ಸಂಗತ
ಡಾ.ವಿಜಯ್ ದರಡಾ
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಮತದಾರರ ಮನ ಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿದ್ದಾರೆ. ಬೇಕಾದಷ್ಟು ಭರವಸೆಗಳನ್ನೂ, ವಚನಗಳನ್ನೂ ನೀಡಿದ್ದಾರೆ. ಜನರೂ ಅದನ್ನು ಕೇಳಿದ್ದಾರೆ. ಅಭ್ಯರ್ಥಿಗಳ ನಡೆ-ನುಡಿಯನ್ನು ಗಮನಿಸಿದ್ದಾರೆ. ಅವರು ನೀಡಿದ ಭರವಸೆಗಳ ತೂಕವನ್ನು ಅಳೆದು ನೋಡಿದ್ದಾರೆ. ಯಾವುದು
ಕಾರ್ಯಸಾಧು, ಯಾವುದು ಆಮಿಷ, ಯಾವುದು ಅಸಾಧ್ಯಬುದನ್ನೆಲ್ಲ ಮತದಾರರು ಮನಸ್ಸಿನಲ್ಲೇ ಲೆಕ್ಕ ಹಾಕಿದ್ದಾರೆ.
ಈಗ ತೀರ್ಪು ನೀಡುವ ಸಮಯ. ಮತದಾರರು ಮತ ಚಲಾಯಿಸುವುದಕ್ಕಿಂತ ಮೊದಲು ತಮ್ಮ ಅಭ್ಯರ್ಥಿಯನ್ನು ಬಹಳ ಎಚ್ಚರಿಕೆಯಿಂದ ನಿರ್ಧರಿಸಬೇಕು. ತಾವು ಆಯ್ಕೆ ಮಾಡುವ ಅಭ್ಯರ್ಥಿ ಎಷ್ಟು ಸಮರ್ಥ? ಅವನ ವಿದ್ಯಾರ್ಹತೆ ಏನು? ಹಿಂದೆ ಸಾರ್ವಜನಿಕ ಜೀವನದಲ್ಲಿ ಅವನು ನಡೆದುಕೊಂಡ ರೀತಿ ಹೇಗಿದೆ? ನಮ್ಮ ಪ್ರದೇಶದ ಅಗತ್ಯಗಳ ಬಗ್ಗೆ ಅವನಿಗೆ ಎಷ್ಟು ಮಾಹಿತಿಯಿದೆ? ಯಾವುದೇ ಚುನಾವಣೆಯಲ್ಲಿ ಮತ
ದಾನ ಮಾಡುವುದಕ್ಕಿಂತ ಮೊದಲು ಜನರು ಈ ಸಂಗತಿಗಳ ಬಗ್ಗೆ ಒಮ್ಮೆ ಯೋಚಿಸಬೇಕು. ಇವು ಮೂಲಭೂತ ಸಂಗತಿಗಳು. ಇವುಗಳ ಜತೆಗೆ ಮತದಾರರಿಗೆ ತಮ್ಮದೇ ಆದ ಆದ್ಯತೆಗಳು ಬೇರೆ ಇರಬಹುದು.
ಅವುಗಳನ್ನೆಲ್ಲ ಸರಿಯಾಗಿ ವಿಮರ್ಶಿಸಿದ ಮೇಲೇ ಯಾರಿಗೆ ಮತ ನೀಡಬೇಕೆಂಬುದನ್ನು ನಿರ್ಧರಿಸಬೇಕು. ನೆನಪಿಡಿ, ನಿಮ್ಮ ಮತ ನಿಮ್ಮನ್ನಾಳುವ
ಸರಕಾರವನ್ನು ನಿರ್ಧರಿಸುತ್ತದೆ. ದೇಶದ ಅಥವಾ ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯ ನಿಮ್ಮ ಆಯ್ಕೆಯನ್ನು ಅವಲಂಬಿಸಿದೆ. ಹೀಗಾಗಿ ಮತದಾನ ಮಾಡಲು ಯಾವುದೇ ಕಾರಣಕ್ಕೂ ಮರೆಯಬಾರದು!
