ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ (IND vs AUS) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ನವೆಂಬರ್ 22 ರಂದು ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ಮೊದಲನೇ ಟೆಸ್ಟ್ ಆರಂಭವಾಗಲಿದೆ. ಆದರೆ, ಮೊದಲನೇ ಟೆಸ್ಟ್ಗೆ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅಲಭ್ಯರಾಗಿದ್ದಾರೆ. ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದ ಮೊದಲನೇ ಟೆಸ್ಟ್ ಆಡುತ್ತಿಲ್ಲ. ಇನ್ನು ಗಿಲ್ ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.
ಅಲ್ಲದೆ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ತವರಿನಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದೀಗ ಆ ಸೋಲಿನೊಂದಿಗೆ ಆಸ್ಟ್ರೇಲಿಯಾಗೆ ಬಂದಿರುವ ಭಾರತ ತಂಡಕ್ಕೆ ಈ ಟೆಸ್ಟ್ ಸರಣಿಯಲ್ಲಿ ಕಠಿಣ ಸವಾಲು ಎದುರಾಗಲಿದೆ. ಅಲ್ಲದೆ ಮೊದಲನೇ ಟೆಸ್ಟ್ನಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಸ್ಥಾನದಲ್ಲಿ ಯಾರು ಆಡಬಹುದೆಂಬ ಬಗ್ಗೆ ತುಂಬಾ ಗೊಂದಲವಿದೆ.
IND vs AUS: ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕೆ ಉಪಯುಕ್ತ ಸಲಹೆ ನೀಡಿದ ಮೈಕಲ್ ವಾನ್!
ಶುಭಮನ್ ಗಿಲ್ ಸ್ಥಾನಕ್ಕೆ ದೇವದತ್ ಪಡಿಕ್ಕಲ್
ಭಾರತ ತಂಡ ಡಬ್ಲ್ಯುಎಸಿಎ ಮೈದಾನದಲ್ಲಿ ತನ್ನ-ತನ್ನ ಆಟಗಾರರ ನಡುವೆ ಅಭ್ಯಾಸ ಪಂದ್ಯವನ್ನು ಆಡಿತ್ತು. ಈ ವೇಳೆ ಶುಭಮನ್ ಗಿಲ್ ಅವರು ತನ್ನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಸ್ಕ್ಯಾನ್ ವರದಿಗಳು ಕೂಡ ಗಿಲ್ ಅವರಿಗೆ ಗಾಯ ಸ್ವಲ್ಪ ಗಂಭೀರವಾಗಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್ ಅವರು ಮೊದಲನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಪರ್ತ್ ಟೆಸ್ಟ್ಗೆ ಭಾರತ ತಂಡದ ಪ್ಲೇಯಿಂಗ್ XIನ ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಆಡುವ ಮೂಲಕ ಶುಭಮನ್ ಗಿಲ್ ಅವರ ಸ್ಥಾನವನ್ನು ತುಂಬಲಿದ್ದಾರೆಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಹಿಂದೆ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದಾಗ ದೇವದತ್ ಪಡಿಕ್ಕಲ್ ಹೆಸರು ಇರಲಿಲ್ಲ. ಆದರೆ, ರೋಹಿತ್ ಶರ್ಮಾ ಅವರು ಎರಡನೇ ಮಗುವಿನ ಕಾರಣ ಮೊದಲನೇ ಟೆಸ್ಟ್ಗೆ ಅಲಭ್ಯರಾದ ಕಾರಣ ಅವರ ಸ್ಥಾನಕ್ಕೆ ದೇವದತ್ ಪಡಿಕ್ಕಲ್ ಅವರನ್ನು ಆಸ್ಟ್ರೇಲಿಯಾದಲ್ಲಿ ಉಳಿಸಿಕೊಳ್ಳಲಾಯಿತು.
IND vs AUS: ಸ್ಲಿಪ್ ಕ್ಯಾಚ್ ಅಭ್ಯಾಸ ನಡೆಸಿದ ಭಾರತ ತಂಡ
ಆಸ್ಟ್ರೇಲಿಯಾ ಎ ವಿರುದ್ಧದ 4 ದಿನಗಳ ಎರಡು ಟೆಸ್ಟ್ ಪಂದ್ಯಗಳ ಸಲುವಾಗಿ ಭಾರತ ಎ ತಂಡದಲ್ಲಿ ದೇವದತ್ ಪಡಿಕ್ಕಲ್ ಆಡಿದ್ದರು. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರು ಮೊದಲನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವುದು ಖಚಿತವಾಗುತ್ತಿದ್ದಂತೆ ದೇವದತ್ ಪಡಿಕ್ಕಲ್ ಅವರನ್ನು ಆಸ್ಟ್ರೇಲಿಯಾದಲ್ಲಿಯೇ ಉಳಿಯುವಂತೆ ಸೂಚಿಸಲಾಗಿದೆ.
ಟೆಸ್ಟ್ ಕ್ರಿಕೆಟ್ಗೆ ಹರ್ಷಿತ್ ರಾಣಾ ಪದಾರ್ಪಣೆ
ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಮೂಲಕ ಯುವ ವೇಗಿ ಹರ್ಷಿತ್ ರಾಣಾ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆಂದು ಇದೇ ವರದಿ ಬಹಿರಂಗಪಡಿಸಿದೆ. ಅಭ್ಯಾಸ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರು ತಮ್ಮ ಬೌನ್ಸರ್ ಎಸೆತಗಳ ಮೂಲಕ ಟೀಮ್ ಮ್ಯಾನೇಜ್ಮೆಂಟ್ ಗಮನವನ್ನು ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮೊದಲನೇ ಟೆಸ್ಟ್ನಲ್ಲಿ ಅವಕಾಶ ನೀಡಬಹುದು.