Tuesday, 19th November 2024

IPL 2025: ಆರ್‌ಸಿಬಿಗೆ ರಜತ್‌ ಪಾಟಿದಾರ್ ನಾಯಕನಾಗಬೇಕೆಂದ ರಾಬಿನ್‌ ಉತ್ತಪ್ಪ!

IPL 2025: Ex Team India Opener Robin Uthappa Wants Rajat Patidar To Captain RCB In IPL 2025

ಬೆಂಗಳೂರು: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ರಜತ್‌ ಪಾಟಿದಾರ್ ನಾಯಕನಾಗಬೇಕೆಂದು ಭಾರತ ತಂಡದ ಮಾಜಿ ಆರಂಭಿಕ ಮತ್ತು ಕನ್ನಡಿಗ ರಾಬಿನ್‌ ಉತ್ತಪ್ಪ ಸಲಹೆ ನೀಡಿದ್ದಾರೆ.

ಮೆಗಾ ಹರಾಜಿನ ನಿಮಿತ್ತ ಬೆಂಗಳೂರು ಪ್ರಾಂಚೈಸಿ, ವಿರಾಟ್‌ ಕೊಹ್ಲಿ, ಯಶ್‌ ದಯಾಳ್‌ ಹಾಗೂ ರಜತ್‌ ಪಾಟಿದಾರ್‌ ಅವರನ್ನು ಉಳಿಸಿಕೊಂಡು, ನಾಯಕ ಫಾಪ್‌ ಡು ಪ್ಲೆಸಿಸ್‌ ಸೇರಿದಂತೆ ಇನ್ನುಳಿದ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಿದೆ. ಆ ಮೂಲಕ ನವೆಂಬರ್‌ 24 ಮತ್ತು 25 ರಂದು ಸೌದಿ ಅರೇಬಿಯಾದಲ್ಲಿ ನಡೆಯುವ ಮೆಗಾ ಹರಾಜಿನಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಉತ್ತಮ ಆಟಗಾರರನ್ನು ಖರೀದಿಸಲು ಆರ್‌ಸಿಬಿ ಎದುರು ನೋಡುತ್ತಿದೆ.

ಇದೀಗ ಆರ್‌ಸಿಬಿ ನಾಯಕನ ಹುಡುಕಾಟದಲ್ಲಿದೆ. ಹಾಗಾಗಿ ಸೂಕ್ತ ಆಟಗಾರನನ್ನು ನಾಯಕತ್ವಕ್ಕೆ ಗುರುತಿಸಿ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿಸಲಿದೆ. ಮತ್ತೊಂದು ಕಡೆ ವಿರಾಟ್‌ ಕೊಹ್ಲಿ ಮತ್ತೆ ನಾಯಕತ್ವಕ್ಕೆ ಮರಳಲಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ ಕೆಎಲ್‌ ರಾಹುಲ್‌ ಅವರನ್ನು ಖರೀದಿಸಿ ಅವರಿಗೆ ನಾಯಕತ್ವ ನೀಡಬಹುದೆಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅದರಂತೆ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆರಂಭಿಕ ರಾಬಿನ್‌ ಉತ್ತಪ್ಪ, ಆರ್‌ಸಿಬಿ ನಾಯಕತ್ವಕ್ಕೆ ಕೆಎಲ್‌ ರಾಹುಲ್‌ ಅವರನ್ನು ಸೂಚಿಸಿದ್ದಾರೆ.

Mahipal Lomror: ತ್ರಿಶತಕ ಸಿಡಿಸಿ ಐಪಿಎಲ್‌ ಫ್ರಾಂಚೈಸಿಗಳಿಗೆ ಸಂದೇಶ ರವಾನಿಸಿದ ಆರ್‌ಸಿಬಿ ಸ್ಟಾರ್‌!

ಆರ್‌ಸಿಬಿಗೆ ರಜತ್‌ ಪಾಟಿದಾರ್‌ ನಾಯಕನಾಗಬೇಕೆಂದ ಉತ್ತಪ್ಪ

ಜಿಯೊ ಸಿನಿಮಾ ಜೊತೆ ಸಂಭಾಷಣೆ ನಡೆಸಿದ ರಾಬಿನ್‌ ಉತ್ತಪ್ಪ, ಮುಂದಿನ ಮೂರರಿಂದ ಐದು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ತನ್ನ ನಾಯಕತ್ವವನ್ನು ರಜತ್‌ ಪಾಟಿದಾರ್‌ಗೆ ನೀಡುವ ಬಗ್ಗೆ ಚಿಂತಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಆರ್‌ಸಿಬಿ ನಾಯಕತ್ವಕ್ಕೆ ರಜತ್‌ ಪಾಟಿದಾರ್‌ ಅವರನ್ನು ಆಯ್ಕೆ ಮಾಡುವ ಬಗ್ಗೆ ಚಿಂತಿಸಬೇಕಾಗಿದೆ. ಮುಂದಿನ ಎರಡು ವರ್ಷಗಳ ಬಳಿಕ ಆರ್‌ಸಿಬಿಗೆ ನೂತನ ನಾಯಕನ ಅಗತ್ಯವಿದೆ. ಹಾಗಾಗಿ ಈಗಲೇ ನಾಯಕನ್ನನ್ನು ಆಯ್ಕೆ ಮಾಡುವುದು ಒಳ್ಳೆಯದು. ಮುಂದಿನ ಮೂರು ಹಾಗೂ ಐದು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿಗೆ ರಜತ್‌ ಪಾಟಿದಾರ್‌ ಅವರನ್ನು ಆಯ್ಕೆ ಮಾಡುವುದು ಒಳ್ಳೆಯದು. ಇವರು ಆರ್‌ಸಿಬಿ ನಾಯಕತ್ವಕ್ಕೆ ಸೂಕ್ತವಾಗುತ್ತಾರೆ,” ಎಂದು ರಾಬಿನ್‌ ಉತ್ತಪ್ಪ ತಿಳಿಸಿದ್ದಾರೆ.

IPL 2025 Auction: ಐಪಿಎಲ್‌ ಹರಾಜಿನಲ್ಲಿ ರಾಜ್ಯದ 24 ಆಟಗಾರರು ಭಾಗಿ

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರ ವಿವರ

2025ರ ಐಪಿಎಲ್‌ ಮೆಗಾ ಹರಾಜಿನ ನಿಮಿತ್ತ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪೈಕಿ ರಜತ್‌ ಪಾಟಿದಾರ್‌ ಕೂಡ ಒಬ್ಬರು. ಇವರನ್ನು ಆರ್‌ಸಿಬಿ 11 ಕೋಟಿ ರೂ. ಗಳಿಗೆ ಉಳಿಸಿಕೊಂಡಿದೆ. ಇನ್ನು ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು 21 ಕೋಟಿ ರೂ. ಗಳಿಗೆ ನೀಡಲಾಗಿದೆ. ಇನ್ನು ಯುವ ವೇಗಿ ಯಶಸ್‌ ದಯಾಳ್‌ ಅವರಿಗೆ 5 ಕೋಟಿ ರೂ. ಗಳನ್ನು ನೀಡಿ ಉಳಿಸಿಕೊಳ್ಳಲಾಗಿದೆ. 2021ರಲ್ಲಿ ರಜತ್‌ ಪಾಟಿದಾರ್‌ ಅವರನ್ನು ಬೆಂಗಳೂರು ಫ್ರಾಂಚೈಸಿ 20 ಲಕ್ಷ ರೂ. ಗಳಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.