Thursday, 21st November 2024

Winter Season Care: ಮನೆಯೊಳಗೆ ಇರಲಿ ಗಾಳಿ ಶುದ್ಧೀಕರಿಸುವ ಸಸ್ಯಗಳು

Winter Season Care

ಚಳಿಗಾಲದ (Winter Season Care) ಸಿದ್ಧತೆಯಲ್ಲಿ ತೊಡಗಿದೆ ಹವಾಮಾನ. ಬೆಳಗಿನ ಹೊತ್ತು ತಿಳಿ ಮಂಜು, ಹನಿ ಮಂಜುಗಳೆಲ್ಲ ಪ್ರಾರಂಭವಾಗಿದ್ದು, ಆಗೀಗ ಬೀಸುವ ಚಳಿಗಾಳಿ ಮೈ ನವಿರೇಳಿಸುತ್ತದೆ. ಚಳಿ ಜೋರಾಗುತ್ತಿದ್ದಂತೆ ಶುಷ್ಕ ವಾತಾವರಣ ಕಾಲಿಟ್ಟು, ಗಾಳಿಯ ಗುಣಮಟ್ಟ (Air quality) ಕುಸಿಯುವ ಸಾಧ್ಯತೆಯಿದೆ. ಹಾಗೆನ್ನುತ್ತಿದ್ದಂತೆ ನಾವೇನು ದೆಹೆಲಿಯಲ್ಲಿಲ್ಲ ಎಂದು ಸಮಾಧಾನ ಮಾಡಿಕೊಂಡರೂ ಚಳಿಗಾಲದಲ್ಲಿ ಬಹುತೇಕ ನಗರಗಳಲ್ಲಿ ಗಾಳಿಯ ಗುಣಮಟ್ಟದ ಕುಸಿಯುವುದು ಬಹಳಷ್ಟು ಸಾಮಾನ್ಯ.

ಮನೆಯಿಂದ ಹೊರಬಿದ್ದರೆ ಕಷ್ಟವೆಂದು ಮನೆಯೊಳಗಿದ್ದರೆ ಉಸಿರಾಡುವ ಗಾಳಿಯ ಗುಣಮಟ್ಟ (air purifier plants) ವೃದ್ಧಿಯಾಗುವುದಕ್ಕೆ ಸಾಧ್ಯವೇ? ಉಳ್ಳವರು ಏರ್‌ ಪ್ಯೂರಿಫಯರ್‌ ಕೊಳ್ಳುವರು, ನಾನೇನು ಮಾಡಲಿ ಎನ್ನುವ ಚಿಂತೆ ಇದ್ದರೆ ಬಿಟ್ಟು ಬಿಡಿ. ಅದಕ್ಕೂ ಉಪಾಯವಿದೆ.

ಒಳಾಂಗಣದಲ್ಲಿ ಬೆಳಸಬಹುದಾದ ಕೆಲವು ಸಸ್ಯಗಳು ಗಾಳಿ ಶುದ್ಧೀಕರಿಸಲು ನೆರವಾಗುತ್ತವೆ. ದಿನವೂ ಅವುಗಳಿಗೆ ಕೊಂಚ ಆರೈಕೆ, ಅಕ್ಕರೆಯನ್ನು ತೋರಿದರೆ ಅದಕ್ಕೆ ಪ್ರತಿಯಾಗಿ ಉಸಿರಾಡಲು ಗುಣಮಟ್ಟದ ಗಾಳಿಯನ್ನವು ಒದಗಿಸಬಲ್ಲವು. ನಿತ್ಯವೂ ಹಸಿರಾಗಿದ್ದು, ನೋಡುವುದಕ್ಕೆ ಮನೆಯೊಳಗೊಂದು ಆಹ್ಲಾದಕರ ಪ್ರಕೃತಿಯನ್ನು ಸೃಷ್ಟಿಸಬಲ್ಲವು. ಹೀಗೆ ಕಣ್ಣಿಗೆ ತಂಪು ಮತ್ತು ಉಸಿರಾಡಲು ಸೊಂಪಾದ ಗಾಳಿಯನ್ನು ನೀಡಬಲ್ಲ ಕೆಲವು ಸಸ್ಯಗಳ ವಿವರಗಳು ಇಲ್ಲಿವೆ.

