Tuesday, 19th November 2024

TTD Meeting: ನಿವೃತ್ತಿ ಪಡೆದುಕೊಳ್ಳಿ… ಇಲ್ಲವೇ ವರ್ಗಾವಣೆ ತೆಗೆದುಕೊಳ್ಳಿ; ತಿರುಪತಿಯ ಹಿಂದೂಯೇತರ ನೌಕರರಿಗೆ TTD ಖಡಕ್‌ ಆದೇಶ

tirupati temple

ಹೈದರಾಬಾದ್‌: ತಿರುಮಲ ತಿರುಪತಿ ದೇವಸ್ಥಾನಂ (TTD Meeting) ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಬಿ.ಆರ್.ನಾಯ್ಡು(BR Naidu) ಅವರ ನೇತೃತ್ವದಲ್ಲಿ ನಿನ್ನೆ ಮೊದಲ ಸಭೆ ನಡೆದಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆಯೇ ಬಿ.ಆರ್‌ ನಾಯ್ಡು ಘೋಷಿಸಿದಂತೆಯೇ ಹಿಂದೂಯೇತರ ಉದ್ಯೋಗಿಗಳ ಸೇವೆಗಳನ್ನು ಕೊನೆಗೊಳಿಸಲು ಟಿಟಿಡಿ ಮಂಡಳಿ ನಿರ್ಧರಿಸಿದೆ.

ನಿನ್ನೆ ನಡೆದ ಸಭೆಯಲ್ಲಿ ತಿರುಮಲ ದೇವಾಲಯದ ನಿರ್ವಹಣೆ ಮತ್ತು ಸೌಲಭ್ಯಗಳನ್ನು ಸುಧಾರಿಸಲು ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದೇವಾಲಯದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರ ಧರ್ಮಗಳಿಗೆ ಸೇರಿದ ಉದ್ಯೋಗಿಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಟಿಟಿಡಿ ಘೋಷಿಸಿದೆ. ಈ ನಿರ್ಧಾರವನ್ನು ದೇವಾಲಯದ ಸಿಬ್ಬಂದಿ ಸಂಸ್ಥೆಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳಿಗೆ ಅನುಗುಣವಾಗಿರಲು ತೆಗೆದುಕೊಳ್ಳಲಾಗಿದೆ. ಮಂಡಳಿಯ ನಿರ್ಧಾರಗಳು ತಿರುಮಲದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು, ದಕ್ಷತೆಯನ್ನು ಸುಧಾರಿಸಲು ಮತ್ತು ಒಟ್ಟಾರೆ ಭಕ್ತರ ಅನುಭವವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಸಂಬಂಧಪಟ್ಟ ವಲಯಗಳು ತಿಳಿಸಿವೆ.

ಈಗಾಗಲೇ ತಿರುಪತಿ ದೇಗುಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರ ಉದ್ಯೋಗಿಗಳ ಬಗ್ಗೆ ಸೂಕ್ತ ಕ್ರಮವನ್ನು ಕೋರುವಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲು ಟಿಟಿಡಿ ನಿರ್ಧರಿಸಿದೆ.

ಎಷ್ಟು ಹಿಂದೂಯೇತರ ನೌಕರರಿದ್ದಾರೆ?

ತಿರುಪತಿ ದೇಗುಲದಲ್ಲಿ ಸುಮಾರು 700ರಷ್ಟು ನೌಕರರು ಇದ್ದು, ಆದರೆ ಹಿಂದೂಯೇತರ ನೌಕರರ ಸಂಖ್ಯೆ ಎಷ್ಟು ಇದೆ ಅನ್ನೋದನ್ನು ಬಹಿರಂಗಪಡಿಸಲು TTD ಮಂಡಳಿ ನಿರಾಕರಿಸಿದೆ. ಮೂಲಗಳ ಪ್ರಕಾರ 300ರಷ್ಟು ನೌಕರರು ಹಿಂದೂ ಧರ್ಮೀಯರಲ್ಲದವರು ಇದ್ದಾರೆ ಎಂದು ತಿಳಿದು ಬಂದಿದ್ದು, ಹಿಂದೂಯೇತರ ಅಧಿಕಾರಿಗಳು ಒಂದೋ ಸ್ವಯಂ ನಿವೃತ್ತಿ ಪಡೆದುಕೊಳ್ಳಿ, ಇಲ್ಲವೇ ಕೂಡಲೇ ವರ್ಗಾವಣೆ ತೆಗೆದುಕೊಳ್ಳಿ ಎಂದು TTD ಆದೇಶಿಸಿದೆ.

ಎರಡರಿಂದ ಮೂರು ಗಂಟೆಯಲ್ಲೇ ತಿಮ್ಮಪ್ಪನ ದರ್ಶನ

ಕೃತಕ ಬುದ್ಧಿಮತ್ತೆ (Artificial Intelligence) ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದರ್ಶನದ ಸಮಯವನ್ನು 20-30 ಗಂಟೆಗಳಿಂದ ಕೇವಲ 2-3 ಗಂಟೆಗಳಿಗೆ ಇಳಿಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ತಿಳಿಸಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಈ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.