ನನಗೆ ಗೊತ್ತು, ಮುಂದೆ ಸಾಕಷ್ಟು ಸವಾಲುಗಳಿವೆ. ಮಹಾರಾಷ್ಟ್ರದಲ್ಲಿ ಚುನಾವಣೆ ಪ್ರಚಾರದ ವೇಳೆ ಜನರನ್ನು ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ದಾರಿತಪ್ಪಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳೂ ನಡೆದಿವೆ. ಹಾಗೆ ನೋಡಿದರೆ ಎಲ್ಲಾ ಚುನಾವಣೆಗಳಲ್ಲೂ ಇದು ನಡೆಯುತ್ತದೆ.
ಪತ್ರಿಕೆಗಳಲ್ಲೂ, ಟಿವಿ ಚಾನಲ್ಲುಗಳಲ್ಲೂ ಇಂತಿಂತಹ ಊರಿನಲ್ಲಿ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ಇಂತಿಂತಹ ಜಾತಿ, ಧರ್ಮ ಅಥವಾ ಭಾಷೆಯ ಜನರಿದ್ದಾರೆ ಎಂಬಂಥ ವಿಶ್ಲೇಷಣೆ ಗಳನ್ನು ನಾನೂ ಕೇಳಿದ್ದೇನೆ. ಸಹಜವಾಗಿಯೇ ಇದು ಜನರ ಮೇಲೆ ಪ್ರಭಾವ ಬೀರುತ್ತದೆ. ಕೆಲವರಾದರೂ ‘ಈ ಅಭ್ಯರ್ಥಿ ನಮ್ಮ ಜಾತಿಯವನು, ಹೀಗಾಗಿ ಇವನಿಗೇ ನಾನು ಮತ ಹಾಕಬೇಕು’ ಎಂದು ಯೋಚಿಸಬಹುದು. ಆದರೆ, ಜಾತಿ, ಧರ್ಮ, ಪಂಥವನ್ನು ನೋಡಿಕೊಂಡು ಮತದಾನ ಮಾಡು ವುದು ಸರಿಯಾದ ಯೋಚನೆಯೇ? ನಿಮ್ಮ ಮತ ಯಾರಿಗೆ ಎಂಬುದನ್ನು ಹೀಗೆ ನಿರ್ಧರಿಸಬೇಕೇ? ಜಾತಿಯು ನಮ್ಮ ಸಾಂಪ್ರದಾಯಿಕ ಗುರುತಿನ ಒಂದು ಭಾಗವೇ ಆಗಿರಬಹುದು.
ಆದರೆ, ಅಭಿವೃದ್ಧಿ ಹೊಂದಿದ ಸಮೃದ್ಧ ರಾಜ್ಯ ಮತ್ತು ದೇಶವನ್ನು ಕಟ್ಟುವ ಗುರಿಯನ್ನು ಕಣ್ಣಮುಂದೆ ತಂದುಕೊಂಡಾಗ ನಾವೇಕೆ ಜಾತಿ ಮತ್ತು ಧರ್ಮದ ರಾಜಕೀಯವನ್ನು ಮೀರಿ ಯೋಚಿಸಬೇಕು ಎಂಬುದು ಅರ್ಥವಾಗುತ್ತದೆ. ಮಹಾರಾಷ್ಟ್ರದಲ್ಲಿ 96.3 ಮಿಲಿಯನ್ ಮತದಾರರಿದ್ದಾರೆ.
ಅದರಲ್ಲಿ 18.5 ಮಿಲಿಯನ್ ಮತದಾರರು ಯುವಕರು. ಕೊನೆಯ ಪಕ್ಷ ಈ ಯುವ ಮತದಾರರಾದರೂ ಜಾತಿ, ಧರ್ಮ, ಭಾಷೆಯ ರಾಜಕೀಯ ವನ್ನು ಮೀರಿ, ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ನನ್ನದು.
ಯುವ ಮತದಾರರ ವಿಷಯದಲ್ಲಿ ನಾನೊಂದು ಅಂಶವನ್ನು ಚನಾವಣಾ ಆಯೋಗದ ಗಮನಕ್ಕೆ ತರಬೇಕು. ಅನೇಕ ಯುವ ಹಾಗೂ ಪ್ರಜಾ ಪ್ರಭುತ್ವಪ್ರೇಮಿ ಮತದಾರರು ಬೇರೆ ಬೇರೆ ರಾಜ್ಯ ಅಥವಾ ನಗರಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಗಮನಿಸಿದ್ದೇನೆ. ಎಷ್ಟೊಂದು ಯುವಕರು ಸಾವಿರಾರು ರುಪಾಯಿ ಖರ್ಚು ಮಾಡಿಕೊಂಡು ದೂರದ ಊರುಗಳಿಂದ ತಮ್ಮ ಊರಿಗೆ ಮತದಾನ ಮಾಡಲೆಂದೇ ಬಂದು ಹೋಗಿದ್ದಾರೆ.
ಅಂಥವರ ಸಂಖ್ಯೆ ಇನ್ನೂ ಹೆಚ್ಚಬೇಕು. ಬೇರೆ ಊರುಗಳಲ್ಲಿ ವಾಸಿಸುವ ಯುವ ಮತದಾರರಿಗೆ ಆನ್‌ಲೈನ್‌ನಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸಿದರೆ ಅದು ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇದೇನೂ ಅಸಾಧ್ಯ ಸಂಗತಿಯಲ್ಲ. ಇಂದು ಆನ್‌ಲೈನ್ ವೋಟಿಂಗ್ ಸಾಕಾರಗೊಳಿಸುವಷ್ಟು ನಮ್ಮ ತಾಂತ್ರಿಕತೆ ಬೆಳೆದಿದೆ. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದಿನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ನಮ್ಮ ದೇಶದಲ್ಲಿ ಈಗಾಗಲೇ ಅಂಚೆ ಮತದಾನ ಎಂಬೊಂದು ವ್ಯವಸ್ಥೆಯಿದೆಯಲ್ಲವೇ? ಎಷ್ಟು ಜನರಿಗೆ ಅದರ ಬಗ್ಗೆ ಗೊತ್ತಿದೆ? ಸಾಮಾನ್ಯವಾಗಿ ಸರಕಾರಿ ನೌಕರರು ಹಾಗೂ ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಸೈನಿಕರು ಮಾತ್ರ ಈ ವ್ಯವಸ್ಥೆಯನ್ನು ಬಳಸುತ್ತಾರೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅನೇಕ ಸರಕಾರಿ ನೌಕರರು ಹಾಗೂ ಭದ್ರತಾ ಸಿಬ್ಬಂದಿ ಮತದಾನವನ್ನೇ ಮಾಡುವುದಿಲ್ಲ. ಅವರ ಮತದಾನದ ಹಕ್ಕನ್ನು ಗೌರವಿಸಲು ನಮ್ಮ ವ್ಯವಸ್ಥೆ ಏನು ಕ್ರಮ ಕೈಗೊಂಡಿದೆ? ಇತ್ತೀಚೆಗೆ ಅಮೆರಿಕದಲ್ಲಿ ಸಾರ್ವ ತ್ರಿಕ ಚುನಾವಣೆ ನಡೆಯಿತು. ಅಲ್ಲಿ ಬಹಳ ದೊಡ್ಡ ಸಂಖ್ಯೆಯ ಮತದಾರರು ಅಂಚೆ ಮತದಾನದ ವ್ಯವಸ್ಥೆಯನ್ನು ಬಳಸಿ ಕೊಂಡರು. ಭಾರತದಲ್ಲೂ ಯಾವೊಬ್ಬ
ಮತದಾರನೂ ತನ್ನ ಹಕ್ಕಿನಿಂದ ಯಾವುದೇ ಕಾರಣಕ್ಕೂ ವಂಚಿತನಾಗದಂತೆ ನೋಡಿ ಕೊಳ್ಳುವ ದಿನ ಬರಲಿದೆ ಎಂಬ ಆಶಾಭಾವನೆ ನನ್ನಲ್ಲಿದೆ. ನಾವು ಬ್ಯಾಂಕ್ ವ್ಯವಹಾರವನ್ನು, ಷೇರು ಖರೀದಿ ಅಥವಾ ಮಾರಾಟವನ್ನು, ವಿಮಾನ, ಬಸ್, ರೈಲ್ವೆ ಟಿಕೆಟ್‌ಗಳ ಬುಕಿಂಗ್ ಅನ್ನು ಆನ್‌ಲೈನ್‌ನಲ್ಲಿ
ಮಾಡಬಹುದು ಅಂತಾದರೆ ಏಕೆ ಮತದಾನವನ್ನು ಆನ್ ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ? ಖಂಡಿತ ಸಾಧ್ಯವಿದೆ.
ಅದಕ್ಕೆ ಸರಕಾರ ಮನಸ್ಸು ಮಾಡಬೇಕಷ್ಟೆ. ಸ್ವಾತಂತ್ರಾ ನಂತರ ಭಾರತದ ಚುನಾವಣಾ ವ್ಯವಸ್ಥೆ ಸಾಕಷ್ಟು ಮೈಲಿಗಲ್ಲುಗಳನ್ನು ದಾಟಿ ಮುಂದೆ ಸಾಗಿ ಎತ್ತರದ ಸ್ಥಾನವನ್ನು ತಲುಪಿದೆ. ಕಾಲಕಾಲಕ್ಕೆ ಸಾಕಷ್ಟು ಸುಧಾರಣಾ ಕ್ರಮಗಳು ಜಾರಿಗೆ ಬಂದಿವೆ. ಹೀಗಾಗಿ ಬಹಳ ಕಡಿಮೆ ಅವಧಿಯಲ್ಲಿ ದೊಡ್ಡ ಸುಧಾರಣೆಯನ್ನು ನಮ್ಮ ಚುನಾವಣಾ ವ್ಯವಸ್ಥೆ ಕಂಡಿದೆ. 1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ ಸೇನ್ ಅವರು ಸಾಕಷ್ಟು ಸವಾಲು ಗಳನ್ನು ಎದುರಿಸಿದ್ದರು. ಆಗ ದೇಶದಲ್ಲಿ ಹೆಚ್ಚಿನ ಜನರು ಅನಕ್ಷರಸ್ಥರಾಗಿದ್ದರು. ಅನೇಕ ಹೆಂಗಸರನ್ನು ಅವರ ಹೆಸರಿನಿಂದ ಗುರುತಿಸುವ ಅಭ್ಯಾಸವೇ ಇರಲಿಲ್ಲ.
ಹೀಗಾಗಿ ಎಲ್ಲ ಮತದಾರರಿಗೂ ಮತದಾನದ ಅವಕಾಶ ಕಲ್ಪಿಸುವ ಕಾರ್ಯದಲ್ಲಿ ಚುನಾವಣಾ ಆಯೋಗ ಹೈರಾಣಾಗಿತ್ತು. ಆದರೂ ಸುಕುಮಾರ ಸೇನ್ ಅವರ ತಂಡದ ಪ್ರಯತ್ನ ಫಲ ನೀಡಿತ್ತು. ಸರಕಾರ ಕೂಡ ಚುನಾವಣಾ ಆಯೋಗಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು. ನಮ್ಮ ದೇಶದಲ್ಲಿ ಮೊಟ್ಟ ಮೊದಲ ಚುನಾವಣೆಯಿಂದಲೇ, 21 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಮತದಾನದ ಹಕ್ಕು ನೀಡಲಾಗಿದೆ. ಕೆಲವು ದೇಶಗಳಲ್ಲಿರು ವಂತೆ ನಮ್ಮ ದೇಶದಲ್ಲಿ ಮತದಾನದ ಹಕ್ಕು ನೀಡುವಾಗ ಜಾತಿ, ಲಿಂಗ, ಧರ್ಮ, ಬಡವ-ಬಲ್ಲಿದ ಹೀಗೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಹೀಗೆ ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡಿರುವುದೇ ಒಂದು ಕ್ರಾಂತಿಕಾರಿ ವ್ಯವಸ್ಥೆ. ನಿಮಗೆ ಇದು ಚೆನ್ನಾಗಿ ಅರ್ಥವಾಗಬೇಕು ಅಂದರೆ ಒಂದು ಉದಾಹರಣೆ ನೀಡಬೇಕು. ಅಮೆರಿಕ ತುಂಬಾ ಮುಂದುವರಿದ ದೇಶವಲ್ಲವೇ? ಆದರೆ ಅಲ್ಲಿ ಕರಿಯರು ಮತದಾನದ ಹಕ್ಕು ಪಡೆಯಲು ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ 100 ವರ್ಷ ಕಾಯಬೇಕಾಯಿತು. ಅಮೆರಿಕದ ಕೆಲ ರಾಜ್ಯಗಳಲ್ಲಿ ಹೆಂಗಸರು ಮತದಾನದ ಹಕ್ಕು ಪಡೆಯಲು 150 ವರ್ಷ ಕಾದಿದ್ದಾರೆ. ಸ್ವಿಜರ್‌ಲೆಂಡ್‌ನಂಥ ಶ್ರೀಮಂತ ದೇಶದಲ್ಲಿ ಮಹಿಳೆಯರು ಮತದಾನದ ಹಕ್ಕುಗಳನ್ನು ಪಡೆಯಲು ಶತಮಾನಗಳ ಕಾಲ ಹೋರಾಡಿದ್ದಾರೆ.
ಹೀಗಾಗಿ ಭಾರತವು ಸ್ವಾತಂತ್ರ ಪಡೆದಾಗ ಬಡ ಹಾಗೂ ಹಿಂದುಳಿದ ರಾಷ್ಟ್ರವಾಗಿದ್ದರೂ, ಜನರಿಗೆ ಹಕ್ಕುಗಳನ್ನು ನೀಡುವ ವಿಷಯದಲ್ಲಿ ಎಷ್ಟು ಉನ್ನತ ಮಟ್ಟದ ಚಿಂತನೆಯನ್ನು ಹೊಂದಿತ್ತು ಎಂಬುದನ್ನು ಗಮನಿಸಬೇಕು. ಭಾರತದ ಚುನಾವಣಾ ಆಯೋಗವು ಮತದಾನದ ವ್ಯವಸ್ಥೆಯನ್ನು ಅತ್ಯಂತ ಪವಿತ್ರ ವ್ಯವಸ್ಥೆ ಯೆಂಬಂತೆ ಪರಿಗಣಿಸುತ್ತದೆ. ಮೊದಲ ಚುನಾವಣೆಯಲ್ಲಿ ಅನಕ್ಷರತೆ ಎಲ್ಲೆಡೆ ದೊಡ್ಡ ಪ್ರಮಾಣ ದಲ್ಲಿ ಇದ್ದುದರಿಂದ ಮತದಾರರಿಗೆ ತಮ್ಮ ಆಯ್ಕೆಯ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿ ಯನ್ನು ಗುರುತಿಸಲು ಸುಲಭ ವಾಗಲಿ ಎಂದು ಚಿಹ್ನೆಗಳನ್ನು ನೀಡಲಾಗಿತ್ತು.
ಅದು ಇಂದಿಗೂ ಮುಂದುವರಿದಿದೆ. ಚುನಾವಣೆಯಲ್ಲಿ ಮೋಸ ಹಾಗೂ ವಂಚನೆಯನ್ನು ತಡೆಯಲು ಅಳಿಸಲಾ ಗದ ಶಾಯಿಯನ್ನು
ಕೈಬೆರಳಿಗೆ ಹಚ್ಚುವ ವ್ಯವಸ್ಥೆ ತರಲಾಗಿದೆ. ಹಲವು ದಿನಗಳ ವರೆಗೆ ಅದನ್ನು ಅಳಿಸಲು ಸಾಧ್ಯ ವಿಲ್ಲ. ಆ ಶಾಯಿಯನ್ನು ಹೇಗೆ ತಯಾರಿಸುತ್ತಾರೆ ಎಂಬುದು ಇಂದಿಗೂ ರಹಸ್ಯ ವಾಗಿಯೇ ಇದೆ.