Winter Season Care

ಲೋಳೆಸರ

ಲೋಳೆಸರ ಅಥವಾ ಅಲೋವೆರ ಹೆಚ್ಚಿನ ಜನರಿಗೆ ಈ ಸಸ್ಯದ ಪರಿಚಯ ಇರುವುದು ಸೌಂದರ್ಯವರ್ಧಕವಾಗಿ. ಕೂದಲಿನ ಆರೋಗ್ಯ ಹೆಚ್ಚಿಸಲು, ಚರ್ಮದ ಸೌಂದರ್ಯ ವೃದ್ಧಿಸಲು ಮಾತ್ರವೇ ಇದರ ಉಪಯೋಗ ಸೀಮಿತವಾಗಿಲ್ಲ. ಇದು ಇಂಗಾಲದ ಡೈ ಆಕ್ಸೈಡ್‌ ಹೀರಿಕೊಂಡು ಆಮ್ಲಜನಕ ನೀಡುವ ಕೆಲಸವನ್ನು ರಾತ್ರಿ ವೇಳೆಯಲ್ಲೂ ಮಾಡುತ್ತದೆ. ಜೊತೆಗೆ ಪೇಂಟ್‌, ಅಂಟು, ಡಿಟರ್ಜಂಟ್‌ ಮುಂತಾದ ವಸ್ತುಗಳ ಮೂಲಕ ಗಾಳಿಗೆ ಸೇರಬಹುದಾದ ಬೆನ್‌ಜೀನ್‌ ಮತ್ತು ಫಾರ್ಮಲ್‌ಡಿಹೈಡ್‌ನಂಥ ರಾಸಾಯನಿಕಗಳನ್ನು ಇದು ಶುದ್ಧಗೊಳಿಸುತ್ತದೆ.

Winter Season Care

ಸ್ಪೈಡರ್‌ ಸಸ್ಯ

ಗಾಳಿಯಲ್ಲಿರುವ ಫಾರ್ಮಲ್‌ಡಿಹೈಡ್‌ ಅಂಶವನ್ನು ತೆಗೆಯುವಲ್ಲಿ ಈ ಸಸ್ಯವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನಾಸಾ (NASA) ಸಹ ಅನುಮೋದಿಸಿದೆ. ಇದೊಂದೇ ಅಲ್ಲ ಕಾರ್ಬನ್‌ ಮೊನಾಕ್ಸೈಡ್‌, ಬೆನ್‌ಜೀನ್‌, ಕ್ಸೈಲೀನ್‌ ಮತ್ತು ನೈಟ್ರೋಜನ್‌ ಡೈಆಕ್ಸೈಡ್‌ ಅಂಶಗಳನ್ನು ತೆಗೆದು ಗಾಳಿಯನ್ನು ಶುದ್ಧೀಕರಿಸಬಲ್ಲದು. ಹೀಗೆ ಹೀರಿಕೊಂಡ ರಾಸಾಯನಿಕಗಳನ್ನು ಅದು ಏನು ಮಾಡುತ್ತದೆ ಎಂಬ ಕುತೂಹಲವಿದ್ದರೆ ಈ ಅಂಶಗಳೆಲ್ಲ ಅದರ ಬೇರುಗಳಿಗೆ ಇಳಿದು, ಅಲ್ಲಿರುವ ಸೂಕ್ಷ್ಮಾಣುಗಳು ಅವುಗಳ ಡಿಟಾಕ್ಸ್‌ ಮಾಡುತ್ತವೆ.

Winter Season Care

ಬಿದಿರು ತಾಳೆ

ಬಂಬೂ ಪಾಮ್‌ ಎಂದೂ ಕರೆಯಲಾಗುವ ಈ ಸಸ್ಯವು ಒಳಾಂಗಣ ಅಲಂಕಾರಕ್ಕೆ ಜನಪ್ರಿಯ ಆಯ್ಕೆ. ಗಾಳಿ ಶುದ್ಧೀಕರಣದಲ್ಲಿ ಇದರ ಸಾಮರ್ಥ್ಯವೂ ಕಡಿಮೆಯೇನಿಲ್ಲ. ಅಲೋವೇರಾದಂತೆ ರಾತ್ರಿ ಹೊತ್ತಿನಲ್ಲೂ ಆಮ್ಲಜನಕ ಮತ್ತು ತೇವಾಂಶವನ್ನು ನೀಡುವಂಥ ಸಸ್ಯವಿದು. 10-12 ಅಡಿಗಳವರೆಗೂ ಬೆಳೆಯಬಲ್ಲ ಈ ಸಸ್ಯ ನೋಡುವುದಕ್ಕೂ ಸೊಂಪಾಗಿ ಕಾಣುತ್ತದೆ. ಜೊತೆಗೆ, ಬೆನ್‌ಜೀನ್‌, ಫಾರ್ಮಲ್‌ಡಿಹೈಡ್‌, ಟ್ರೈಕ್ಲೊರೊಎಥಿಲೀನ್‌, ಕ್ಸೈಲೀನ್‌, ಕ್ಲೊರೊಫಾರ್ಮ್‌ ಮುಂತಾದ ರಾಸಾಯನಿಕಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧಗೊಳಿಸುತ್ತದೆ.

Winter Season Care

ಚೈನೀಸ್‌ ಎವರ್‌ಗ್ರೀನ್‌

ಈ ಹೆಸರಿನ ಅಗಲ ಎಲೆಯ ಸಸ್ಯವು ಪ್ರಖರ ಬೆಳಕಿನಲ್ಲಿ ಕೆಲವೊಮ್ಮೆ ಗುಲಾಬಿ ಬಣ್ಣವನ್ನು ತನ್ನ ಪರ್ಣಗಳಿಂದ ಹೊರಹೊಮ್ಮಿಸುತ್ತದೆ. ಫಾರ್ಮಲ್‌ಡಿಹೈಡ್‌ ಮತ್ತು ಬೆನ್‌ಜೀನ್‌ನಂಥ ರಾಸಾಯಕ ಅಂಶಗಳನ್ನು ತೆಗೆದು ಶುದ್ಧ ಗಾಳಿಯನ್ನಿದು ನೀಡಬಲ್ಲದು. ಬೆಳಕು ಕಡಿಮೆ ಇರುವಂಥ ಜಾಗಗಳಲ್ಲೂ ಇದು ಬದುಕಬಲ್ಲದು, ತನ್ನ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲದು. ಹೆಚ್ಚಿನ ಆರೈಕೆಯನ್ನೂ ಬೇಡದ ಈ ಸಸ್ಯವನ್ನು ಆಲಂಕಾರಿಕವಾಗಿಯೂ ಬಳಸಲಾಗುತ್ತದೆ.

Winter Season Care: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಪೋಷಕಾಂಶಗಳನ್ನು ಸೇವಿಸಿ

Winter Season Care

ಪೀಸ್‌ ಲಿಲಿ

ಹಸಿರಾದ ಎಲೆಗಳ ನಡುವೆ ಅಗಲವಾದ ಬಿಳಿ ಅಥವಾ ಹಳದಿ ಹಾಳೆಯಂಥ ಹೂವುಗಳನ್ನು ಬಿಡುತ್ತವೆ. ಒಳಾಂಗಣ ಅಲಂಕಾರಕ್ಕಂತೂ ಇದು ಅತ್ಯಂತ ಜನಪ್ರಿಯವಾದ ಸುಂದರ ಸಸ್ಯ. ಫಾರ್ಮಲ್‌ಡಿಹೈಡ್‌, ಬೆನ್‌ಜೀನ್‌, ಕಾರ್ಬನ್‌ ಮೊನಾಕ್ಸೈಡ್‌ನಂಥ ರಾಸಾಯನಿಕಗಳನ್ನು ಶುದ್ಧೀಕರಿಸುವುದು ಮಾತ್ರವಲ್ಲ ಸಿಗರೇಟಿನ ಹೊಗೆ, ಗೋಡೆಯ ಬಣ್ಣಗಳ ತೀಕ್ಷ್ಣ ವಾಸನೆ, ಪೀಠೋಪಕರಣಗಳಿಗೆ ಅಮರಿಕೊಳ್ಳುವ ಫಂಗಸ್‌ನ ಮಾಲಿನ್ಯವನ್ನೂ ಹೀರಿಕೊಂಡು ಗಾಳಿ ಶುದ್ಧ ಮಾಡುವ ಸಾಮರ್ಥ್ಯ ಇದಕ್ಕಿದೆ.