ಟಿಟಿಡಿಯ ಯಾವುದೇ ಸದಸ್ಯರು ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡದಂತೆಯೂ ಸೂಚಿಸಲಾಗಿದೆ. ʼʼಅಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼ ಎಂದು ಬಿ.ಆರ್.ನಾಯ್ಡು ಎಚ್ಚರಿಸಿದ್ದಾರೆ. ಎಸ್ಇಡಿ (Special Entry Darshan) ಟಿಕೆಟ್‌ಗಳ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ವಿವಿಧ ರಾಜ್ಯಗಳ ಪ್ರವಾಸೋದ್ಯಮ ನಿಗಮಗಳ ದರ್ಶನ ಕೋಟಾವನ್ನು ತೆಗೆದುಹಾಕಲು ಮಂಡಳಿಯು ಅನುಮೋದನೆ ನೀಡಿದೆ.

ದೇವರ ದುಡ್ಡನ್ನು ಖಾಸಗಿ ಬ್ಯಾಂಕ್ ಬದಲಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳಲ್ಲಿ ಜಮೆ ಮಾಡಲು ಟಿಟಿಡಿ ನಿರ್ಣಯಿಸಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.

ತಿರುಪತಿಯ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಿದ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪ ಇತ್ತೀಚೆಗೆ ಭಾರಿ ವಿವಾದ ಹುಟ್ಟು ಹಾಕಿತ್ತು. ಇದರಿಂದ ಎಚ್ಚೆತ್ತ ಟಿಟಿಡಿ, ಉತ್ತಮ ಗುಣಮಟ್ಟದ ತುಪ್ಪವನ್ನು ಬಳಸಲು ನಿರ್ಧರಿಸಿದೆ. ಶ್ರೀವಾಣಿ ಟ್ರಸ್ಟ್ ಅನ್ನು ಟಿಟಿಡಿಯೊಂದಿಗೆ ವಿಲೀನಗೊಳಿಸಲು ಮಂಡಳಿಯು ನಿರ್ಧರಿಸಿದೆ. ಸ್ಥಳೀಯರಿಗೆ ಪ್ರತಿ ತಿಂಗಳ ಮೊದಲ ಮಂಗಳವಾರ ದೇವರ ದರ್ಶನ ಕಲ್ಪಿಸಲು ತೀರ್ಮಾನ ತೆಗೆದುಕೊಂಡಿದೆ.

ಇತರ ಮುಖ್ಯ ನಿರ್ಣಯಗಳು

  1. ತಿರುಮಲದ ಪ್ರತಿದಿನ ವಿತರಿಸಲಾಗುವ ಅನ್ನಪ್ರಸಾದದಲ್ಲಿ ಇನ್ನೊಂದು ರುಚಿಕರ ಭಕ್ಷ್ಯ ಪರಿಚಯಿಸಲಾಗುತ್ತದೆ.
  2. ಶ್ರೀನಿವಾಸ ಸೇತು ಫ್ಲೈ ಓವರ್‌ ಹೆಸರನ್ನು ಗರುಡ ವರಧಿ ಎಂದು ಬದಲಾಯಿಸಲಾಗುತ್ತದೆ.
  3. ಶ್ರೀವಾರಿ ದೇವಾಲಯದ ಹಳೆಯ ಪೋಟು ದೇವಾಲಯದ ಅಡುಗೆಮನೆಯಲ್ಲಿನ ಸೋರಿಕೆಯ ದುರಸ್ತಿ ಕಾರ್ಯ ಮತ್ತು ವೆಂಗಮಾಂಬ ಅನ್ನಪ್ರಸಾದಂ ಕಾಂಪ್ಲೆಕ್ಸ್‌ನ ಆಧುನೀಕರಣವನ್ನು ಟಿವಿಎಸ್ ಕಂಪನಿ ಕೈಗೆತ್ತಿಕೊಳ್ಳಲಿದೆ.
  4. ಅಲಿಪಿರಿಯಲ್ಲಿ ಪ್ರವಾಸೋದ್ಯಮಕ್ಕೆ ನೀಡಲಾದ 20 ಎಕರೆ ಭೂಮಿಯನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
  5. ಈ ವರ್ಷದ ಅ. 4ರಿಂದ 13ರವರೆಗೆ ನಡೆದ ತಿರುಮಲ ಶ್ರೀವಾರಿ ದೇವಾಲಯದ ವಾರ್ಷಿಕ ಬ್ರಹ್ಮೋತ್ಸವದ ಸಂದರ್ಭದಲ್ಲಿ ವಿಶೇಷ ಸೇವೆ ಸಲ್ಲಿಸಿದ ನೌಕರರ ಗೌರವಧನದಲ್ಲಿ ಶೇ. 10ರಷ್ಟು ಹೆಚ್ಚಳಕ್ಕೆ ಟಿಟಿಡಿ ಮಂಡಳಿ ಅನುಮೋದನೆ ನೀಡಿದೆ.

ಈ ಸುದ್ದಿಯನ್ನೂ ಓದಿ: Tirupati Laddu Row: ತಿರುಪತಿ ಲಡ್ಡು ಕಲಬೆರಕೆ ಕೇಸ್‌; 9 ಜನರ SIT ರಚಿಸಿದ ಆಂಧ್ರ ಸರ್ಕಾರ