ಭಾರತದ ಚುನಾವಣಾ ವ್ಯವಸ್ಥೆಯನ್ನು ಗಟ್ಟಿಯಾಗಿ ಕಟ್ಟಿ ಬೆಳೆಸಲು ಹಾಗೂ ಕಾಲಕಾಲಕ್ಕೆ ಅದರಲ್ಲಿ ಸುಧಾರಣೆ ತರಲು ಎಲ್ಲಾ ರಾಜಕೀಯ ಪಕ್ಷಗಳೂ ಸಾಕಷ್ಟು ಕೊಡುಗೆ ನೀಡಿವೆ. ಆರಂಭದಲ್ಲಿ ರಾಜಕೀಯ ಪಕ್ಷಗಳು ಸೈದ್ಧಾಂತಿಕ ಚರ್ಚೆಗೆ ಹೆಚ್ಚು ಒತ್ತು ನೀಡುತ್ತಿದ್ದವು. ವ್ಯಕ್ತಿಗೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ. ದುರದೃಷ್ಟವಶಾತ್ ಇಂದು ರಾಜಕೀಯದಲ್ಲಿ ಸೈದ್ಧಾಂತಿಕ ಬದ್ಧತೆ ಕಡಿಮೆಯಾಗಿದೆ. ರಾಜಕೀಯ ಪಕ್ಷಗಳು
ಚುನಾವಣೆಯನ್ನು ತಮ್ಮ ಎದುರಾಳಿಯನ್ನು ಹಣಿಯುವ ಅವಕಾಶ ಎಂಬಂತೆ ನೋಡುತ್ತಿವೆ. ಆದರೂ ಭಾರತದ ಮತ ದಾರರು ಸಾಕಷ್ಟು ಪ್ರೌಢರಾಗಿದ್ದಾರೆ. ರಾಜಕಾರಣಿಗಳ ಆಶಯವನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ.
ಯಾರಿಂದ ತಮಗೆ ಅನುಕೂಲವಾಗುತ್ತದೆ, ಯಾರಿಂದ ತಮ್ಮ ರಾಜ್ಯ ಅಭಿವೃದ್ಧಿಯಾಗುತ್ತದೆ, ಯಾರನ್ನು ಆರಿಸಿದರೆ ದೇಶಕ್ಕೆ ಒಳ್ಳೆಯ ದಾಗುತ್ತದೆ ಎಂಬುದನ್ನು ಅವರು ಅಳೆದು ತೂಗಿ ಮತದಾನ ಮಾಡುತ್ತಾರೆ. ಈಗ ಮಹಾರಾಷ್ಟ್ರದ ಮತದಾರರು ಮತ್ತೊಮ್ಮೆ ಬಹಳ ಪ್ರಮುಖವಾದ ಪರೀಕ್ಷೆಯ ಫಲಿತಾಂಶ ನೀಡಲು ಸಿದ್ಧರಾಗಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಮಹಾರಾಷ್ಟ್ರದ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲರೂ ಮನೆಯಿಂದ ಹೊರಬಂದು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಯಾಗುತ್ತದೆ. ಪ್ರಜಾಪ್ರಭುತ್ವದ ಈ ಸುಂದರ ಹಬ್ಬದಲ್ಲಿ ಎಲ್ಲರೂ ಸಂಭ್ರಮ ದಿಂದ ಪಾಲ್ಗೊಳ್ಳೋಣ.
(ಲೇಖಕರು ಹಿರಿಯ ಪತ್ರಿಕೋದ್ಯಮಿ)
ಇದನ್ನೂ ಓದಿ: dr vijay Darda