Friday, 22nd November 2024

Self Harming: ಕಾಲೇಜು ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗದ್ದಕ್ಕೆ ನೊಂದು ಪಿಯು ವಿದ್ಯಾರ್ಥಿ ಆತ್ಮಹತ್ಯೆ

Self Harming

ಬೆಂಗಳೂರು: ಗೆದ್ದಲಹಳ್ಳಿಯ (Bengaluru crime news) ಅಪಾರ್ಟ್‌ಮೆಂಟ್‌ವೊಂದರ ಏಳನೇ ಮಹಡಿಯಿಂದ ಜಿಗಿದು ಪಿಯು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಕಾಲೇಜಿನ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗದಿದ್ದುದರಿಂದ ಈತ ನೊಂದಿದ್ದ ಎಂದು ಗೊತ್ತಾಗಿದೆ.

ಗೆದ್ದಲಹಳ್ಳಿಯ ನಿವಾಸಿ ಆದೀವ್(16) ಮೃತಪಟ್ಟ ವಿದ್ಯಾರ್ಥಿ. ನಗರದ ಖಾಸಗಿ ಕಾಲೇಜಿನಲ್ಲಿ ಆದೀವ್‌ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿ ತಂದೆ ಸಾಫ್ಟ್‌ವೇರ್‌ ಎಂಜಿನಿಯರ್ ಹಾಗೂ ತಾಯಿ ಗೃಹಿಣಿ. 15 ವರ್ಷಗಳಿಂದ ಗೆದ್ದಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲಸಿದ್ದರು. ಕಾಲೇಜಿನಲ್ಲಿ ಇತ್ತೀಚೆಗೆ ಕ್ರಿಕೆಟ್‌ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಆದೀವ್‌ ತಂಡಕ್ಕೆ ಆಯ್ಕೆ ಆಗಿರಲಿಲ್ಲ ಎನ್ನಲಾಗಿದೆ.

ಇದರಿಂದ ಆದೀವ್‌ ನೊಂದುಕೊಂಡಿದ್ದ. ಬೇರೆ ಕಾಲೇಜಿಗೆ ಸೇರಿಸುವಂತೆ ಪೋಷಕರ ಬಳಿ ಮನವಿ ಮಾಡಿದ್ದ. ಮುಂದಿನ ವರ್ಷ ಬೇರೆ ಕಾಲೇಜಿಗೆ ಸೇರಿಸುವುದಾಗಿಯೂ ಪೋಷಕರು ಹೇಳಿ ಸಮಾಧಾನಪಡಿಸಿದ್ದರು. ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಮನೆಬಿಟ್ಟು ಹೋಗಿದ್ದ. ಸಂಜೆಯಾದರೂ ಮನೆಗೆ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪುತ್ರ ರಾತ್ರಿ ವೇಳೆ ಮನೆಗೆ ಬರಬಹುದು ಎಂದು ಭಾವಿಸಿ ಪೋಷಕರು ಮಲಗಿದ್ದರು. ಬಳಿಕ ಮಧ್ಯರಾತ್ರಿ 1.30ರ ಸುಮಾರಿಗೆ ಮನೆಯಲ್ಲಿ ಎಲ್ಲರೂ ನಿದ್ದೆಗೆ ಜಾರಿದ್ದರು. ಆ ಸಮಯದಲ್ಲಿ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಬ್ದ ಕೇಳಿ ಫ್ಲ್ಯಾಟ್‌ ನಿವಾಸಿಗಳು ಬಂದು ನೋಡಿದಾಗ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.