Tuesday, 19th November 2024

Fake Doctors: ಆಸ್ಪತ್ರೆ ತೆರೆದು ಜಿಲ್ಲಾಡಳಿತದ ಅಧಿಕಾರಿಗಳ ಹೆಸರನ್ನೇ ಬಳಸಿದ್ದ ನಕಲಿ ವೈದ್ಯರು! ತನಿಖೆಯಿಂದ ಕಳ್ಳಾಟ ಬಯಲು

Fake Doctors

ಗಾಂಧೀನಗರ: ಗುಜರಾತ್‌ನ ಸೂರತ್‌ (Surat)ನಲ್ಲಿ ನಕಲಿ ವೈದರ (Fake Doctors) ಗುಂಪೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿ, ಅದರ ಉದ್ಘಾಟನೆ ಮಾಡಲು ಉನ್ನತ ಆಡಳಿತ ವರ್ಗದ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳ ಹೆಸರಿರುವ ನಕಲಿ ಆಮಂತ್ರಣ ಪತ್ರಿಕೆಯನ್ನು ತಯಾರಿಸಿ ಜನರಿಗೆ ವಂಚಿಸಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಹೀಗಾಗಿ ಉದ್ಘಾಟನೆಯಾದ ಒಂದೇ ದಿನಕ್ಕೆ ಆಸ್ಪತ್ರೆಯನ್ನು ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ.

ಒಟ್ಟು ಐದು ಮಂದಿ ಸೇರಿ ಈ ಆಸ್ಪತ್ರೆಯನ್ನು ಪ್ರಾರಂಭಿಸಿದ್ದರು. ಐವರಲ್ಲಿ ಮೂವರು ನಕಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ಹೊಂದಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಉಳಿದ ಇಬ್ಬರ ವಿರುದ್ದ ತನಿಖೆ ನಡೆಯುತ್ತಿದ್ದು, ಪ್ರಮಾಣ ಪತ್ರವನ್ನು ಪರಿಶೀಲಿಸುತ್ತೇವೆ ಎಂದು ಸೂರತ್‌ ಪೊಲೀಸರು ತಿಳಿಸಿದ್ದಾರೆ.

ಸೂರತ್‌ನ ಪಾಂಡೆಸರಾ ಪ್ರದೇಶದಲ್ಲಿರುವ ಜನಸೇವಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಲಾಗಿತ್ತು. ಸೂರತ್ ಮುನ್ಸಿಪಲ್ ಕಮಿಷನರ್ ಶಾಲಿನಿ ಅಗರ್ವಾಲ್, ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್ ಮತ್ತು ಜಂಟಿ ಪೊಲೀಸ್ ಕಮಿಷನರ್ ರಾಘವೇಂದ್ರ ವತ್ಸಾ ಸೇರಿದಂತೆ ಉನ್ನತ ಅಧಿಕಾರಿಗಳ ಹೆಸರು ಉದ್ಘಾಟನೆಯ ಆಹ್ವಾನ ಪತ್ರದಲ್ಲಿತ್ತು. ಆದರೆ ಅಂತಹ ಯಾವುದೇ ಆಹ್ವಾನದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಕರಪತ್ರದಲ್ಲಿ ಆಯುರ್ವೇದ ವೈದ್ಯಕೀಯ ಪದವಿ ಹೊಂದಿರುವ ವೈದ್ಯ ಎಂದು ಬಿ.ಆರ್. ಶುಕ್ಲಾ ಅವರನ್ನು ಪರಿಚಯಿಸಲಾಗಿತ್ತು. ಆದರೆ ಅವರು ನಕಲಿ ವೈದರಾಗಿದ್ದು, ಅವರ ವಿರುದ್ಧ ಗುಜರಾತ್ ವೈದ್ಯಕೀಯ ವೈದ್ಯರ ಕಾಯ್ದೆಯಡಿ ಪ್ರಕರಣವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಗುರ್ಜರ್ ತಿಳಿಸಿದ್ದಾರೆ.

ಇದನ್ನೂ ಓದಿ : Mumbai Horror: ಒಂದಲ್ಲ, ಎರಡಲ್ಲ ಬರೋಬ್ಬರಿ 14 ಶ್ವಾನಗಳ ಮಾರಣಹೋಮ! ಚರಂಡಿಯಲ್ಲಿ ತೇಲಿದ ಶವಗಳು- ಶಾಕಿಂಗ್‌ ವಿಡಿಯೋ ವೈರಲ್‌

ಎಲೆಕ್ಟ್ರೋ-ಹೋಮಿಯೋಪತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಳ್ಳುವ ಮತ್ತೊಬ್ಬ ಸಹ-ಸಂಸ್ಥಾಪಕ ಆರ್‌.ಕೆ. ದುಬೆ ಅವರು ವೈದ್ಯಕೀಯ ವೃತ್ತಿಗಾರರ ಕಾಯಿದೆಯಡಿ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಬ್ಬ ಸಹ-ಸಂಸ್ಥಾಪಕ ಜಿಪಿ ಮಿಶ್ರಾ ನಿಷೇಧ ಕಾಯಿದೆಯಡಿಯಲ್ಲಿ ಮೂರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರ ಪದವಿಯನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆಸ್ಪತ್ರೆಯನ್ನು ಸೀಜ್‌ ಮಾಡಲಾಗಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಅಪರಾಧ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಹೇಳಿದೆ.