ಬೆಂಗಳೂರು: ಮದ್ಯ ಮಾರಾಟಗಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಗೃಹ ಕಚೇರಿ ಕೃಷ್ಣದಲ್ಲಿ ನಡೆಸಿದ ಸಭೆ ಯಶಸ್ವಿಯಾಗಿದ್ದು ಮುಷ್ಕರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್‌ನಿಂದ ನ.20ರಂದು ನಡೆಸಲು ನಿರ್ಧರಿಸಲಾಗಿದ್ದ ಮದ್ಯ ಮಾರಾಟ ಬಂದ್ (Liquor Bandh) ಹಿಂಪಡೆಯಲಾಗಿದೆ.
ಸಭೆಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಮದ್ಯ ಮಾರಾಟಗಾರರ ಬೇಡಿಕೆ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಮದ್ಯ ಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗಿ ಸರ್ಕಾರಕ್ಕೆ ಆದಾಯ ತರುವಂತೆ ಕ್ರಮ ಕೈಗೊಳ್ಳಲಾಗುವುದು ಮಾಡಲಾಗುವುದು. ಅಧಿಕಾರಿಗಳು ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡದಂತೆ ನಿಗಾ ವಹಿಸುವಂತೆ ಅಬಕಾರಿ ಆಯುಕ್ತರಿಗೆ ಸೂಚನೆ ನೀಡಲಾಗುವುದು ಎಂದು ಸಿಎಂ ತಿಳಿಸಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ ನಾವು ದೂರು ಕೊಟ್ಟಿಲ್ಲ. ಈ ಬಗ್ಗೆ ಸುಳ್ಳು ಹಬ್ಬಿಸಿದ್ದಾರೆ. ದೂರು ಕೊಟ್ಟವರಿಗೂ ನಮಗೂ ಸಂಬಂಧವೇ ಇಲ್ಲ. ಈ ಬಗ್ಗೆ ಬೇಕಿದ್ದರೆ ಪರಿಶೀಲನೆ ನಡೆಸಿ, ತನಿಖೆ ನಡೆಸಿ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಒಕ್ಕೋರಲಿನಿಂದ ಸ್ಪಷ್ಟಪಡಿಸಿದರು.
ಅಬಕಾರಿ ಇಲಾಖೆ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಿಎಂ ತಿಳಿಸಿದರು. ಇನ್ನು ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ, ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | DA Hike: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ
ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ ‘ಜಾಗತಿಕ ನಾವೀನ್ಯತಾ ಜಿಲ್ಲೆ’ ಸ್ಥಾಪನೆ: ಸಿಎಂ ಘೋಷಣೆ
ಬೆಂಗಳೂರು: ಭಾರತದಲ್ಲಿ ಮೊದಲ ಗ್ಲೋಬಲ್ ಕೇಪಬಿಲಿಟಿ ಸೆಂಟರ್ ನೀತಿಯನ್ನು (Global Capability Centres (GCC) Policy) ಕರ್ನಾಟಕ ಜಾರಿಗೆ ತಂದಿದ್ದು, ಈ ಕೇಂದ್ರಗಳನ್ನು ಸಶಕ್ತಗೊಳಿಸಲು ಉದ್ದೇಶಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಮೂರು ಜಾಗತಿಕ ನಾವೀನ್ಯತಾ ಜಿಲ್ಲೆಗಳನ್ನು (Global innovation districts) ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಜಿಸಿಸಿಗಳನ್ನು (Bengaluru Tech Summit 2024) ಸ್ಥಾಪಿಸಲು ಇವು ಮೀಸಲಾಗಿರುತ್ತವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಟೆಕ್ ಸಮ್ಮಿಟ್ 2024ರಲ್ಲಿ ಮಾತನಾಡಿದ ಸಿಎಂ ಅವರು, ಬೆಂಗಳೂರು ಜಾಗತಿಕ ನಾವೀನ್ಯತಾ ಜಿಲ್ಲೆಯು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರದ (KWIN City) ಭಾಗವಾಗಿರಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಅಂತರದಲ್ಲಿದ್ದು, ನಾವೀನ್ಯತೆ ಮತ್ತು ಸಂಶೋಧನೆಗೆ ಜಾಗತಿಕ ಕೇಂದ್ರವಾಗಿ ಪರಿಣಮಿಸಲಿದೆ ಎಂದು ಹೇಳಿದರು.
ಎಂಜಿನಿಯರಿಂಗ್ ಪ್ರತಿಭೆ ಮತ್ತು ಜಾಗತಿಕವಾಗಿ ಅತ್ಯಧಿಕ ಎಐ ವೃತ್ತಿಪರರನ್ನು ಹೊಂದಿರುವ ಕರ್ನಾಟಕ ಜಿಸಿಸಿಗಳಿಗೆ ಅತಿ ಪ್ರಿಯವಾದ ಗಮ್ಯವಾಗಿದೆ. ಎನ್‌ಐಪಿಯುಎನ್‌ಎ ಕರ್ನಾಟಕದಡಿಯಲ್ಲಿ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವ ಕಾರ್ಮಿಕಪಡೆಯನ್ನು ತಯಾರು ಮಾಡಲು ನಾವು ಕೈಗೊಂಡ ಯೋಜನೆಗಳು ಇನ್ನಷ್ಟು ಬಲಪಡಿಸಲಿವೆ. ಈಗ ತಾನೇ ಮೈಕ್ರೋ ಸಾಫ್ಟ್, ಇಂಟೆಲ್ , ಆಕ್ಸೆಂಚರ್ , ಐ.ಬಿ.ಎಂ ಮತ್ತು ಬಿ ಎಫ್ ಎಸ್ ಕಾಂಸಾರ್ಟಿಯಂ ಜತೆಗೆ ಸಹಿ ಹಾಕಲಾದ ಐದು ಒಪ್ಪಂದಗಳು ಕರ್ನಾಟಕದ ಒಂದು ಲಕ್ಷ ವ್ಯಕ್ತಿಗಳನ್ನು ಕೌಶಲಯುಕ್ತಗೊಳಿಸಲಿದೆ ಎಂದು ತಿಳಿಸಿದರು.
ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್
ಮೈಸೂರು ಬಳಿಯ ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (EMC) ಅನ್ನು ಸ್ಥಾಪಿಸಲಾಗುತ್ತದೆ. ಇದು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕದ ಪಾತ್ರವನ್ನು ಸಧೃಢಗೊಳಿಸುತ್ತದೆಯಲ್ಲದೆ, ಉದ್ಯೋಗಗಳನ್ನು ಸೃಷ್ಟಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲಿದೆ ಎಂದು ತಿಳಿಸಿದರು.
ಇನ್ನು ಮಂಗಳೂರಿನ ಫಿನ್ ಟೆಕ್ ಲೀಡರ್‌ಶಿಪ್‌ನಿಂದ ಹುಬ್ಬಳ್ಳಿ ಧಾರವಾಡದ ಇವಿ ಪ್ರಗತಿ ಮತ್ತು ಡ್ರೋನ್‌ಗಳು ಹಾಗೂ ಮೈಸೂರು ಪಿಸಿಬಿ ಕ್ಲಸ್ಟರ್ ಆಗುವವರೆಗೆ ಕ್ಲಸ್ಟರ್ ಆಧಾರಿತ ಅನು ಸಂಧಾನದ ಮೂಲಕ ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಸಾಧಿಸಲಾಗುತ್ತಿದೆ. ಬೆಂಗಳೂರಿನ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುತ್ತಲೇ ಪ್ರಾದೇಶಿಕ ಬಲವನ್ನು ಸಜ್ಜುಗೊಳಿಸಲು ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಸೂಕ್ತ ನೀತಿ ಮತ್ತು ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ ಎಂದು ಹೇಳಿದರು.