Tuesday, 19th November 2024

Vikram Gowda: 20 ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ನಕ್ಸಲ್; ಯಾರೀತ ವಿಕ್ರಂ ಗೌಡ?

Vikram Gowda

ಉಡುಪಿ: ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡ (Vikram Gowda), ನಕ್ಸಲ್‌ ನಿಗ್ರಹ ಪಡೆಯ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ವಿಕ್ರಂ ಗೌಡ ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಸಾಧು ಸ್ವಭಾವದ ಹುಡುಗ, ನಕ್ಸಲ್ ನಾಯಕನಾಗಿ ಬೆಳೆಯಲು ಕಾರಣವೇನು? ಆತನ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.

13 ವರ್ಷಗಳ ಬಳಿಕ ಮಲೆನಾಡು ಕರಾವಳಿಯಲ್ಲಿ ನಕ್ಸಲ್ ಎನ್‌ಕೌಂಟರ್ ನಡೆದಿದ್ದು, ಇದರಲ್ಲಿ ನಕ್ಸಲ್ ನಾಯಕ ವಿಕ್ರಂಗೌಡ ಬಲಿಯಾಗಿದ್ದಾನೆ. ಉಡುಪಿಯ ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಎನ್‌ಕೌಂಟರ್ ಮಾಡಿ ವಿಕ್ರಂ ಗೌಡನನ್ನು ಹತ್ಯೆ ಮಾಡಿದೆ. ಸೋಮವಾರ ಸಂಜೆ ನಡೆದ ಗುಂಡಿನ ಕಾಳಗದಲ್ಲಿ ಇನ್ನೂ ಇಬ್ಬರು, ಮೂವರು ನಕ್ಸಲರು ಗಾಯಗೊಂಡಿದ್ದು ಅವರಿಗಾಗಿ ಅರಣ್ಯದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಯಾರು ಈ ವಿಕ್ರಂ ಗೌಡ?
ರಾಜ್ಯದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಂ ಗೌಡನ ಮೂಲ ಉಡುಪಿ ಹೆಬ್ರಿ ತಾಲೂಕಿನ ಕೂಡ್ಲು ನಾಡ್ವಾಲು ಗ್ರಾಮ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ರಾಜ್ಯದಲ್ಲಿನ ಜವಾಬ್ದಾರಿ ವಿಕ್ರಂ ಗೌಡ ಹೆಗಲಿಗೆ ಬಿದ್ದಿತ್ತು. 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ವಿಕ್ರಂ ಗೌಡ ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಕಾರ್ಮಿಕ ಸಂಘಟನೆಯಿಂದ ಬಂದಿದ್ದ ವಿಕ್ರಂ ಗೌಡ ಮೂರು ಬಾರಿ ಕರ್ನಾಟಕ ಪೊಲೀಸರ ಕೈಯಿಂದ ಪರಾರಿಯಾಗಿದ್ದ. ಇನ್ನು 2016ರಲ್ಲಿ ಕೇರಳದ ನಿಲಂಬೂರು ಅರಣ್ಯದಲ್ಲಿ ನಕ್ಸಲ್‌ ನಿಗ್ರಹ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಬಲಿಯಾದರೆ, ವಿಕ್ರಂ ಗೌಡ ಹಾಗೂ ಇತರರು ಪರಾರಿಯಾಗಿದ್ದರು.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗೆ ವಿಕ್ರಂ ಗೌಡ ವಿರೋಧ ಹೊಂದಿದ್ದ. ಅಷ್ಟೇ ಅಲ್ಲದೇ ಈ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಕ್ಕೆ ಗೌರಿ ಲಂಕೇಶ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಿತ್ತಿಪತ್ರಗಳನ್ನು ಕೂಡ ಹಂಚಿದ್ದ.

ನಕ್ಸಲ್ ಚಟುವಟಿಕೆಯಲ್ಲಿ ತೊಡಗಲು ಕಾರಣವೇನು?

ವಿಕ್ರಂ ಗೌಡ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣ ಅರಣ್ಯ ಇಲಾಖೆಯವರೇ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರಾದ ವಿಕ್ರಮಾರ್ಜುನ ಹೆಗ್ಗಡೆ ಮಾತನಾಡಿದ್ದು, ವಿಕ್ರಂಗೌಡ ನಮ್ಮ ಊರಿನವನಾಗಿದ್ದರಿಂದ ಆತ ಹೆಚ್ಚಾಗಿ ಬರುತ್ತಿದ್ದಾನೆ ಅನ್ನುವುದು ಬಿಟ್ಟರೆ, ಆ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಆತನ ತಂದೆ ತಾಯಿ ತೀರಿಕೊಂಡಿದ್ದರಿಂದ ನಮಗೆ ಆತ ಬರುವ ಹೋಗುವ ಬಗ್ಗೆ ಸುಳಿವು ಇರಲಿಲ್ಲ. ಅವನ ದೊಡ್ಡಪ್ಪ ನಮ್ಮ ಊರಿನಲ್ಲಿದ್ದಾರೆ. ಅವರು ಮಲೆಕುಡಿಯ ಸಮಾಜದಿಂದ ಬಂದವರು ಎಂದು ಹೇಳಿದ್ದಾರೆ.

ಸುಮಾರು 2002-3ರಲ್ಲಿ ಆತ ಇಂತಹ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ‘ಕರ್ನಾಟಕ ವಿಮೋಚನಾ ಸಂಘ’ ಎನ್ನುವಂತಹ ತಂಡವನ್ನು ಆರಂಭಿಸಿದಾಗ ಆತ ಅದರಲ್ಲಿ ಸೇರಿಕೊಂಡ. ಆ ನಂತರ ಸಾಕೇತ್ ರಾಜನ್ ಬಂದ ನಂತರ ಅದು ನಕ್ಸಲ್‌ರ ಸಂಘ ಎಂದಾಯಿತು. ಆರಂಭದಲ್ಲಿ ಅವರು ಲಾವಣಿ ಪದಗಳನ್ನು ಹಾಡುತ್ತಾ ಮನೆ ಮನೆಗೆ ಬರುತ್ತಿದ್ದರು. ತದನಂತರ ನಮ್ಮ ಊರಿನಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸುತ್ತಿದ್ದರು. ನನ್ನನ್ನು ಒಮ್ಮೆ ಅವರ ಪ್ರತಿಭಟನೆಗೆ ಕರೆದಿದ್ದ ನಾನು ಹೋಗಿರಲಿಲ್ಲ. ಅದಕ್ಕಾಗಿ ನನ್ನ ಮೇಲೆ ದ್ವೇಷ ಇಟ್ಟಕೊಂಡು 2-3 ಬಾರಿ ನನ್ನ ಮನೆ ಮೇಲೆ ಪ್ರತಿಕಾರವನ್ನು ತೀರಿಸಲು ಮುಂದಾಗಿದ್ದ. 3-4 ಜನರ ತಂಡವನ್ನು ನಮ್ಮ ಮನೆಗೆ ದಾಳಿ ಮಾಡಲು ಕಳುಹಿಸಿದ್ದ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Naxalite Encounter: ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಹತ

ವಿಕ್ರಂಗೌಡ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣ ಅರಣ್ಯ ಇಲಾಖೆಯವರು. ಅವರು ಆತನ ಮೆಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದರು. ಇದರಿಂದಾಗಿ ಆತ ಈ ತಂಡದಲ್ಲಿ ತೊಡಗಿಕೊಂಡು ಅಲ್ಲಿಂದ ಆತ ಆ ತಂಡದ ಜತೆಗೆ ಬೆಳೆದ. ವಿಕ್ರಂ ಸಾಧು ಸ್ವಭಾವದ ಹುಡುಗನಾಗಿದ್ದ, ಆತ ಈ ಮಟ್ಟಕ್ಕೆ ನಕ್ಸಲ್ ನಾಯಕನಾಗುತ್ತಾನೆ ಎನ್ನುವುದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. 5ನೇ ತರಗತಿ ತನಕ ಮಾತ್ರ ಓದಿದ್ದ ಅವನು, ಆಮೇಲೆ ಮುಂಬೈಗೆ ಹೋಗಿ ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ನಂತರ ಊರಿಗೆ ಬಂದು ಇಂತಹ ಕೆಲಸದಲ್ಲಿ ತೊಡಗಿಕೊಂಡ. ಆತನಿಗೆ ಅನೇಕ ಬಾರಿ ನಾನು ಬುದ್ಧಿವಾದ ಹೇಳಿದ್ದೆ ಆದರೂ ಆತ ಕೇಳಲಿಲ್ಲ ಎಂದು ಸ್ಮರಿಸಿದ್ದಾರೆ.