ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ ʼMYTH FXʼ ಸ್ಟುಡಿಯೋ (MYTH FX Studio) ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿ ಆರಂಭವಾಯಿತು. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಈ ಸುಸಜ್ಜಿತ ವಿ ಎಫ್ ಎಕ್ಸ್ ಸ್ಟುಡಿಯೋವನ್ನು ಉದ್ಘಾಟಿಸಿ ಶುಭ ಕೋರಿದರು. ನಂತರ ಗಣ್ಯರು ಹಾಗೂ ಸ್ಟುಡಿಯೋ ಮುಖ್ಯಸ್ಥರು ಮಾತನಾಡಿದರು.
ವಿಡಿಯೋ ಕಾನ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ನಾನು ಕವಿ ಕೂಡ. ನನ್ನ ಎರಡು ಕವನ ಸಂಕಲನಗಳನ್ನು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಬಿಡುಗಡೆ ಮಾಡಿದ್ದಾರೆ. ಆನಂತರ ನಟನಾಗುವ ಆಸೆ ಮೂಡಿತ್ತು. ಇತ್ತೀಚೆಗೆ ತೆರೆಕಂಡ ʼದಿ ಸೂಟ್ʼ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಅನುಕೂಲವಾಗುವಂತಹ ಏನಾದರೊಂದು ಕೆಲಸ ಮಾಡಬೇಕೆಂದು ನನಗೆ ಅನಿಸುತ್ತಲೇ ಇತ್ತು. ಆ ಸಮಯಕ್ಕೆ ನನಗೆ ಇಪ್ಪತ್ತಕ್ಕೂ ಅಧಿಕ ವರ್ಷಗಳ ಅನುಭವವಿರುವ ಲೋಕೇಶ್ ಹಾಗೂ ಮಾರುತಿ ಎಂಬ ನುರಿತ ತಂತ್ರಜ್ಞರು ಸಿಕ್ಕರು. ನಾವೆಲ್ಲಾ ಸೇರಿ ಈ ʼMYTH FXʼ ಸ್ಟುಡಿಯೋವನ್ನು ಆರಂಭ ಮಾಡಿದ್ದೇವೆ. ನಿರ್ಮಾಪಕರಿಗೆ ಅನುಕೂಲವಾಗುವಂತಹ ಸ್ಟುಡಿಯೋ ಮಾಡಿರುವ ಖುಷಿಯಿದೆ ಎಂದರು ನಟ ಹಾಗೂ ʼMYTH FXʼ ಮುಖ್ಯಸ್ಥ ಕಮಲ್.
ನನಗೆ ಸುಮಾರು ಇಪ್ಪತ್ತೈದು ವರ್ಷಗಳಿಂದ ಚಲನಚಿತ್ರರಂಗದ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿ ಅನುಭವವಿದೆ ಎಂದು ಮಾತನಾಡಿದ ತಂತ್ರಜ್ಞ ಲೋಕೇಶ್, ಕಳೆದ ಒಂದು ವರ್ಷದಿಂದ ನಾವು ಈ ಸ್ಟುಡಿಯೋ ಕೆಲಸ ಆರಂಭಿಸಿದ್ದೇವೆ. ಸುಮಾರು ನೂರಕ್ಕೂ ಅಧಿಕ ಜನ ತಂತ್ರಜ್ಞರು ನಮ್ಮ ಸ್ಟುಡಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು ಕಾರ್ಯ ನಿರ್ವಹಿಸಿದ ಮೊದಲ ಚಿತ್ರ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ. ಈಗ ರಮೇಶ್ ರೆಡ್ಡಿ ಅವರ ನಿರ್ಮಾಣದ, ಅರ್ಜುನ್ ಜನ್ಯ ನಿರ್ದೇಶನದ, ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ “45” ಚಿತ್ರದ ಕೆಲಸ ಕೂಡ ನಮ್ಮ ಸ್ಟುಡಿಯೋದಲ್ಲೇ ನಡೆಯುತ್ತಿದೆ ಎಂದರು. ಮತ್ತೊಬ್ಬ ತಂತ್ರಜ್ಞ ಮಾರುತಿ ಸಹ ಸ್ಟುಡಿಯೋದ ಅನುಕೂಲತೆ ಬಗ್ಗೆ ಮಾತನಾಡಿದರು. ವಿತರಕ ರಾಜು ಪತ್ರಿಕಾಗೋಷ್ಠಿಯಲ್ಲಿದ್ದರು.
ಈ ಸುದ್ದಿಯನ್ನೂ ಓದಿ | Winter Wedding Fashion 2024: ವಿಂಟರ್ ವೆಡ್ಡಿಂಗ್ ಫ್ಯಾಷನ್ ಎಥ್ನಿಕ್ ಉಡುಪುಗಳಿಗೆ ಸಿಕ್ತು ಹೊಸ ಲುಕ್!
ಕಮಲ್ ಹಾಗೂ ಸ್ನೇಹಿತರು ಆರಂಭಿಸಿರುವ ʼMYTH FXʼ ಸ್ಟುಡಿಯೋದಿಂದ ಕನ್ನಡ ನಿರ್ಮಾಪಕರಿಗೆ ಅನುಕೂಲವಾಗಲಿದೆ. ಅವರ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಅತಿಥಿಗಳಾಗಿ ಆಗಮಿಸಿದ್ದ ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾರೈಸಿದರು.