Tuesday, 19th November 2024

Himanta Biswa Sarma: ಕರೀಂಗಂಜ್‌ ಜಿಲ್ಲೆಯ ಹೆಸರು ಇನ್ನುಮುಂದೆ ಶ್ರೀಭೂಮಿ; ಮರುನಾಮಕರಣ ಮಾಡಿದ ಅಸ್ಸಾಂ ಸರ್ಕಾರ

ದಿಸ್‌ಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ ಅಸ್ಸಾಂ ಸರ್ಕಾರ (Assam government) ಕರೀಂಗಂಜ್‌ (Karimganj) ಜಿಲ್ಲೆಯ ಹೆಸರನ್ನು ಬದಲಾಯಿಸಿದೆ. ಕರೀಂಗಂಜ್‌ ಇನ್ನು ಮುಂದೆ ಶ್ರೀಭೂಮಿ (Sribhumi) ಎಂದು ಗುರುತಿಸಿಕೊಳ್ಳಲಿದೆ. ಮರುನಾಮಕರಣವನ್ನು ಅಸ್ಸಾಂ ಮುಖ್ಯಮಂತ್ರಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (Himanta Biswa Sarma) ಘೋಷಿಸಿದರು.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶರ್ಮ ಅವರು ಮಂಗಳವಾರ (ನ. 19) ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರವೀಂದ್ರನಾಥ ಟ್ಯಾಗೋರ್ ಅವರ ಗೌರವಾರ್ಥ ಮರುನಾಮಕರಣ ಮಾಡಲಾಗಿದೆ. “100 ವರ್ಷಗಳ ಹಿಂದೆ ಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಅಸ್ಸಾಂನ ಆಧುನಿಕ ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ- ಮಾತಾ ಲಕ್ಷ್ಮೀಯ ನಾಡು ಎಂದು ಬಣ್ಣಿಸಿದ್ದಾರೆ. ಇಂದು ಅಸ್ಸಾಂ ಕ್ಯಾಬಿನೆಟ್ ಜನರ ಈ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಜಿಲ್ಲೆಯ ಮರುನಾಮಕರಣದ ಕ್ರಮವು ಜಿಲ್ಲೆಯ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಶರ್ಮ ಹೇಳಿದರು. “ಯಾವುದೇ ಉಲ್ಲೇಖ ಅಥವಾ ಇತರ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲದ ಹೆಸರುಗಳನ್ನು ನಾವು ಬದಲಾಯಿಸುವುದನ್ನು ಮುಂದುವರಿಸುತ್ತೇವೆ. ಇದು ನಿರಂತರ ಪ್ರಕ್ರಿಯೆ” ಎಂದು ಅವರು ಹೇಳಿದರು.

ಇತರ ಪ್ರಮುಖ ತೀರ್ಮಾನಗಳು

ಇದಲ್ಲದೆ ಮುಂದಿನ ವರ್ಷದ ಫೆ. 10ರೊಳಗೆ ಮತದಾನ ಪ್ರಕ್ರಿಯೆ ಮುಗಿಯಲು ಡಿಸೆಂಬರ್ ವೇಳೆಗೆ ಪಂಚಾಯತ್ ಚುನಾವಣೆಯ ಮತದಾರರ ಪಟ್ಟಿಯನ್ನು ಪ್ರಕಟಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಶರ್ಮ ಹೇಳಿದರು. ಮತ್ತೊಂದು ನಿರ್ಧಾರದ ಬಗ್ಗೆ ಮಾತನಾಡಿದ ಅವರು, “2025ರ ಫೆ. 24ರಂದು ಅಸ್ಸಾಂನಲ್ಲಿ ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ ನಡೆಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಅವರು ನಮ್ಮ ಮನವಿಯನ್ನು ಸ್ವೀಕರಿಸಿದ್ದಾರೆ” ಎಂದು ತಿಳಿಸಿದರು. ಮೂಲಸೌಕರ್ಯ ಅಭಿವೃದ್ಧಿಯ ಹೂಡಿಕೆಯ ಮೇಲೆ ಮತ್ತಷ್ಟು ಗಮನ ಹರಿಸಿರುವ ಅಸ್ಸಾಂ ಸರ್ಕಾರ, ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸುವವರನ್ನು ಆಕರ್ಷಿಸಲು ಮುಂಬರುವ ದಿನಗಳಲ್ಲಿ ವಿದೇಶಗಳಲ್ಲಿ ಮತ್ತು ಭಾರತದ ಇತರ ನಗರಗಳಲ್ಲಿ ರೋಡ್ ಶೋಗಳನ್ನು ಆಯೋಜಿಸಲಿದೆ ಎಂದು ಅವರು ವಿವರಿಸಿದರು.

ಕರೀಂಗಂಜ್ ಜಿಲ್ಲೆಯ ಇತಿಹಾಸ

ಕರೀಂಗಂಜ್ ಅನ್ನು 1878ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಸಿಲ್ಹೆಟ್ ಜಿಲ್ಲೆಯ ಅಡಿಯಲ್ಲಿ ಉಪ-ವಿಭಾಗವಾಗಿ ರಚಿಸಲಾಯಿತು. ಕರೀಂಗಂಜ್ ಪಟ್ಟಣವನ್ನು ಉಪ-ವಿಭಾಗದ ಕೇಂದ್ರ ಸ್ಥಳವನ್ನಾಗಿ ಮಾಡಲಾಯಿತು. 1947ರಲ್ಲಿ ಸಿಲ್ಹೆಟ್ ಜಿಲ್ಲೆಯ ಕರೀಂಗಂಜ್ ಉಪವಿಭಾಗದ ಮೂರೂವರೆ ಪೊಲೀಸ್ ಠಾಣೆ ಪ್ರದೇಶ (ರತಾಬಾರಿ, ಬಾದರ್ಪುರ್, ಪಥೇರ್ಕಂಡಿ ಮತ್ತು ಕರೀಂಗಂಗ್‌ನ ಕೆಲವೊಂದು ಭಾಗ)ಗಳನ್ನು ಹೊರತುಪಡಿಸಿ ಉಳಿದವನ್ನು ಬಾಂಗ್ಲಾದೇಶಕ್ಕೆ ವರ್ಗಾಯಿಸಲಾಯಿತು. 1983ರ ಜು. 1ರಂದು ಕರೀಂಗಂಜ್ ಅನ್ನು ಜಿಲ್ಲೆಯಾಗಿ ಘೋಷಿಸಲಾಯಿತು. 2011ರ ಜನಗಣತಿಯ ಪ್ರಕಾರ, ಕರೀಂಗಂಜ್ 1.2 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ: Jain Museum: ಪುಣೆಯಲ್ಲಿ ತೆರೆದಿದೆ ವಿಶ್ವದ ಅತೀ ದೊಡ್ಡ ಜೈನ ವಸ್ತು ಸಂಗ್ರಹಾಲಯ! ಏನೇನು ವಿಶೇಷ?