Tuesday, 19th November 2024

GSAT-20 Satellite: ಎಲಾನ್‌ ಮಸ್ಕ್‌ ಸ್ಪೇಸ್‌ ಎಕ್ಸ್‌ನಿಂದ ನಭಕ್ಕೆ ಚಿಮ್ಮಿದ ಇಸ್ರೋ ಉಪಗ್ರಹ

Elon musk

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಮಾಲೀಕತ್ವದ ಸ್ಪೇಸ್‌ಎಕ್ಸ್‌ (Space X) ಕಂಪನಿಯ ರಾಕೆಟ್‌ ಬಳಸಿ ಉಪಗ್ರಹವನ್ನು(GSAT-20 Satellite)ಉಡಾವಣೆ ಮಾಡಿದೆ. ಅಮೆರಿಕದ ಕೇಪ್ ಕೆನವೆರಲ್‌ ಉಡಾವಣಾ ಕೇಂದ್ರದಿಂದ ಸೋಮವಾರ ತಡರಾತ್ರಿ 12.01 ನಿಮಿಷಕ್ಕೆ ಈ ಉಪಗ್ರಹ ಉಡಾವಣೆಗೊಂಡಿದ್ದು, ಇಸ್ರೋದ ಸಂವಹನ ಉಪಗ್ರಹವನ್ನು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ (Space X Falcon 9 Rocket) ನಭಕ್ಕೆ ಕೊಂಡೊಯ್ದಿದೆ.

ಸುಮಾರು 60-70 ಮಿಲಿಯನ್ ಡಾಲರ್‌ ವೆಚ್ಚದ ಈ ಯೋಜನೆ ಇಸ್ರೋದ ಹೆಗ್ಗಳಿಕೆಗೆ ಮತ್ತೊಂದು ಗರಿ ತಂದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಭಿವೃದ್ಧಿಪಡಿಸಿದ ಈ ಉಪಗ್ರಹವು ಸರಿಸುಮಾರು 4,700 ಕಿಲೋ ಗ್ರಾಂಗಳಷ್ಟು ತೂಗುತ್ತದೆ. ಇದರಿಂದ ಭಾರತೀಯ ರಾಕೆಟ್‌ಗಳಿಗೆ ಸಾಗಿಸಲು ಅಸಾಧ್ಯವಾಗಿತ್ತು. ಭಾರತೀಯ ರಾಕೆಟ್‌ಗಳನ್ನು ಬಳಸಿ ಉಡಾವಣೆ ಮಾಡಲು ಸಾಧ್ಯವಾಗದ ಕಾರಣ, ಸ್ಪೇಸ್‌ಎಕ್ಸ್‌ನನ್ನು ಬಳಸಲಾಗಿದೆ.

ಗೋ ಫಾಲನ್, ಗೋ ಜಿಎಸ್ ಎಟಿ-20 ಘೋಷವಾಕ್ಯದೊಂದಿಗೆ ಫಾಲ್ಕನ್-9 ರಾಕೆಟ್ ಜಿಎಸ್ ಎಟಿ-20 ಎಂದೇ ಖ್ಯಾತಿ ಪಡೆದ ಜಿಎಸ್ ಎಟಿ ಎನ್-2 ನೌಕೆಯನ್ನು ಹೊತ್ತು ಬಾಹ್ಯಕಾಶಕ್ಕೆ ಚಿಮ್ಮಿದ್ದು, ಸುಮಾರು 34 ನಿಮಿಷಗಳ ಕಾಲ ಭೂಮಿಯ ಸುತ್ತ ಬಾಹ್ಯಕಾಶ ಹೊರವರ್ತುಲದಲ್ಲಿ ಸುತ್ತು ಹೊಡೆದಿದೆ.

ಇನ್ನು ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ಪ್ರತಿಕ್ರಿಯಿಸಿದ್ದು, GSAT N2 ಅಥವಾ GSAT 20 ಅನ್ನು ನಿಖರವಾದ ಕಕ್ಷೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಸ್ರೋದ ಆಯ್ಕೆ ಸ್ಪೇಸ್‌ ಎಕ್ಸ್‌ ಏಕೆ ?

ಈ ಮೊದಲು ರಷ್ಯಾದ ಏರಿಯನ್‌ಸ್ಪೇಸ್‌ ಅನ್ನು ಭಾರತ ಅವಲಂಬಿಸಿತ್ತು. ಆದರೆ ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧದ ಕಾರಣದಿಂದ ಏರಿಯನ್‌ಸ್ಪೇಸ್‌ ಬಳಕೆ ಸಾಧ್ಯವಾಗಿಲ್ಲ. ಚೀನಾ ಕೂಡ ಉಪಗ್ರಹ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಭಾರತಕ್ಕೆ ಅನುಮತಿ ನೀಡುವುದಿಲ್ಲ. ಪ್ರಸ್ತುತ ಯಾವುದೇ ಆಯ್ಕೆ ಇಲ್ಲದೆ ಸ್ಪೇಸ್‌ ಎಕ್ಸ್‌ನ್ನು ಬಳಸಿಕೊಂಡಿದೆ. ಉಡಾವಣೆಯನ್ನು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮೂಲಕ ನಡೆಸಲಾಗಿದೆ. ಉಡಾವಣೆಗಾಗಿ NSIL ಸ್ಪೇಸ್‌ಎಕ್ಸ್‌ಗೆ ಸರಿಸುಮಾರು 500 ಕೋಟಿ ರೂ. ಪಾವತಿಸಿದೆ ಎಂದು ಹೇಳಲಾಗಿದೆ.

ʼʼಸ್ಪೇಸ್‌ಎಕ್ಸ್‌ನೊಂದಿಗೆ ಚೊಚ್ಚಲ ಉಡಾವಣೆಯಲ್ಲಿ ನಾವು ಉತ್ತಮ ಒಪ್ಪಂದವನ್ನು ಪಡೆದುಕೊಂಡಿದ್ದೇವೆʼʼ ಎಂದು ಇಸ್ರೋದ ಬೆಂಗಳೂರು ಮೂಲದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ಈ ಹಿಂದೆ ಹೇಳಿದ್ದರು.

ಇಂಟರ್ನೆಟ್‌ ಸೇವೆ ಸುಧಾರಣೆ

ದೂರದ ಪ್ರದೇಶಗಳಿಗೆ ಇಂಟರ್‌ನೆಟ್‌ ಸಂಪರ್ಕ ಸೇರಿದಂತೆ ಭಾರತದಾದ್ಯಂತ ಈ ಉಪಗ್ರಹ ಪ್ರಮುಖ ಸೇವೆಗಳನ್ನು ಒದಗಿಸುತ್ತದೆ. ಈ ಬಗ್ಗೆ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಡಾ. ಎಂ ಶಂಕರನ್ ಮಾತನಾಡಿ, “ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಉಪಗ್ರಹವು ಭಾರತದೊಳಗಿನ ವಿಮಾನದಲ್ಲಿನ ಇಂಟರ್‌ನೆಟ್‌ ಸಂಪರ್ಕದಲ್ಲಿ ಗಮನಾರ್ಹ ಸುಧಾರಣೆಯನ್ನು ತರಲಿದೆʼʼ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಭಾರತದ ವಾಯುಪ್ರದೇಶವನ್ನು ಪ್ರವೇಶಿಸುವ ಅಂತರರಾಷ್ಟ್ರೀಯ ವಿಮಾನಗಳು ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಬೇಕಾಗಿತ್ತು. ಏಕೆಂದರೆ ಅಂತಹ ಸೇವೆಗಳಿಗೆ ಭಾರತದಲ್ಲಿ ಅನುಮತಿ ಇರಲಿಲ್ಲ. ಈ ಉಪಗ್ರಹ ಉಡಾವಣೆಯಿಂದ ಅದು ಸುಧಾರಣೆಗೊಳ್ಳುತ್ತದೆ.

ಈ ಸುದ್ದಿಯನ್ನೂ ಓದಿ: ಎಲಾನ್ ಮಸ್ಕ್ ಬರೀ ಶ್ರೀಮಂತನಷ್ಟೇ ಅಲ್ಲ