆ, ಜಮೀರ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಈ ರೀತಿಯ ಹೇಳಿಕೆಯಿಂದ ಅವರು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಉದಾಹರಣೆಗಳಿವೆ. ಹಾಗೆಂದು ಚನ್ನ
ಪಟ್ಟಣ ಉಪಚುನಾವಣೆಯಿಂದ ಅವರನ್ನು ದೂರವಿಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇರಲಿಲ್ಲ. ಏಕೆಂದರೆ ಸದ್ಯಕ್ಕೆ ಕಾಂಗ್ರೆಸ್ ಪಾಲಿಗೆ ಅಲ್ಪಸಂಖ್ಯಾತ ಸಮುದಾಯದ ಮಾಸ್ ನಾಯಕ ನಾಗಿ ಕಾಣಿಸುತ್ತಿರುವುದು ಜಮೀರ್ ಅಹ್ಮದ್ ಮಾತ್ರ. ಆದ್ದರಿಂದ ಚನ್ನಪಟ್ಟಣದಲ್ಲಿರುವ ಮುಸ್ಲಿಂ ಮತಗಳನ್ನು
ಒಗ್ಗೂಡಿಸಲು ಜಮೀರ್ ಅವರನ್ನು ಮತದಾನಕ್ಕೆ ಕೆಲ ದಿನಗಳ ಮೊದಲು ಕರೆದುಕೊಂಡು ಹೋಗಬೇಕಾಯಿತು,. ಜಮೀರ್ ಮಾತ್ರವಲ್ಲದೆ ಕಾಂಗ್ರೆಸ್‌ನ ಅನೇಕ ನಾಯಕರು ಈ ಹಿಂದೆ ಬಿಜೆಪಿ ನಾಯಕರ ವಿರುದ್ಧ ಮಾಡಿದ ವಿವಿಧ ಆರೋಪಕ್ಕೆ ಬೆಲೆ ತೆತ್ತಿರುವ ಉದಾಹರಣೆಗಳಿವೆ. ೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಮಣಿಶಂಕರ್ ಅಯ್ಯರ್, ರಾಹುಲ್ ಗಾಂಧಿ ಅವರಿಂದಾಗಿಯೇ ದೇಶದ ಹಲವು ಭಾಗಗಳಲ್ಲಿ ಬಿಜೆಪಿ ಪರವಾದ ಅಲೆಯೇಳು ವಂತಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಮತ್ತು ಸುಮಲತಾರ ಗೆಲುವಿಗೆ ಕಾರಣವಾಗಿದ್ದು ಸಹ, ಆ ಸಮಯ ದಲ್ಲಿ ಶಿವರಾಮೇಗೌಡ, ಎಚ್.ಡಿ.ರೇವಣ್ಣ ಅವರು ಸುಮಲತಾ ಅವರ ಬಗ್ಗೆ ಆಡಿದ ಮಾತುಗಳು. ಈ ಎಲ್ಲ ಗೊತ್ತಿದ್ದರೂ, ಪ್ರತಿ ಚುನಾವಣೆಯಲ್ಲಿ ಈ ರೀತಿಯ ವಿವಾದಾತ್ಮಕ ಹೇಳಿಕೆಗಳ ಮೂಲಕ, ‘ಎದುರಾಳಿ’ಗೆ ಸಹಾಯ ಮಾಡುವ ಕಾರ್ಯವನ್ನು ಮಾತ್ರ ನಾಯಕರು ಬಿಟ್ಟಿಲ್ಲ. ಹಾಗೆ ನೋಡಿದರೆ, ಜಮೀರ್ ತಮ್ಮ ಹೇಳಿಕೆಯನ್ನು ಚುನಾವಣೆಯಲ್ಲದ ಸಮಯದಲ್ಲಿ, ವಕ್ ಗದ್ದಲ ಇಲ್ಲದ ಕಾಲಘಟ್ಟದಲ್ಲಿ ನೀಡಿದ್ದರೆ ಈ ಪ್ರಮಾಣದಲ್ಲಿ ಗಲಾಟೆಯಾಗುತ್ತಿರಲಿಲ್ಲ. ಆದರೆ ವಕ್ ಕಾವು ಜೋರಿರುವಾಗ ಹಾಗೂ ಎನ್‌ಡಿಎ ಅಭ್ಯರ್ಥಿಯು ಕಾಂಗ್ರೆಸ್ ವಿರುದ್ಧ ಅಸ್ತ್ರದ ಹುಡುಕಾಟದಲ್ಲಿರುವಾಗ ಈ ರೀತಿಯ ಹೇಳಿಕೆ ನೀಡಿದ್ದು, ಅದರಲ್ಲಿಯೂ ವ್ಯಕ್ತಿಯೊಬ್ಬರ ಮೈಬಣ್ಣದ ಬಗ್ಗೆ ಮಾತನಾಡಿದ್ದು, ಮತದಾರರ ವಿರೋಧಕ್ಕೆ ಕಾರಣವಾಯಿತು. ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ಹಲವು ಬಾರಿ ನೀಡಿದ್ದರೂ, ಈ ಬಾರಿ ಕಾಂಗ್ರೆಸ್ ನಾಯಕರು ಜಮೀರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕಾರಣ ಕ್ಕಾಗಿಯೇ ಮುಸ್ಲಿಂ ನಾಯಕರು ಜಮೀರ್ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಪದೇಪದೆ ಈ ರೀತಿಯ ಹೇಳಿಕೆ ನೀಡುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ‘ಬಿಸಿ ತುಪ್ಪವಾಗಿ’ ಪರಿಣಮಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡುವ ನಾಯಕರು ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗದೇ, ಎಲ್ಲ ಪಕ್ಷಗಳಲ್ಲಿಯೂ ಇದ್ದಾರೆ. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು, ಈ ಹಿಂದೆ ಬಿಜೆಪಿಯಲ್ಲಿದ್ದ ಕೆ.ಎಸ್. ಈಶ್ವರಪ್ಪರಂಥ ನಾಯಕರು ‘ಹಿಂದುತ್ವ’ದ ಬಗ್ಗೆ ಮಾತ ನಾಡುವ ನೆಪದಲ್ಲಿ ಹೇಳಿಕೆಗಳ ಮೂಲಕ ಬಿಜೆಪಿಗೆ ತಿರುಗು ಬಾಣವಾಗುವಂತೆ ಮಾಡಿದ್ದಾರೆ. ಯಾವುದೇ ಪಕ್ಷದ ನಾಯಕರು ನೀಡುವ ಹೇಳಿಕೆಗಳು ಎಷ್ಟು ಜನರ ಮೇಲೆ ಭಾವನಾತ್ಮಕ ಪ್ರಭಾವ ಬೀರುತ್ತವೆ ಎನ್ನುವುದರ ಆಧಾರದ ಮೇಲೆ ಅದರ ಪರಿಣಾಮ ತಿಳಿಯುತ್ತದೆ. ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದರೂ, ಅದನ್ನು ಸಮರ್ಥಿಸಿ ಕೊಳ್ಳುವ/ಜೀರ್ಣಿಸಿಕೊಳ್ಳುವ ಶಕ್ತಿ ಅವರಿಗಿತ್ತು. ಆದರೆ ಕೆಲ ನಾಯಕರಿಗೆ ತಾವಾಡಿದ ಮಾತುಗಳನ್ನು ಅರಗಿಸಿಕೊಳ್ಳಲು ಆಗದಿದ್ದಾಗ ಈ ರೀತಿಯ ವಿವಾದಗಳು ಮೈಸುತ್ತಿಕೊಳ್ಳುತ್ತವೆ. ಮೊದಲೇ ಹೇಳಿದಂತೆ, ಜಮೀರ್ ಅಹ್ಮದ್‌ರಂಥ ನಾಯಕರು ಎಲ್ಲ ಪಕ್ಷದಲ್ಲಿಯೂ ಇದ್ದಾರೆ. ಅನೇಕ ಸಮಯದಲ್ಲಿ ಅವರ ಮಾತು ಒಂದಿಷ್ಟು ಜನರನ್ನು ಸೆಳೆಯಲು ಸಹಾಯ ಮಾಡಿದರೂ, ಬಹುತೇಕ ಸಮಯದಲ್ಲಿ ಪಕ್ಷಕ್ಕೆ ಪ್ರತಿಕೂಲ
ವಾತಾವರಣವನ್ನೇ ನಿರ್ಮಿಸಿರುತ್ತದೆ. ಸದ್ಯ ಜಮೀರ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಬಹುತೇಕ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಪಕ್ಷದ ವೇದಿಕೆಯಲ್ಲೇ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯದ ಮಾಸ್ ಲೀಡರ್ ಆಗಬೇಕೆಂಬ ಜಮೀರ್ ಆಸೆಗೆ ಈ ರೀತಿಯ ಹೇಳಿಕೆಗಳೇ ‘ಅಡ್ಡಿ’ಯಾಗದಿರಲಿ ಎನ್ನುವುದು ಅವರ ಆಪ್ತರ
ಆಶಯವಾಗಿದೆ.
ಈ ಎಲ್ಲವನ್ನೂ ಮೀರಿ ನಾಲಿಗೆ ಹರಿಬಿಡುವ ನಾಯಕರು ಕಾಂಗ್ರೆಸ್ ಅಥವಾ ಬಿಜೆಪಿಗೆ ಹೊಸತೇನಲ್ಲ. ಈ ನಾಯಕ ರನ್ನು ಎಷ್ಟು ಹದ್ದುಬಸ್ತಿನಲ್ಲಿಡಲಾಗುತ್ತದೆ ಎನ್ನುವುದರ ಮೇಲೆ ರಾಜಕೀಯದ ಲಾಭ-ನಷ್ಟಗಳು ನಿಂತಿರುತ್ತವೆ. ಕೊನೆಯದಾಗಿ ಜಮೀರ್ ಅವರ ‘ಕರಿಯ’ ಹೇಳಿಕೆ ಯಿಂದಲೇ ನಿಖಿಲ್ ಅದೃಷ್ಟ ಖುಲಾಯಿಸುವುದೋ ಅಥವಾ ಈ ಹೇಳಿಕೆಯನ್ನೂ ಮೀರಿ ‘ಸೈನಿಕ’ ಯೋಗೇಶ್ವರ್ ವಿಜಯದ ಗಡಿದಾಟುವರೇ? ಎಂಬ ಪ್ರಶ್ನೆಗೆ ಫಲಿತಾಂಶದ ದಿನ ಉತ್ತರ ಸಿಗಲಿದೆ.
ಇದನ್ನೂ ಓದಿ: Ranjith H Ashwath ok