ತಲೆ ತುಂಬಾ ಕಡುಕಪ್ಪಾದ ನಳನಳಿಸುವ ಕೂದಲು (Hair Care) ಬೇಕೆಂಬ ಆಸೆ ಯಾರಿಗಿರುವುದಿಲ್ಲ? ಆದರೆ ಅಂಥ ಕೂದಲು ಎಷ್ಟು ಮಂದಿಗಿರುತ್ತದೆ ಎಂಬುದು ಪ್ರಶ್ನೆ. ಕೂದಲು ಬಿಳಿಯಾದರೆ ಸಮಸ್ಯೆಯಲ್ಲ, ಬೇಕಾದ ಬಣ್ಣ ಹಚ್ಚಿಕೊಳ್ಳಬಹುದು, ತಲೆಯಲ್ಲಿ ಕೂದಲೇ (hair loss) ಉಳಿಯದಿದ್ದರೆ ಮಾತ್ರ ದೊಡ್ಡ ಸಮಸ್ಯೆ.
ಆಧುನಿಕ ಬದುಕಿನಲ್ಲಿ ತಲೆಗೂದಲು ಖಾಲಿಯಾಗುವುದಕ್ಕೆ ಲಿಂಗ, ವಯಸ್ಸು ಮುಂತಾದ ಯಾವುದೇ ಭೇದವಿಲ್ಲ. ಪುರುಷರಿಗೆ ಮಾತ್ರವಲ್ಲ ಮಹಿಳೆಯರನ್ನೂ ಕಾಡುತ್ತಿದೆ ಬೊಕ್ಕತಲೆ. ಇದು ವಯಸ್ಸಾದವರಿಗೆ ಮಾತ್ರ ಎಂದವರಿಗೆ ಮೂವತ್ತರೊಳಗಿನ ಯುವಕರನ್ನೂ ಬಿಟ್ಟಿಲ್ಲ ಎಂಬುದು ಗೊತ್ತಿರಲಿ. ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವ ಸಮಸ್ಯೆ ಮಿತಿಮೀರುತ್ತಿರುವುದಂತೂ ಹೌದು. ಏನು ಕಾರಣ ಇದಕ್ಕೆ? ಹೀಗೆ ಗ್ರಹ- ತಾರೆಗಳನ್ನು ತಲೆಯಲ್ಲಿ ಹೊತ್ತು ತಿರುಗುವುದರ ಬದಲು ಪರಿಹಾರಕ್ಕಾಗಿ ಏನು ಮಾಡಬಹುದು?
ಹೌದು, ವಯಸ್ಸಾದ ಮೇಲೆ ತಲೆಗೂದಲು ಮಾಯವಾದರೆ ಅದನ್ನು ಒಪ್ಪಿಕೊಳ್ಳುವುದು ಇಷ್ಟವಿಲ್ಲದಿದ್ದರೂ ಕಷ್ಟವಾಗುವುದಿಲ್ಲ. ಆದರೆ ಕೂದಲು ಇಲ್ಲವೆಂಬ ಕಾರಣಕ್ಕೆ ವಯಸ್ಸಾದಂತೆ ಕಾಣುವುದನ್ನು ಯಾರಿಗಾದರೂ ಒಪ್ಪಿಕೊಳ್ಳುವುದು ಕಷ್ಟವೇ. 30 ವರ್ಷಗಳ ಆಚೀಚೆ ಎನ್ನುವಷ್ಟರಲ್ಲಿ ಕುಟುಂಬ, ಕರಿಯರ್, ಆಸಕ್ತಿ ಮುಂತಾದ ಹಲವು ವಿಷಯಗಳನ್ನು ತಲೆಯೊಳಗೆ ತುಂಬಿಸಿಕೊಂಡಾಗ, ತಲೆಯ ಮೇಲೆ ಕೂದಲು ಖಾಲಿಯಾಗುವುದು ಹೆಚ್ಚು. ಈ ವಯಸ್ಸಿನಲ್ಲಿ ಆಗುವಂಥ ಹಾರ್ಮೋನಿನ ಬದಲಾವಣೆಯೂ ಸೇರಿಕೊಂಡರೆ ಹಣೆ ಅಗಲವಾಗುತ್ತಾ ಹೋಗುವುದು ನಿಶ್ಚಿತ. ಮೊದಲಿಗೆ ಕೂದಲು ಉದುರುವುದೇಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ.
ಯಾಕಾಗುತ್ತದೆ?
ಕೂದಲು ಉದುರುವುದಕ್ಕೆ ಕಾರಣಗಳು ಹಲವು. ಅತಿಯಾದ ಒತ್ತಡ, ನಿದ್ದೆಗೆಡುವುದು, ಸಮತೋಲನವಿಲ್ಲದ ಆಹಾರ ಪದ್ಧತಿ, ಹಾರ್ಮೋನುಗಳ ತೊಂದರೆ ಮುಂತಾದ ಹಲವು ಹಿನ್ನೆಲೆಗಳು ಇರಬಹುದು. ಎಲ್ಲದಕ್ಕಿಂತ ಮುಖ್ಯವಾಗಿದ್ದು ನಮ್ಮ ವಂಶವಾಹಿಗಳು. ಅಂದರೆ, ತಲೆಯ ಚರ್ಮದಲ್ಲಿ ಒಂದು ಬಗೆಯ ಕಿಣ್ವಗಳ ಹೆಚ್ಚಳ ಇದರ ಹಿಂದಿರಬಹುದು. ಅವು ಟೆಸ್ಟಾಸ್ಟೆರಾನ್ ಚೋದಕವನ್ನು ಡೈಹೈಡ್ರೋಟೆಸ್ಟೊಸ್ಟೆರಾನ್ (ಡಿಎಚ್ಟಿ) ಆಗಿ ಪರಿವರ್ತಿಸುತ್ತವೆ. ಹೀಗಾಗುತ್ತಿದ್ದಂತೆ ಕೂದಲು ಉದುರಲು ಆರಂಭಿಸುತ್ತದೆ. ಒಬ್ಬರಲ್ಲಿ ಇನ್ನೊಬ್ಬರಿಗಿಂತ ಡಿಎಚ್ಟಿ ಏಕೆ ಹೆಚ್ಚಿರುತ್ತದೆ ಎಂಬುದು ಸಂಪೂರ್ಣವಾಗಿ ಅವರವರ ವಂಶವಾಹಿಗಳಿಗೆ ಬಿಟ್ಟ ವಿಷಯ.
ಕೂದಲು ಉದುರುವುದಕ್ಕೆ ಪ್ರಾರಂಭವಾದ ಮೇಲೆ ಅತಿಯಾದ ರಾಸಾಯನಿಕಗಳ ಬಳಕೆಯು ಸಮಸ್ಯೆಯ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ. ಕಠೋರ ಶಾಂಪೂ, ಕಂಡೀಶನರ್, ಜೆಲ್, ವ್ಯಾಕ್ಸ್ ಅಥವಾ ಸ್ಪ್ರೇಗಳು ಈ ಸಾಲಿಗೆ ಸೇರುತ್ತವೆ. ಬದಲಿಗೆ, ಆಗಾಗ ಶುದ್ಧ ತೆಂಗಿನ ಎಣ್ಣೆಯಿಂದ ಕೂದಲ ಬುಡವನ್ನು ಲಘುವಾಗಿ ಮಸಾಜ್ ಮಾಡಿ. ಇದರಿಂದ ತಲೆಗೆ ರಕ್ತ ಸಂಚಾರ ಹೆಚ್ಚಿ, ಹೊಸ ಕೂದಲುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.
ಕಾಳಜಿ ಹೇಗೆ?
ಮೊದಲಿಗೆ ಸೇವಿಸುವ ಆಹಾರದ ಬಗ್ಗೆ ನಿಗಾ ವಹಿಸಿ. ಕಬ್ಬಿಣ, ಜಿಂಕ್, ಬಯೋಟಿನ್, ವಿಟಮಿನ್ ಎ, ಇ ಮತ್ತು ಡಿ ಆಹಾರಗಳು ಹಾಗೂ ಸಾಕಷ್ಟು ಪ್ರೊಟೀನ್ ನಿಮ್ಮ ಆಹಾರದಲ್ಲಿರಲಿ. ಇದಕ್ಕಾಗಿ ಹಣ್ಣು, ತರಕಾರಿ, ಮೀನು, ಮೊಟ್ಟೆ, ಬೀಜಗಳು, ಸೊಪ್ಪು ಮತ್ತು ಮೊಳಕೆ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಚೆನ್ನಾಗಿ ನೀರು ಕುಡಿಯಿರಿ.
ಮೃದುವಾದ ಶಾಂಪೂಗಳನ್ನು ಬಳಸಿ. ಉಗುರು ಬಿಸಿ ನೀರೇ ಸಾಕಾಗುತ್ತದೆ ತಲೆಸ್ನಾನಕ್ಕೆ. ಕೂದಲ ಬುಡವನ್ನು ಶಕ್ತಿ ಹಾಕಿ ಉಜ್ಜುವಂಥದ್ದು ಏನೂ ಇರುವುದಿಲ್ಲ. ವಾರಕ್ಕೆರಡು ಬಾರಿ ನಿಯಮಿತವಾಗಿ ತಲೆಸ್ನಾನ ಮಾಡಿದರೆ, ಕೂದಲ ಕೊಳೆ ತೆಗೆಯುವುದಕ್ಕೆ ಸಾಕಾಗುತ್ತದೆ. ತಲೆಸ್ನಾನಕ್ಕೆ ಬಳಸುವ ನೀರು ತುಂಬಾ ಗಡುಸಾಗಿದ್ದರೂ ಸಮಸ್ಯೆಗೆ ನಾಂದಿಯಾಗಬಹುದು.
