Tuesday, 19th November 2024

CBI: ಡೆಪ್ಯೂಟಿ ಕಲೆಕ್ಟರ್ ಹುದ್ದೆಯ ಆಮಿಷ ಒಡ್ಡಿ 45 ಲಕ್ಷ ರೂ. ಲಂಚ ಪಡೆದ ಮಾಜಿ ಐಎಎಸ್ ಅಧಿಕಾರಿಯ ಬಂಧನ

CBI

ರಾಯ್‌ಪುರ: ಡೆಪ್ಯೂಟಿ ಕಲೆಕ್ಟರ್ (Deputy Collector) ಹುದ್ದೆ ನೀಡುವ ಆಮಿಷ ಒಡ್ಡಿ ವ್ಯಕ್ತಿಯೊಬ್ಬರಿಂದ 45 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಛತ್ತೀಸ್‌ಗಢದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ಕೇಂದ್ರ ತನಿಖಾ ದಳ (Central Bureau of Investigation-CBI) ಬಂಧಿಸಿದೆ. ಛತ್ತೀಸ್‌ಗಢದ ಮಾಜಿ ಐಎಎಸ್ ಅಧಿಕಾರಿ ತಮನ್ ಸಿಂಗ್ ಸೋನ್ವಾನಿ (Taman Singh Sonwani) ಬಂಧಿತ ಆರೋಪಿ. ಅವರು ಛತ್ತೀಸ್‌ಗಢದ ಲೋಕಸೇವಾ ಆಯೋಗದ (CGPSC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಯ್‌ಪುರ ಮೂಲದ ಉಕ್ಕು ಕಂಪೆನಿ ಮಾಲೀಕರ ಮಗ ಮತ್ತು ಸೊಸೆಯನ್ನು ಡೆಪ್ಯೂಟಿ ಕಲೆಕ್ಟರ್‌ ಆಗಿ ನೇಮಿಸಲು ಸೋನ್ವಾನಿ 45 ಲಕ್ಷ ರೂ. ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಂಪೆನಿಯ ಮಾಲೀಕ ಶ್ರವಣ್ ಕುಮಾರ್ ಗೋಯಲ್ 20 ಲಕ್ಷ ರೂ. ಮತ್ತು 25 ಲಕ್ಷ ರೂ. ಅನ್ನು 2 ಕಂತುಗಳಲ್ಲಿ ತಮನ್ ಸಿಂಗ್ ಸೋನ್ವಾನಿ ಖಾತೆಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಇಬ್ಬರನ್ನೂ ಸಿಬಿಐ ಬಂಧಿಸಿದೆ.

ಯಾರು ಈ ತಮನ್ ಸಿಂಗ್ ಸೋನ್ವಾನಿ ?

ತಮನ್ ಸಿಂಗ್ ಸೋನ್ವಾನಿ 1991ರಲ್ಲಿ ರಾಜ್ಯ ಆಡಳಿತ ಸೇವೆ (PCS) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2004ರ ಬ್ಯಾಚ್‌ನ ಐಎಎಸ್ (IAS) ಅಧಿಕಾರಿಯಾಗಿ ನೇಮಕಗೊಂಡರು. ಸ್ವಯಂ ನಿವೃತ್ತಿಯನ್ನು (VRS) ಪಡೆದುಕೊಂಡ ಅವರು 2020ರ ಜೂ. 2ರಂದು ಸಿಜಿಪಿಎಸ್‌ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 2023ರ ಸೆಪ್ಟೆಂಬರ್ 8ರ ತನಕ ಈ ಹುದ್ದೆ ನಿರ್ವಹಿಸಿದರು.

ಹಲವು ಆರೋಪ

ಸಿಜಿಪಿಎಸ್‌ಸಿ ನೇಮಕಾತಿಗಳಲ್ಲಿನ ಅಕ್ರಮಗಳಲ್ಲಿ ಸೋನ್ವಾನಿ ಭಾಗಿಯಾಗಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. 2021ರ ರಾಜ್ಯ ಆಡಳಿತ ಸೇವಾ ಪರೀಕ್ಷೆಯ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೂ ಮತ್ತು ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ತಮ್ಮನ್ನು ಆಯ್ಕೆ ಮಾಡಿಲ್ಲ ಎಂದು ಆರೋಪಿಸಿ ಬಲೋಡ್ ಜಿಲ್ಲೆಯ ಅಭ್ಯರ್ಥಿಯೊಬ್ಬರು ದೂರು ದಾಖಲಿಸಿದ್ದರು. ಸೋನ್ವಾನಿ ಅವರ ಮಗ, ಸೋದರಳಿಯ ಮತ್ತು ಇತರ ಸಂಬಂಧಿಕರನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಛತ್ತೀಸ್‌ಗಢ ಸರ್ಕಾರವು ಸಿಜಿಪಿಎಸ್‌ಸಿ ನೇಮಕಾತಿ ಹಗರಣದ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿದೆ. ತನಿಖೆಯ ಬಳಿಕ ಸೋನ್ವಾನಿ ಮತ್ತು ಇತರರನ್ನು ಬಂಧಿಸಲಾಗಿದೆ. ಸೋನ್ವಾನಿ ಅವರ ಅಧಿಕಾರಾವಧಿಯಲ್ಲಿ ಪಿಸಿಎಸ್ ನೇಮಕಾತಿ ಪರೀಕ್ಷೆಯಲ್ಲಿ ಹಲವು ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನೂ ಓದಿ: Fake Doctors: ಆಸ್ಪತ್ರೆ ತೆರೆದು ಜಿಲ್ಲಾಡಳಿತದ ಅಧಿಕಾರಿಗಳ ಹೆಸರನ್ನೇ ಬಳಸಿದ್ದ ನಕಲಿ ವೈದ್ಯರು! ತನಿಖೆಯಿಂದ ಕಳ್ಳಾಟ ಬಯಲು