ದಕ್ಷಿಣ ಆಫ್ರಿಕಾ: ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆ ಮಾತಿದೆ, ಅಂದರೆ ಒಬ್ಬಳು ತಾಯಿಯಾದವಳಿಗೆ ತಾನು ಹೆತ್ತ ಮಗು ಯಾವ ರೀತಿಯಲ್ಲಿದ್ದರೂ ಅದರ ಮೇಲೆ ವಿಶೇಷ ಮಮಕಾರವಿರುತ್ತದೆ. ಅಂತಹುದರಲ್ಲಿ ದಕ್ಷಿಣ ಆಫ್ರಿಕಾದಲ್ಲಿ (South Africa) ತಾಯಿಯೊಬ್ಬಳು ತನ್ನ 8 ತಿಂಗಳ ಮಗುವನ್ನು ಮಾರಾಟ ಮಾಡಿರುವ ಸುದ್ದಿ ಇದೀಗ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು (Viral News), ಆ ತಾಯಿಯ ವರ್ತನೆಗೆ ಜಗತ್ತಿನಾದ್ಯಂತ ನೆಟ್ಟಿಗರು ಕಿಡಿಕಾರಿದ್ದಾರೆ.
ಮಬೋಪೇನ್ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ತನ್ನ 8 ತಿಂಗಳ ಮಗುವನ್ನು ಫೇಸ್ಬುಕ್ ಮಾರ್ಕೆಟ್ ಪ್ಲೇಸ್ (Facebook Marketplace) ಮೂಲಕ ಮಾರಾಟ ಮಾಡಿದ್ದು, ಆಕೆಯ ಈ ನಿರ್ಧಾರಕ್ಕೆ ಹಣಕಾಸಿನ ತೊಂದರೆಯೇ ಕಾರಣವೆಂದು ತಿಳಿದುಬಂದಿದೆ. ಆದರೆ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಈ ಕೃತ್ಯವನ್ನು ʼಹತಾಶೆಯ ಪರಮಾವಧಿʼ ಎಂದು ಬಣ್ಣಿಸಿದ್ದಾರೆ ಮತ್ತು ಆ ತಾಯಿಯ ಈ ನಿರ್ಧಾರಕ್ಕೆ ಎಲ್ಲೆಡೆಯಿಂದಲೂ ಖಂಡನೆ ವ್ಯಕ್ತವಾಗಿದೆ.
ಮಿರರ್ (Mirror) ಮಾಧ್ಯಮ ವರದಿಗಳ ಪ್ರಕಾರ, ಈ ವ್ಯವಹಾರವು ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದು, ಈ ಮಹಿಳೆ ತನ್ನ ಸಂಪರ್ಕ ಮಾಹಿತಿಯನ್ನು ಫೇಸ್ಬುಕ್ ಮೂಲಕ ಸಂಭಾವ್ಯ ಮಗು ಖರೀದಿದಾರರಿಗೆ ಹಂಚಿಕೊಂಡಿದ್ದಾಳೆ. ಆ ಬಳಿಕ ತಾಯಿ ಮತ್ತು ಮಗುವನ್ನು ಖರೀದಿಸಲು ನಿಗದಿಯಾದವರು ಪರಸ್ಪರ ಪ್ರಿಟೋರಿಯಾದ ಮಾಲ್ ಒಂದರಲ್ಲಿ ಭೇಟಿಯಾಗಿದ್ದಾರೆ. ಇಲ್ಲಿ ವ್ಯವಹಾರವನ್ನು ಕುದುರಿಸಿ ಮಗುವನ್ನು ಖರೀದಿದಾರರಿಗೆ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: MYTH FX Studio: ಅರಕೆರೆಯಲ್ಲಿ ಆರಂಭವಾಯಿತು ನಟ ಕಮಲ್ ಸಾರಥ್ಯದ ʼMYTH FXʼ ಸ್ಟುಡಿಯೋ
ಮಗುವನ್ನು ಪಡೆದುಕೊಂಡವರು ಆ ಬಳಿಕ ಅಲ್ಲಿಂದ ಟ್ಯಾಕ್ಸಿಯಲ್ಲಿ ತೆರಳಿದ್ದಾರೆ. ಬಳಿಕ ತಾಯಿ ತನಗಿದ್ದ ಹಣಕಾಸಿನ ಮುಗ್ಗಟ್ಟಿನ ಕಾರಣದಿಂದ ತಾನು ತನ್ನ ಮಗುವನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ತಾನು ಮಾಡಿದ ಈ ಕೃತ್ಯಕ್ಕೆ ಆ ಮಹಾತಾಯಿ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾಳೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದೀಗ ತನ್ನ ಕರುಳ ಕುಡಿಯನ್ನು ಮರಳಿ ಪಡೆಯಲು ಬಯಸಿರುವ ಆ ಮಹಿಳೆ ಈ ಕುರಿತಾಗಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದು, “ನನ್ನ ಮಗುವನ್ನು ಬೆಳೆಸಲು ನನಗೆ ತೀವ್ರ ಹಣಕಾಸಿನ ತೊಂದರೆಗಳಿತ್ತು. ನಾನು ಮಾಡಿದ ಈ ಕಾರ್ಯಕ್ಕೆ ನನಗೆ ಪಶ್ಚಾತ್ತಾಪವುಂಟಾಗಿದೆ, ಇದೀಗ ನನ್ನ ಮಗು ನನಗೆ ಮರಳಿ ಬೇಕು.. ನಾನವನನ್ನು ಪ್ರೀತಿಸುತ್ತೇನೆ..!ʼ ಎಂದು ಅಲವತ್ತುಕೊಂಡಿದ್ದಾಳೆ.
ಇದೀಗ ಮಹಿಳೆಯ ಈ ವ್ಯವಹಾರ ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣವಾಗಿ ಬದಲಾಗಿದ್ದು, ಇದೀಗ ಮಹಿಳೆ ಸಾರ್ವಜನಿಕವಾಗಿ ತನ್ನ ಮಗು ತನಗೆ ಮರಳಿ ಬೇಕೆಂದು ಕೇಳಿರುವುದು ಇನ್ನಷ್ಟು ಕಾನೂನಿನ ಸಮಸ್ಯೆಗಳನ್ನು ಆಕೆಗೆ ಮತ್ತು ಮಗುವನ್ನು ಪಡೆದುಕೊಂಡವರಿಗೆ ಉಂಟಾಗುವ ಸಾಧ್ಯತೆಗಳು ಗೋಚರಿಸಿವೆ. ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣವನ್ನು ತನಿಖೆ ನಡೆಸುವ ಸಾಧ್ಯತೆಗಳೂ ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ.
ಶಿಶು ಮಾರಾಟ ಕಾನೂನು ಬಾಹಿರವಷ್ಟೇ ಅಲ್ಲದೆ ಅನೈತಿಕವೂ ಆಗಿರುವುದರಿಂದ ಇದೀಗ ಈ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದೆ. ಅದಲ್ಲದೇ, ತನ್ನ ಕೈಯಿಂದ ಮಗುವನ್ನು ಖರೀದಿಸಿದವರು ಜೊಹಾನ್ಸ್ ಬರ್ಗ್ ನ ಆರೆಂಜ್ ಫಾರ್ಮ್ ನಲ್ಲಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಅದಲ್ಲದೆ ಈ ಪ್ರಕರಣದಲ್ಲಿ ತಾನು ಬಂಧನಕ್ಕೊಳಗಾಗುವ ಭೀತಿಯೂ ಆ ತಾಯಿಯನ್ನು ಇದೀಗ ಆವರಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
“ನಾನು ನನ್ನ ಮಗುವನ್ನು ಸಾಮಾಜಿಕ ಕಾರ್ಯಕರ್ತರ ವಶಕ್ಕೆ ಒಪ್ಪಿಸಬಹುದಿತ್ತು, ಆದರೆ ನಾನು ತಪ್ಪು ಮಾಡಿಬಿಟ್ಟೆ, ಮತ್ತು ಅದಕ್ಕಾಗಿ ನಾನೀಗ ಮರುಗುತ್ತಿದ್ದೇನೆ ಎಂದು ಹೇಳಿರುವುದಲ್ಲದೇ ತಾನು ಜೈಲು ವಾಸ ಅನುಭವಿಸಬೇಕಾದ ಭೀತಿಯನ್ನೂ ಆ ಮಹಿಳೆ ಹೊರ ಹಾಕಿದ್ದಾಳೆ. ಒಟ್ಟಿನಲ್ಲಿ ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತಿನಂತೆ ತನ್ನದೇ ಕರುಳ ಕುಡಿಯನ್ನು ಹಣದಾಸೆಗೆ ಮಾರಿಬಿಟ್ಟು ಇದೀಗ ಕಾನೂನು ಮತ್ತು ಸಮಾಜದ ಭಯದಿಂದ ತನ್ನ ಮಗು ತನಗೆ ವಾಪಾಸು ಬೇಕೆಂದು ಅಲವತ್ತುಕೊಳ್ಳುತ್ತಿರುವ ಈ ತಾಯಿಯ ಪಾಡು ಆ ʼದೇವರಿಗೇ ಪ್ರೀತಿʼ ಎಂಬಂತಾಗಿದೆ!