ದಿನಕ್ಕೆ ಎಂಟು ತಾಸುಗಳ ನಿದ್ದೆ ಅಗತ್ಯವಾಗಿ ಬೇಕು. ಇದರಿಂದ ದೇಹದ ರಿಪೇರಿ ಮಾತ್ರವಲ್ಲ, ಮನಸ್ಸಿನ ಒತ್ತಡ ನಿವಾರಣೆಗೂ ಅನುಕೂಲವಾಗುತ್ತದೆ. ವ್ಯಾಯಾಮ, ಆಸಕ್ತಿಯ ಹವ್ಯಾಸಗಳು, ಧ್ಯಾನ, ಪ್ರಾಣಾಯಾಮಗಳು ಕೂದಲು ಸೇರಿದಂತೆ ದೇಹದ ಎಲ್ಲಾ ಅಂಗಗಳ ಮೇಲೂ ಧನಾತ್ಮಕ ಪರಿಣಾಮ ಬೀರುತ್ತವೆ.
ಕೂದಲು ಬೆಳೆಯುವಂಥ ಜೆಲ್ಗಳು, ಪಿಲ್ಗಳು ಲಭ್ಯವಿವೆ. ಆದರೆ ಇವನ್ನೆಲ್ಲ ಪ್ರಯೋಗಿಸಿಕೊಳ್ಳುವ ಮುನ್ನ ತಜ್ಞ ವೈದ್ಯರನ್ನು ಕಾಣಿ. ಕೂದಲಿನ ಟ್ರಾನ್ಸ್ಪ್ಲಾಂಟ್ನಂಥ ಚಿಕಿತ್ಸೆಗಳು ಅತ್ಯಂತ ದುಬಾರಿ. ಇಂಥವನ್ನು ಆಯ್ಕೆ ಮಾಡುವ ಮೊದಲು, ಅವುಗಳ ಇತಿ-ಮಿತಿಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಕೆಲವು ಕೂದಲು ಬೆಳೆಯುವ ಔಷಧಗಳು ತಲೆ ಮೇಲೆ ಮಾತ್ರವಲ್ಲ, ದೇಹದ ಉಳಿದೆಡೆಗಳಲ್ಲೂ ಕೂದಲಿನ ಪ್ರಮಾಣವನ್ನು ಹೆಚ್ಚಿಸುತ್ತವೆ. ಇಂಥ ಅಡ್ಡ ಪರಿಣಾಮಗಳನ್ನು ಅರಿತುಕೊಳ್ಳಿ.
Protin Powder: ಪ್ರೋಟೀನ್ ಪೌಡರ್ ಖರೀದಿಸುವ ಮೊದಲು ಈ 5 ಅಂಶಗಳ ಬಗ್ಗೆ ಗಮನ ಇರಲಿ!
ಕೂದಲುಗಳನ್ನು ಎಳೆದು ಬಿಗಿಯಾಗಿ ಹಿಮ್ಮುಖವಾಗಿ ಬಾಚಬೇಡಿ. ಅತಿ ಒರಟಾಗಿ ಬಾಚುವುದು ಸಹ ಸಲ್ಲದು. ಕೂದಲಿನ ಮೇಲೆ ಯಾವುದೇ ರೀತಿಯ ಬಲಪ್ರಯೋಗದಿಂದಲೂ ಬುಡ ಸಡಿಲವಾಗಿ, ಕೂದಲು ಬಲಹೀನವಾಗುತ್ತದೆ. ಡ್ರೈಯರ್ಗಳು, ಸುರುಳಿ ಅಥವಾ ನೇರ ಮಾಡುವಂಥ ಹೀಟಿಂಗ್ ಉಪಕರಣಗಳು ಬೇಡ. ತೀರಾ ಅಗತ್ಯ ಸಂದರ್ಭಗಳನ್ನು ಬಿಟ್ಟರೆ, ಉಳಿದಂತೆ ಪರ್ಮಿಂಗ್, ಬಣ್ಣ ಹಾಕುವಂಥ ಪ್ರಯೋಗಗಳು ಬೇಡ. ಒದ್ದೆ ಕೂದಲನ್ನು ಬಾಚುವ ಸಾಹಸದಿಂದ ಉದುರುವುದು ಇನ್ನಷ್ಟು ಹೆಚ್ಚುತ್ತದೆ.