ಮಧ್ಯಪ್ರದೇಶ: ಮಧ್ಯಪ್ರದೇಶದ ಟಿಕಾಮ್ಗರ್ ಜಿಲ್ಲೆಯಲ್ಲಿ ಯುವಕನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೊದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿತ್ತು. ನಂತರ ಯುವಕನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆಗೆ ಜಗಳಕ್ಕಿಳಿದಾಗ ಕೋಪಗೊಂಡ ಪೊಲೀಸ್ ಅಧಿಕಾರಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕೋಪಗೊಂಡ ಯುವಕ ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#WATCH | Tikamgarh Youth Slaps Woman Police Officer In Retaliation After She Slaps Him First; Video Goes Viral#MadhyaPradesh #MPNews pic.twitter.com/5XtFP5hvGa
— Free Press Madhya Pradesh (@FreePressMP) November 18, 2024
ಮಾಹಿತಿಯ ಪ್ರಕಾರ, ಈ ಘಟನೆ ಬಡಗಾಂವ್ ದಸನ್ ಪೊಲೀಸ್ ಠಾಣೆ ವ್ಯಾಪ್ತಿಯ ದರಗ್ವಾನ್ ಗ್ರಾಮದಲ್ಲಿ ನಡೆದಿದೆ. 50 ವರ್ಷದ ರೈತ ಘುರ್ಕಾ ಲೋಧಿ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದ ಅವರ ಕುಟುಂಬಕ್ಕೆ ಈ ಸುದ್ದಿ ತಲುಪಿದ್ದು, ಇದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಇದನ್ನು ವಿರೋಧಿಸಿ ಗ್ರಾಮಸ್ಥರು ಖಾರ್ಗಾಪುರ-ಬಡಗಾಂವ್ ರಸ್ತೆ ತಡೆ ನಡೆಸಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಮಾಹಿತಿ ಪಡೆದ ನಂತರ, ಬಡಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಅನು ಮೇಘಾ ಗುಪ್ತಾ ದುಬೆ ಸ್ಥಳಕ್ಕೆ ಆಗಮಿಸಿ ರಸ್ತೆ ತಡೆಯನ್ನು ತೆರವುಗೊಳಿಸಿದ್ದಾರೆ.
ಇದರಿಂದ ಪರಿಸ್ಥಿತಿ ಉಲ್ಬಣಗೊಂಡು ವಾಗ್ವಾದಕ್ಕೆ ಕಾರಣವಾಗಿದೆ. ಆಗ ಮಧ್ಯ ಬಂದು ವಾದ ಮಾಡಿದ ಯುವಕನಿಗೆ ಗುಪ್ತಾ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಸಿಟಿಗೆದ್ದ ಯುವಕನೋರ್ವ ಆಕೆಯ ಕೆನ್ನೆಗೆ ಬಾರಿಸಿದ್ದಾನೆ. ಈ ಘಟನೆಯು ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿತು, ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಈ ವಾಗ್ವಾದವನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಪೊಲೀಸರು ವಿಳಂಬ ಮಾಡಿದ್ದರಿಂದ ಗಾಯಗೊಂಡ ರೈತನಿಗೆ ಸಕಾಲದಲ್ಲಿ ವೈದ್ಯಕೀಯ ಸಹಾಯ ಸಿಗದೆ ಆತ ಸಾವನಪ್ಪಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ನಿರ್ಲಕ್ಷ್ಯವು ಅವರ ಕೋಪವನ್ನು ಮತ್ತಷ್ಟು ಹೆಚ್ಚಿಸಿತ್ತು.
ಇದನ್ನೂ ಓದಿ:ಹೊಂಚು ಹಾಕಿ ಸಾಕು ನಾಯಿ ಮೇಲೆ ಚಿರತೆ ದಾಳಿ; ಈ ಶಾಕಿಂಗ್ ವಿಡಿಯೊ ಇಲ್ಲಿದೆ
ವೈರಲ್ ವಿಡಿಯೊದಲ್ಲಿ ಅಧಿಕಾರಿ ಮತ್ತು ಯುವಕನ ನಡುವಿನ ವಾಗ್ವಾದ ಮತ್ತು ಕಪಾಳಮೋಕ್ಷದ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಈ ಘಟನೆಯು ಪೊಲೀಸ್ ಇಲಾಖೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.