Tuesday, 19th November 2024

IND vs AUS: ʻವಿರಾಟ್‌ ಕೊಹ್ಲಿಯನ್ನು ಕೆಣಕಬೇಡಿʼ-ಆಸ್ಟ್ರೇಲಿಯಾಗೆ ಶೇನ್‌ ವಾಟ್ಸನ್‌ ಎಚ್ಚರಿಕೆ!

ʻDon't poke Virat Kohliʼ-Shane Watson warns Australia ahead of Border-Gavaskar Trophy

ನವದೆಹಲಿ: ಮುಂಬರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯುಲ್ಲಿ (IND vs AUS) ವಿರಾಟ್‌ ಕೊಹ್ಲಿಯನ್ನು ಅನಗತ್ಯವಾಗಿ ಕೆಣಕಬೇಡಿ ಎಂದು ಮಾಜಿ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಅವರು ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಕೊಹ್ಲಿಯನ್ನು ನೀವು ಕೆಣಕಿದರೆ ಟೆಸ್ಟ್‌ ಸರಣಿಯ ಫಲಿತಾಂಶ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ಅಂದ ಹಾಗೆ ನವೆಂಬರ್‌ 22 ರಂದು ಪರ್ತ್‌ನಲ್ಲಿ ಉಭಯ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

ವಿಲೋಟಾಕ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಶೇನ್‌ ವಾಟ್ಸನ್, “ವಿರಾಟ್ ಕೊಹ್ಲಿ ಬಗ್ಗೆ ನನಗೆ ತಿಳಿದಿರುವ ಒಂದು ವಿಷಯವೆಂದರೆ ಅವರೊಳಗೆ ಬೆಂಕಿ ವೇಗವಾಗಿ ಉರಿಯುತ್ತದೆ. ಅವರು ಪ್ರತಿ ಚೆಂಡಿಗೆ ವಿಭಿನ್ನ ಉತ್ಸಾಹವನ್ನು ತರುತ್ತಾರೆ ಮತ್ತು ಅವರು ಅತಿಮಾನುಷ ಎಂಬಂತೆ ಪ್ರತಿ ಪಂದ್ಯವನ್ನು ಆಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಬೆಂಕಿ ಉರಿಯುವುದು ಕಡಿಮೆಯಾಗುತ್ತಿದೆ ಎಂದು ನಾವು ನೋಡಿದ್ದೇವೆ ಏಕೆಂದರೆ ಪ್ರತಿ ಪಂದ್ಯದಲ್ಲೂ ಉತ್ಸಾಹದಿಂದ ಉಳಿಯುವುದು ಕಷ್ಟ. ಅವರನ್ನು ಕೆಣಕದೆ ಹಾಗೆಯೇ ಆಡಲು ಬಿಟ್ಟು ಬಿಡಿ,” ಎಂದು ಹೇಳಿದ್ದಾರೆ.

IND vs AUS: ಆಸೀಸ್‌ ಮೊದಲ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ನಾಯಕ

ಕಿವೀಸ್‌ ಎದುರು ವೈಫಲ್ಯ ಅನುಭವಿಸಿದ್ದ ಕೊಹ್ಲಿ

ನ್ಯೂಜಿಲೆಂಡ್‌ ವಿರುದ್ದದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಅವರು ಆಡಿದ್ದ ಆರು ಇನಿಂಗ್ಸ್‌ಗಳಿಂದ ಕೇವಲ 93 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದರು. ಆ ಮೂಲಕ ಈ ಸರಣಿಯಲ್ಲಿ ಭಾರತ ತಂಡ, 0-3 ಅಂತರದಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತ್ತು. ಆದರೆ, ಆಸ್ಟ್ರೇಲಿಯಾದಲ್ಲಿ ಆಡಿದ್ದ 13 ಟೆಸ್ಟ್‌ ಪಂದ್ಯಗಳಿಂದ ವಿರಾಟ್‌ ಕೊಹ್ಲಿ 54ರ ಸರಾಸರಿಯಲ್ಲಿ 1353 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಆರು ಶತಕಗಳು ಹಾಗೂ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ 2018ರಲ್ಲಿ ಪರ್ತ್‌ನಲ್ಲಿ ಶತಕ ಸಿಡಿಸಿರುವುದು ವಿಶೇಷ.

ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿಯಾಗಿ ಕಾಣುತ್ತಾರೆ

“ಆಸ್ಟ್ರೇಲಿಯಾದಲ್ಲಿ ವಿರಾಟ್‌ ಕೊಹ್ಲಿ ಯಶಸ್ವಿಯಾಗಲು ಮುಖ್ಯ ಕಾರಣವೇನೆಂದರೆ, ಮೈದಾನದಲ್ಲಿ ಅವರನ್ನು ಎದುರಾಳಿ ಆಟಗಾರರು ಕೆಣಕಿರಿತ್ತಾರೆ ಹಾಗೂ ಅವರೊಂದಿಗೆ ಮಾತಿನ ಚಕಮಕಿ ನಡೆಸಲಾಗಿರುತ್ತದೆ. ಪ್ರತಿಯೊಂದು ಎಸೆತ, ಪ್ರತಿಯೊಂದು ನಿಮಿಷ, ಅವರು ಅತ್ಯಂತ ಆಕ್ರಮಣಕಾರಿ ಕಾಣುತ್ತಾರೆ. ಅವರು ನಿಜಕ್ಕೂ ಅತ್ಯುತ್ತಮ ಬ್ಯಾಟ್ಸ್‌ಮನ್‌,” ಎಂದು ಶೇನ್‌ ವಾಟ್ಸನ್‌ ಗುಣಗಾಣ ಮಾಡಿದ್ದಾರೆ.

IND vs AUS:‌ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ರನ್‌ ಗಳಿಸ್ತಾರಾ?-ಸುನೀಲ್‌ ಗವಾಸ್ಕರ್ ದೊಡ್ಡ ಭವಿಷ್ಯ!

“ನೀವು ವಿರಾಟ್‌ ಕೊಹ್ಲಿ ಸುತ್ತು-ಮುತ್ತು ಮಾತನಾಡಿಲ್ಲವಾದರೆ, ಅವರು ವಿಭಿನ್ನ ಆಟಗಾರನಾಗಿ ಕಾಣುತ್ತಾರೆ. ಒಂದು ವೇಳೆ ಅವರ ಸುತ್ತು-ಮುತ್ತು ಮಾತನಾಡಿದೆರೆ ಅವರ ವಿರಾಟ ರೂಪವನ್ನು ನೋಡಬೇಕಾಗುತ್ತದೆ. ಹಾಗಾಗಿ ಅವರನ್ನು ನೀವು ಕೆಣಕದೆ ಬಿಟ್ಟರೆ ಒಳ್ಳೆಯದು,” ಎಂದು ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್‌ ತಿಳಿಸಿದ್ದಾರೆ.

2014-15ರ ಸಾಲಿನಲ್ಲಿ ವಿರಾಟ್‌ ಕೊಹ್ಲಿ 4 ಟೆಸ್ಟ್ ಪಂದ್ಯಗಳಿಂದ 86.50ರ ಸರಾಸರಿಯಲ್ಲಿ ಒಟ್ಟು 692 ರನ್ ಗಳಿಸಿದ್ದರು. ಇದು ವಿರಾಟ್‌ ಕೊಹ್ಲಿಗೆ ಅತ್ಯುತ್ತಮ ಸರಣಿಯಾಗಿದೆ. ಈ ಅವಧಿಯಲ್ಲಿ ಬಲಗೈ ಬ್ಯಾಟ್ಸ್‌ಮನ್‌ ನಾಲ್ಕು ಶತಕ ಹಾಗೂ ಒಂದು ಅರ್ಧ ಶತಕ ಸಿಡಿಸಿದ್ದರು.